ಪ್ರತಿ ವರ್ಷ 2.11 ಲಕ್ಷ ಶುಲ್ಕ ಭರಿಸಲಾಗದೇ MBBS ಅರ್ಧಕ್ಕೆ ನಿಲ್ಲಿಸಿದ ಕೊಪ್ಪಳ ಯುವತಿ!

Kannadaprabha News   | Kannada Prabha
Published : Oct 29, 2026, 05:55 AM IST
Koppal Farmers Daughter Savita Discontinues MBBS Midway

ಸಾರಾಂಶ

ಕೊಪ್ಪಳ ತಾಲೂಕಿನ ವದಗನಾಳ ಗ್ರಾಮದ ಬಡ ರೈತ ಶರಣಪ್ಪ ಅವರ ಪುತ್ರಿ ಸವಿತಾ, ಕಠಿಣ ಪರಿಶ್ರಮದಿಂದ ನೀಟ್ ಪರೀಕ್ಷೇಲಿ ಉತ್ತಮ ಅಂಕ ಗಳಿಸಿ ಮೈಸೂರಿನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆದಿದ್ದರು. ಆದರೆ ಶುಲ್ಕ ಪಾವತಿಸಲಾಗದೆ ಅರ್ಧಕ್ಕೆ ನಿಲ್ಲಿಸಲಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ (ಅ.29): ‘ನನ್ನಿಂದ ಮಗಳನ್ನು ಓದಿಸಲು ಸಾಧ್ಯವೇ ಇಲ್ಲ. ಆಕೆ ಓದಿ ಡಾಕ್ಟರ್ ಆಗಬಹುದು. ಆದರೆ, ಅಷ್ಟೊಂದು ಶುಲ್ಕ ಪಾವತಿಸಲು ನಮ್ಮಿಂದ ಆಗುವುದಿಲ್ಲ. ಧೈರ್ಯ ಮಾಡಿ ಪ್ರವೇಶ ಕೊಡಿಸಿದ್ದೆವು, ಈಗ ಖರ್ಚು ಭರಿಸಲಾಗದೆ ವಾಪಸ್ ಕರೆಸಿಕೊಂಡಿದ್ದೇವೆ ಎಂದು ಕೊಪ್ಪಳ ತಾಲೂಕಿನ ವದಗನಾಳ ಗ್ರಾಮದ ಎಂಬಿಬಿಎಸ್ ವಿದ್ಯಾರ್ಥಿನಿ ಸವಿತಾ ಅವರ ತಂದೆ ಶರಣಪ್ಪ ಅವರು ನೋವು ತೋಡಿಕೊಂಡಿದ್ದಾರೆ.

ಮಗಳ ಕನಸಿಗೆ ಬಡತನ ಅಡ್ಡಗೋಡೆ

ಮಗಳು ವೈದ್ಯೆಯಾಗಬೇಕು ಎಂಬ ಕನಸು ನನಸಾಗುವ ಹೊತ್ತಿಗೆ ಬಡತನ ಅಡ್ಡಗೋಡೆಯಾಗಿ ನಿಂತಿದೆ. ಪ್ರತಿಭೆ, ಪರಿಶ್ರಮದಿಂದ ವೈದ್ಯಕೀಯ ಸೀಟು ಪಡೆದರೂ, ಶುಲ್ಕ ಪಾವತಿಸಲಾಗದೆ ಓದು ಮುಂದುವರಿಸಲಾಗದ ಸಂಕಷ್ಟಕ್ಕೆ ಈ ಕುಟುಂಬ ಸಿಲುಕಿದೆ.

ನೀಟ್‌ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದ ಸವಿತಾ

ಸವಿತಾ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿಯೇ ಪೂರೈಸಿದ್ದಾರೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ. 94ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ನೀಟ್ ಪರೀಕ್ಷೆಯಲ್ಲಿ 481 ಅಂಕಗಳನ್ನು ಪಡೆದು, ಮೈಸೂರಿನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಗಿಟ್ಟಿಸಿಕೊಂಡಿದ್ದಾರೆ. ಆದರೆ ಈಗ ವೈದ್ಯಕೀಯ ಶಿಕ್ಷಣದ ಶುಲ್ಕ ಹಾಗೂ ಇತರ ಖರ್ಚುಗಳನ್ನು ಭರಿಸುವುದು ಹೇಗೆ ಎಂಬ ಚಿಂತೆ ಕುಟುಂಬವನ್ನು ಕಾಡತೊಡಗಿದೆ.

ಇರೋದು ಒಂದು ಎಕರೆ ಜಮೀನು, ವರ್ಷಕ್ಕೆ 2.11 ಲಕ್ಷ ಫೀ!

ಶರಣಪ್ಪ ಕುಟುಂಬಕ್ಕೆ ಇರುವುದು ಕೇವಲ 1 ಎಕರೆ ಜಮೀನು. ಸವಿತಾ ಸೇರಿದಂತೆ ಮೂವರು ಮಕ್ಕಳಿದ್ದಾರೆ. ವೈದ್ಯಕೀಯ ಸೀಟು ಕೈತಪ್ಪಬಾರದು ಎಂಬ ಕಾರಣಕ್ಕೆ ಸಾಲ ಮಾಡಿ, ಪರಿಚಯಸ್ಥರ ಬಳಿ ಹಣ ಹೊಂದಿಸಿ ಮಗಳನ್ನು ಕಾಲೇಜಿಗೆ ಸೇರಿಸಿದ್ದರು. ಆದರೆ, ಪ್ರತಿ ವರ್ಷ 2.11 ಲಕ್ಷ ರು.ನಂತೆ ಒಟ್ಟು 9.91 ಲಕ್ಷ ರು. ಪಾವತಿಸಬೇಕಾದ ಪರಿಸ್ಥಿತಿ ಕುಟುಂಬಕ್ಕೆ ದೊಡ್ಡ ಹೊರೆಯಾಗಿದೆ. ಹಣ ಹೊಂದಿಸಲು ಸಾಧ್ಯವಾಗದೆ ಕೊನೆಗೆ ಸವಿತಾಳನ್ನು ಕಾಲೇಜಿನಿಂದ ವಾಪಸ್ ಕರೆಸಿಕೊಂಡಿದ್ದಾರೆ.

ಕೃಷಿಯಿಂದ ಸಾಕಷ್ಟು ಆದಾಯವಿಲ್ಲದ ಕಾರಣ ಕೂಲಿ ಕೆಲಸ ಮಾಡಿಯೇ ಕುಟುಂಬ ನಿರ್ವಹಿಸಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಗಳ ವೈದ್ಯಕೀಯ ಶಿಕ್ಷಣದ ವೆಚ್ಚ ಭರಿಸುವುದು ಅಸಾಧ್ಯವಾಗಿದೆ.

PREV
Read more Articles on
click me!

Recommended Stories

ಪದವೀಧರರಿಗೆ ಬಿಗ್ ಆಫರ್: 6 ತಿಂಗಳ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಆಡಿಟ್ ಕೋರ್ಸ್ ಆರಂಭಿಸಿದ ಸಹಕಾರ ಮಹಾಮಂಡಳ
ತಲೆ ಬೋಳಿಸಿದ್ರೂ, ಕಣ್ಣೀರಿಟ್ಟರೂ ಪ್ರಯೋಜನವೇ ಇಲ್ಲ: ಸಾಯೋವರೆಗೂ ಮುಷ್ಕರ- ಕೇರಳಂನಲ್ಲಿ ಪ್ರತಿಭಾನ್ವಿತರ ಪ್ರತಿಭಟನೆ