ಬಹಳ ಒಳ್ಳೇವ್ರು ಕುಂದಾಪುರದ ಈ ಮಿಸ್ಸು; ಹೊಡೆಯಲ್ಲ, ಶಿಕ್ಷೆ ಕೊಡಲ್ಲ, ರಜೆ ಹಾಕಲ್ಲ: ಎಲ್ಲದಕ್ಕೂ ಎಸ್ಸೆಸ್ಸು

Published : Apr 16, 2026, 12:57 PM IST
AI Teacher

ಸಾರಾಂಶ

ಕುಂದಾಪುರದ ವಂಡ್ಸೆ ಸರ್ಕಾರಿ ಶಾಲೆಯು 'ಐರಿಸ್' ಎಂಬ ಕೃತಕ ಬುದ್ಧಿಮತ್ತೆಯ ರೋಬೋಟ್ ಶಿಕ್ಷಕಿಯನ್ನು ಪರಿಚಯಿಸಿದೆ. 'ಅಟಲ್ ಟಿಂಕರಿಂಗ್ ಲ್ಯಾಬ್' ಯೋಜನೆಯಡಿ ನಿರ್ಮಿಸಲಾದ ಈ ರೋಬೋಟ್, 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸಂವಹನ ನಡೆಸಬಲ್ಲದು ಮತ್ತು ವಿದ್ಯಾರ್ಥಿಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಶಿಕ್ಷಣದಲ್ಲಿ ಕ್ರಾಂತಿ ಮೂಡಿಸುತ್ತಿದೆ.

ಬಹಳ ಒಳ್ಳೇವ್ರು ನಮ್​ ಮಿಸ್ಸು, ಎಲ್ಲಾದಕ್ಕೂ ಎಸ್​ಎಸ್ಸು ಎನ್ನೋ ಫೇಮಸ್ ಹಾಡಿದೆ. ಆದರೆ ಇಂದು ಶಾಲೆಯ ಮಿಸ್ಸು ಎಂದರೆ ಹೆದರಿಕೊಳ್ಳುವ ಮಕ್ಕಳು ಸಾಕಷ್ಟು ಮಂದಿ ಇದ್ದಾರೆ. ಹೋಂವರ್ಕ್​ ಮಾಡದಿದ್ದರೆ, ಸರಿಯಾಗಿ ಮಾರ್ಕ್ಸ್​ ತೆಗೆಯದಿದ್ದರೆ, ಶಾಲೆಯಲ್ಲಿ ತರ್ಲೆ ಮಾಡಿದರೆ, ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚಿಗೆ ಪ್ರಶ್ನೆ ಕೇಳಿದರೆ... ಹೀಗೆ ಯಾವ್ಯಾವುದಕ್ಕೋ ಪನಿಷ್​ಮೆಂಟ್​ ಕೊಡೋ ಮಿಸ್ಸುಗಳು ಬಹಳಷ್ಟು ಇದ್ದಾರೆ. ಇದು ಮಿಸ್ಸುಗಳು ಮಾತ್ರವಲ್ಲ, ಬಹುತೇಕ ಎಲ್ಲಾ ಶಿಕ್ಷಕರೂ ಹೀಗೆಯೇ ಮಾಡ್ತಾರೆ. ಆದರೆ ಕುಂದಾಪುರದ ಸರ್ಕಾರಿ ಶಾಲೆಯಲ್ಲಿನ ಈ ಮಿಸ್ಸು ಮಾತ್ರ ಎಲ್ಲದಕ್ಕೂ ವಿರುದ್ಧ. ಮೇಲಾಗಿ ರಜೆಯಂತೂ ಹಾಕೋದೇ ಇಲ್ಲ. ಕೇಳೋ ಪ್ರಶ್ನೆಗಳಿಗೆಲ್ಲವೂ ಈಕೆಯ ಬಳಿ ಉತ್ತರ ಇದೆ.

