* ನೆಪ ಹೇಳಬೇಡಿ, ಅಗತ್ಯ ಮುಂಜಾಗ್ರತಾ ಕ್ರಮ ಅನುಸರಿಸಿ
* ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಪರೀಕ್ಷೆ ನಡೆಸಬೇಕು
* ಮಕ್ಕಳ ಆರೋಗ್ಯದ ಜತೆಗೆ ಅವರ ಭವಿಷ್ಯದ ಬಗ್ಗೆ ನಾವು ವಿಚಾರ ಮಾಡಬೇಕು
ಕುಷ್ಟಗಿ(ಜೂ.03): ರಾಜ್ಯ ಸರ್ಕಾರ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸಲೇಬೇಕು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಒತ್ತಾಯಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಕಳೆದ ಬಾರಿ ಕೋವಿಡ್-19 ಸಂದರ್ಭದಲ್ಲಿಯೇ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಗಳನ್ನು ಎಲ್ಲ ಮುಂಜಾಗ್ರತಾ ಕ್ರಮಗಳೊಂದಗೆ ನಡೆಸಲಾಗಿತ್ತು. ಈ ಬಾರಿಯೂ ನಡೆಯಬೇಕು. ಈ ಕುರಿತು ರಾಜ್ಯ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.
ಈ ಬಾರಿ ಆನ್‌ಲೈನ್ ಶಿಕ್ಷಣದಿಂದ ಮಕ್ಕಳಿಗೆ ಹಿನ್ನಡೆಯಾಗಿದೆ. ಹಾಗಾಗಿ ಸರ್ಕಾರ ಯಾವುದೇ ನೆಪಗಳನ್ನು ಹೇಳದೆ ಕಡ್ಡಾಯವಾಗಿ ಮಕ್ಕಳಿಗೆ ಪರೀಕ್ಷೆ ನಡೆಸಲೇಬೇಕು. ಇದಕ್ಕಾಗಿ ಕಳೆದ ಬಾರಿ ಯಾವ ರೀತಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತೋ ಅದೇ ರೀತಿ ಈ ಬಾರಿಯೂ ಆಗಲಿ. ಅಂತೂ ಸರ್ಕಾರ ಮಕ್ಕಳ ಪರೀಕ್ಷೆಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಮುಂದುವರೆದ SSLC, PUC ಪರೀಕ್ಷೆ ಗೊಂದಲ: ಶಿಕ್ಷಣ ಸಚಿವರಿಂದ ಹೊರಬಿತ್ತು ಮಹತ್ವದ ಸ್ಪಷ್ಟನೆ
ಇಲ್ಲಿನ ಕೆಲವು ಹಿರಿಯ ಶಿಕ್ಷಕರು ಹಾಗೂ ಶಾಲಾ ಮುಖ್ಯಸ್ಥರೊಂದಿಗೆ ಈಗಾಗಲೇ ನಾನು ಚರ್ಚಿಸಿದ್ದೇನೆ. ಅವರು ಸಹ ಪರೀಕ್ಷೆ ನಡೆಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಪರೀಕ್ಷೆ ಸಮಯದಲ್ಲಿ ಮಕ್ಕಳ ಶಾಲೆಗೆ ಕರೆತರುವ ಕುರಿತು, ಅಗತ್ಯ ವಾಹನದ ವ್ಯವಸ್ಥೆ ಕುರಿತು ಸಹ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಣ ಸಂಸ್ಥೆ ಮುಖ್ಯಸ್ಥರ ಜತೆ ಚರ್ಚಿಸಿದ್ದೇನೆ ಎಂದರು. ಪರೀಕ್ಷಾ ಕೊಠಡಿಯಲ್ಲೂ ಎಲ್ಲ ಸುರಕ್ಷತಾ ಕ್ರಮ ಅನುಸರಿಸಬೇಕು. ಕೊರೋನಾ ಸೋಂಕಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು ಎಂದರು.
ಇತ್ತೀಚೆಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳ ಪರೀಕ್ಷೆಗಿಂತ ಅವರ ಆರೋಗ್ಯ ಮುಖ್ಯ ಎಂದು ಹೇಳಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಸರ್ಕಾರ ಪರೀಕ್ಷೆ ನಡೆಸಬೇಕು. ಇದರಲ್ಲಿ ಶಿಕ್ಷಣ ಇಲಾಖೆ, ಶಿಕ್ಷಕರು ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿ ಇದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಸಾಧ್ಯ. ಮಕ್ಕಳ ಆರೋಗ್ಯದ ಜತೆಗೆ ಅವರ ಭವಿಷ್ಯದ ಬಗ್ಗೆ ನಾವು ವಿಚಾರ ಮಾಡಬೇಕಾಗುತ್ತದೆ ಎಂದರು.
ಇದಕ್ಕೂ ಪೂರ್ವದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ, ವಿವಿಧ ಶಾಲೆಯ ಮುಖ್ಯಸ್ಥರೊಂದಿಗೆ ಕೆಲಕಾಲ ಈ ಕುರಿತು ಚರ್ಚೆ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶೇಖರಗೌಡ ಮಾಲಿಪಾಟೀಲ್, ದೊಡ್ಡಯ್ಯ ಗದ್ದಡಕಿ, ಬಿ.ಎಂ. ಕಂಬಳಿ, ಎಸ್.ವಿ. ಡಾಣಿ ಇದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona