ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಗೆ ಸಿಬ್ಬಂದಿ ಕೊರತೆ

By Kannadaprabha NewsFirst Published Feb 4, 2021, 7:10 AM IST
Highlights

ವಿದ್ಯಾವಂತ ಯುವಜನರ ನಿಯೋಜನೆಗೆ ಪಾಲಿಕೆ ಚಿಂತನೆ| ಮನೆ-ಮನೆ ಸಮೀಕ್ಷೆ| ಶಾಲೆಯಿಂದ ಹೊರಗುಳಿದ ಮಕ್ಕಳು ಭಿಕ್ಷಾಟನೆ ಮತ್ತು ಬೀದಿ ವ್ಯಾಪಾರಗಳಲ್ಲಿ ತೊಡಗಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಹೈಕೋರ್ಟ್‌ ಸೂಚನೆ| ಎನ್‌ಜಿಒ ಅಡಿಯಲ್ಲಿ ಕೆಲಸ ಮಾಡಲು ಮುಂದೆ ಬಾರದ ಯುವಜನರು| 

ಬೆಂಗಳೂರು(ಫೆ.04): ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಮನೆ-ಮನೆ ಸಮೀಕ್ಷೆ ಕೈಗೊಳ್ಳಲು ಅಗತ್ಯ ಸಿಬ್ಬಂದಿ ಸಿಗದ ಹಿನ್ನೆಲೆಯಲ್ಲಿ ಪ್ರತಿ ವಾರ್ಡ್‌ವಾರು ತಲಾ 10 ವಿದ್ಯಾವಂತ ಯುವಜನರನ್ನು ನಿಯೋಜಿಸಿ, ಅವರಿಗೆ ಮನೆಗಿಷ್ಟು ವೇತನ ನೀಡಿ ಸಮೀಕ್ಷೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಪಾಲಿಕೆ ಶಿಕ್ಷಣ ವಿಭಾಗದ ಸಹಾಯಕ ಆಯುಕ್ತ ನಾಗೇಂದ್ರ ನಾಯ್ಕ್‌ ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳು ಭಿಕ್ಷಾಟನೆ ಮತ್ತು ಬೀದಿ ವ್ಯಾಪಾರಗಳಲ್ಲಿ ತೊಡಗಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಹೈಕೋರ್ಟ್‌ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕೊಳೆಗೇರಿ, ಕಾರ್ಮಿಕರ ವಾಸ ಸ್ಥಳ ಹಾಗೂ ಹೊರ ವಲಯದಲ್ಲಿ ಬಿಡಾರಗಳಲ್ಲಿ ವಾಸವಾಗಿರುವ ಕುಟುಂಬಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ಮನೆ-ಮನೆ ಸಮೀಕ್ಷೆ ನಡೆಸಲು ಬಿಬಿಎಂಪಿ ಮುಂದಾಗಿತ್ತು. ಅದಕ್ಕಾಗಿ, ಸ್ಥಳೀಯ ಸ್ವಯಂ ಸೇವಾ ಸಂಘ ಸಂಸ್ಥೆಗಳು, ಎನ್‌ಜಿಒ ಹಾಗೂ ಸಮೀಕ್ಷೆಗೆ ಆಸಕ್ತಿ ಉಳ್ಳವರಿಂದ ಜ.22ರ ಒಳಗಾಗಿ ಪಾಲಿಕೆ ವಿದ್ಯಾಧಿಕಾರಿ ಅವರನ್ನು ಸಂಪರ್ಕಿಸಿ ನೋಂದಣಿ ಮಾಡಿಸಲು ಆಹ್ವಾನ ನೀಡಲಾಗಿತ್ತು. ಈವರೆಗೆ ಯಾರೊಬ್ಬರೂ ಸಮೀಕ್ಷೆಗೆ ಮುಂದೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಿಎ ಪರೀಕ್ಷೆಯಲ್ಲಿ ಗದುಗಿನ ಆದಿತ್ಯ ರಾಜ್ಯಕ್ಕೆ ಪ್ರಥಮ!

ಕೆಲವು ಸಂಸ್ಥೆಗಳಿಗೆ ಕರೆ ಮಾಡಿ ವಿಚಾರಿಸಿದಾಗ ಕೊಳೆಗೇರಿ ಪ್ರದೇಶ ಹಾಗೂ ಕಾರ್ಮಿಕರ ವಾಸ ಸ್ಥಳಗಳಿಗೆ ಹೋಗಿ ಸಮೀಕ್ಷೆ ಮಾಡಲು ಕೋವಿಡ್‌ ಸೋಂಕಿನ ಭಯವಿದೆ. ಜತೆಗೆ ಎನ್‌ಜಿಒ ಅಡಿಯಲ್ಲಿ ಕೆಲಸ ಮಾಡಲು ಯುವಜನರು ಮುಂದೆ ಬರುತ್ತಿಲ್ಲ ಎಂದು ಕಾರಣ ನೀಡುತ್ತಿದ್ದಾರೆ. ಹೀಗಾಗಿ, ವಿದ್ಯಾವಂತ ಯುವಜನರನ್ನು ನಿಯೋಜಿಸಿ ಸಮೀಕ್ಷೆ ನಡೆಸುವ ಸಂಬಂಧ ಆಯುಕ್ತರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
 

click me!