ಐರಿಸ್​ ಮಿಸ್ಸು

ಈ ಮಿಸ್ಸು ಬೇರೆ ಯಾರೂ ಅಲ್ಲ, ಬದಲಿಗೆ ಎಐ ರೋಬೋಟ್ ಮಿಸ್ಸು ಈಕೆ. ಹೆಸರು ಐರಿಸ್​. ಇದಾಗಲೇ ಎಐ ಎಲ್ಲಾ ಕ್ಷೇತ್ರಗಳಲ್ಲಿಯೂ ಕ್ರಾಂತಿ ಉಂಟು ಮಾಡುತ್ತಿದೆ. ಇದಾಗಲೇ ಹಲವಾರು ಕಂಪೆನಿಗಳಲ್ಲಿ ಎಐದ್ದೇ ಪಾರುಪತ್ಯ. ಹಲವರು ಇದೇ ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದಾರೆ. ಸಾಫ್ಟ್​ವೇರ್​ ಕ್ಷೇತ್ರದಲ್ಲಂತೂ ದಿಗ್ಗಜ ಐಟಿ ಕಂಪೆನಿಗಳಿಗೆ ಒಂದೇ ಸಲಕ್ಕೆ ಹತ್ತಾರು ಸಾವಿರದಷ್ಟು ಉದ್ಯೋಗಿಗಳನ್ನು ಮನೆಗೆ ಕಳಿಸುತ್ತಲೇ ಇದೆ. ಇದೀಗ ಈ ಎಐ ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟಿದೆ. ಇಲ್ಲಿಯೂ ಕ್ರಾಂತಿ ಮಾಡುತ್ತಿದೆ. ಕುಂದಾಪುರ ತಾಲೂಕಿನ ‘ವಂಡ್ಸೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ’ ರಾಜ್ಯದಲ್ಲೇ ಮೊದಲ ಬಾರಿಗೆ 'ಐರಿಸ್' (Iris) ಎಂಬ ಕೃತಕ ಬುದ್ಧಿಮತ್ತೆ ಹೊಂದಿರುವ ಶಿಕ್ಷಕಿ ಪರಿಚಯವಾಗಿದೆ. ಸರ್ಕಾರಿ ಶಾಲೆಯಾಗಿರುವ ಈ ಶಾಲೆಗೆ ಹೋದರೆ ನಿಮಗೆ ಅಲ್ಲಿ ಸ್ವಾಗತಿಸುವುದೇ ಈ ಶಿಕ್ಷಕಿ.

 

ಯಾರೀ ಐರಿಸ್​?

‘ನೀತಿ ಆಯೋಗ’ದ ‘'ಅಟಲ್ ಟಿಂಕರಿಂಗ್ ಲ್ಯಾಬ್' (Atal Tinkering Lab) ಯೋಜನೆಯಡಿ ಈ ರೋಬೋ ನಿರ್ಮಿಸಲಾಗಿದೆ. ‘ಮೇಕರ್ ಲ್ಯಾಬ್ಸ್ ಎಜುಟೆಕ್ ಪ್ರೈವೇಟ್ ಲಿಮಿಟೆಡ್‌’ನ ತಾಂತ್ರಿಕ ಸಹಯೋಗದೊಂದಿಗೆ ಇದನ್ನು ರೂಪಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿಯೂ ಹೆಚ್ಚಿನ ಗುಣಮಟ್ಟದ ಶಿಕ್ಷಣ ನೀಡಬೇಕು, ಮಕ್ಕಳಿಗೆ ಎಲ್ಲಾ ರೀತಿಯ ತಿಳಿವಳಿಕೆ ಸಿಗಬೇಕು. ಮಕ್ಕಳು ಮುಂದೆ ಬರಬೇಕು ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರಿಗೆ ಮಾದರಿಯಾಗಬೇಕು ಎನ್ನುವ ನಿಟ್ಟಿನಲ್ಲಿ, ಸಾಂಪ್ರದಾಯಿಕ ಬೋಧನಾ ವಿಧಾನಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಮತ್ತು ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಜಾಗತಿಕ ಮಟ್ಟಕ್ಕೇರಿಸುವ ಗುರಿಯನ್ನು ಹೊಂದಿರುವ ನಿಟ್ಟಿನಲ್ಲಿ ಈ ಶಿಕ್ಷಕಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.

20 ಭಾಷೆಗಳಲ್ಲಿ ಸಂವಹನ

ಇದಾಗಲೇ ಕೇರಳದ ತಿರುವನಂತಪುರಂನಲ್ಲಿರುವ ಕೆಟಿಸಿಟಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮೊದಲು ಯಶಸ್ವಿಯಾಗಿ ಅನಾವರಣಗೊಂಡಿದ್ದ ಈ ತಂತ್ರಜ್ಞಾನ, ಇದೀಗ ಕರ್ನಾಟಕಕ್ಕೆ ಬಂದಿದೆ. ಅಂದಹಾಗೆ ಈ ಶಿಕ್ಷಕಿ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಮಾತನಾಡ್ತಾಳೆ. ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಬಹುತೇಕ ಎಲ್ಲಾ ಭಾಷೆಗಳೂ ಈಕೆಗೆ ಗೊತ್ತು. ಸಾಮಾನ್ಯವಾಗಿ ಕೆಲವೊಮ್ಮೆ ವಿದ್ಯಾರ್ಥಿಗಳು ಪ್ರಶ್ನೆ ಕೇಳಿದಾಗ, ಶಿಕ್ಷಕರಿಗೆ ಉತ್ತರ ಗೊತ್ತಿಲ್ಲದಿದ್ದರೆ, ಹೆಚ್ಚಿನ ಮಂದಿ ಗದರುವುದೇ ಹೆಚ್ಚು, ಪ್ರಶ್ನೇ ಕೇಳುವುದೇ ತಪ್ಪು ಎಂಬಂತೆ ಮಾಡುತ್ತಾರೆ, ತಮಗೆ ಉತ್ತರ ಗೊತ್ತಿಲ್ಲ ಎಂದು ಹೇಳಿದರೆ ಮಕ್ಕಳ ಎದುರು ಮರ್ಯಾದೆ ಹೋಗುತ್ತದೆ ಎಂದು ಪ್ರಶ್ನೆಕೇಳುವ ಮಕ್ಕಳ ಗುಣಗಳನ್ನೇ ದಮನ ಮಾಡುವವರು ಇದ್ದಾರೆ. ಆದರೆ ಈ ಮಿಸ್ಸು ಹಾಗಲ್ಲ. ವಿದ್ಯಾರ್ಥಿಗಳು ಕೇಳುವ ಪಠ್ಯಕ್ಕೆ ಸಂಬಂಧಿಸಿದ ಯಾವುದೇ ಕಠಿಣ ಪ್ರಶ್ನೆಗಳಿಗೂ ಉತ್ತರಿಸುತ್ತಾಳೆ.

ಮಕ್ಕಳಿಗೆ ಆಪ್ತ

ತರಗತಿಗೆ ಬಂದ ತಕ್ಷಣ ಮಕ್ಕಳೊಂದಿಗೆ ಶೇಕ್​ ಹ್ಯಾಂಡ್​ ಮಾಡಿ ಮಕ್ಕಳ ಕಲಿಕಾ ಅನುಭವವನ್ನು ಆಪ್ತವಾಗಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಸುಮಾರು 3.50 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ರೋಬೋಟ್ ಸಿದ್ಧಗೊಂಡಿದ್ದು, ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳ ಸಹಕಾರ ನೀಡಿದ್ದಾರೆ. ಇದು ಪೂರ್ಣ ವಿದ್ಯುತ್‌ ಚಾಲಿತವಾಗಿದ್ದು ಶಾಲೆಯಲ್ಲಿ ಸೋಲಾರ್‌ ಇರುವ ಕಾರಣ ಸಮಸ್ಯೆ ಇಲ್ಲ ಅಂತಾರೆ ನಿರ್ವಾಹಕರು, ಇನ್ನು ಒಂದು ಡಿವೈಸ್‌ ಅನ್ನು ಕೈಯಲ್ಲಿ ಹಿಡಿದು ಮಕ್ಕಳು ಪ್ರಶ್ನೆ ಕೇಳಬೇಕಾಗುತ್ತದೆ. ಅದಕ್ಕೆ ರೋಬೋ ಉತ್ತರಿಸುತ್ತದೆ. ಒಂದು ಸಮಯಕ್ಕೆ ಒಬ್ಬರೇ ಪ್ರಶ್ನಿಸಬೇಕು, ಮಕ್ಕಳು ಕೇಳಿದ ಪ್ರಶ್ನೆಗೆ ಉತ್ತರಗಳು ಇಮೀಡಿಯಟ್‌ ಆಗಿ ಸ್ಮಾರ್ಟ್‌ ಬೋರ್ಡ್‌ ಮೇಲೆ ಡಿಸ್ಪ್ಲೈ ಆಗೋದು ಮತ್ತೊಂದು ವಿಶೇಷ.

PREV
Read more Articles on
click me!

Recommended Stories

ತಮಿಳುನಾಡು ಸಿಎಂ ಆಗಲಿರುವ ವಿಜಯ್‌ 10ನೇ ಕ್ಲಾಸ್‌ ಮಾರ್ಕ್ಸ್‌ ಕಾರ್ಡ್‌ ವೈರಲ್‌, ಗಣಿತದಲ್ಲಿ ವೀಕು, ಈ ವಿಷಯದಲ್ಲಿ ಟಾಪ್‌
ಹಾಸ್ಟೆಲ್‌ ಸೀಲಿಂಗ್‌ ಫ್ಯಾನ್‌ಗೆ ಕಬ್ಬಿಣದ ಪಂಜರ ಹಾಕಿದ್ರು; ಕೇಕೆ ಹಾಕಿ ನಕ್ಕ ಕೆಲವರು; ಆದರೆ ಉದ್ದೇಶ ಬೇರೆ ಐತಿ