
KEA B.Ed Admission 2026 Registration: ಸರ್ಕಾರದ ಆದೇಶದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಇದೇ ಮೊದಲ ಬಾರಿಗೆ 2026-27ನೇ ಸಾಲಿನ ಬಿ.ಇಡಿ ಕೋರ್ಸು ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದ್ದು(Applications for admission to the B.Ed course 2026-27), ನ.30 ಅರ್ಜಿ ಸಲ್ಲಿಕೆಗೆ ಕೊನೆಯ ದಿನ. ಪ್ರವೇಶ ಪರೀಕ್ಷೆ ಇಲ್ಲದೆ ಪದವಿಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಕೌನ್ಸೆಲಿಂಗ್ ಮೂಲಕ ಸೀಟು ಹಂಚಿಕೆ ನಡೆಯಲಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿರುವ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶನ ಎಚ್.ಪ್ರಸನ್ನ ಅವರು, ಸರ್ಕಾರಿ, ಅನುದಾನಿತ, ಅನುದಾನ ರಹಿತ ಬಿ.ಇಡಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಬಿ.ಇಡಿ ಸೀಟುಗಳಿಗೆ ಈ ಕೌನ್ಸೆಲಿಂಗ್ ನಡೆಸಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನ.30ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕ ಪಾವತಿಗೆ ಡಿ.2 ಕೊನೆಯ ದಿನ. ಯಾವುದೇ ಪ್ರವೇಶ ಪರೀಕ್ಷೆ ಇರುವುದಿಲ್ಲ. ಬದಲಿಗೆ ಪದವಿ ಅರ್ಹತಾ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳನ್ನು ಗಣನೆಗೆ ತೆಗೆದುಕೊಂಡು ಸೀಟು ಹಂಚಿಕೆ ಮಾಡಲಾಗುತ್ತದೆ ಎಂದಿದ್ದಾರೆ.
ಎಂಜಿನಿಯರಿಂಗ್ ಸೇರಿ ಇತರ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಪ್ರಾಧಿಕಾರ ಅಳವಡಿಸಿಕೊಂಡಿರುವ ಮಾನದಂಡಗಳ ಪ್ರಕಾರ ಬಿ.ಇಡಿ ಕೋರ್ಸ್ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ವಿವರಗಳಿಗೆ ವೆಬ್ ಸೈಟ್ ನಲ್ಲಿನ ಮಾಹಿತಿ ಪುಸ್ತಕ ನೋಡಲು ಸೂಚಿಸಿದ್ದಾರೆ.
ಕಲಬುರಗಿ ಪ್ರೌಢಶಾಲಾ ಸಹಶಿಕ್ಷಕರಿಂದ ಮುಖ್ಯಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂಬ ಶಿಕ್ಷಕರ ಬಹುದಿನಗಳ ಬೇಡಿಕೆಗೆ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿಯವರು ನಡೆಸಿದ ನಿರಂತರ ಪ್ರಯತ್ನದ ಫಲವಾಗಿ ಈಗ ಮಹತ್ವದ ಸ್ಪಂದನೆ ದೊರೆತಿದೆ.ಕಳೆದ ಹಲವು ವರ್ಷಗಳಿಂದ ಮುಖ್ಯಶಿಕ್ಷಕರ ಹುದ್ದೆಯ ಬಡ್ತಿಗಾಗಿ ಅರ್ಹ ಶಿಕ್ಷಕರು ಕಾಯುತ್ತಿದ್ದರು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಶಶೀಲ್ ಜಿ. ನಮೋಶಿಯವರು ಶಿಕ್ಷಕರ ಪರವಾಗಿ ನಿರಂತರವಾಗಿ ಧ್ವನಿ ಎತ್ತಿ, ಶಾಲಾ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಬಡ್ತಿ ಪ್ರಕ್ರಿಯೆ ಶೀಘ್ರವಾಗಿ ಪೂರ್ಣಗೊಳಿಸುವಂತೆ ವೈಯಕ್ತಿಕ ಮುತುವರ್ಜಿ ವಹಿಸಿ ಒತ್ತಾಯಿಸಿದ್ದರು.
ಶಿಕ್ಷಕರ ಈ ಬಹುದಿನಗಳ ಬೇಡಿಕೆ ಕೇವಲ ಮನವಿಗೆ ಸೀಮಿತವಾಗದೆ ಕಾರ್ಯರೂಪಕ್ಕೆ ಬರಬೇಕು ಎಂಬ ಉದ್ದೇಶದಿಂದ ಇಲಾಖೆಯ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯುವ ಮೂಲಕ ಬಡ್ತಿ ಪ್ರಕ್ರಿಯೆಗೆ ವೇಗ ನೀಡಲು ಶಶೀಲ್ ಜಿ. ನಮೋಶಿಯವರು ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು.
ಅವರ ನಿರಂತರ ಪ್ರಯತ್ನಗಳ ಫಲವಾಗಿ ಕಲಬುರಗಿ ವಿಭಾಗದ ಅಪರ ಆಯುಕ್ತರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯವರು ನ.17ರಂದು ಆದೇಶ ಹೊರಡಿಸಿದ್ದು, ಅದರಂತೆ ನ.23ರಂದು ಬೆಳಗ್ಗೆ 11:30 ಗಂಟೆಗೆ ಕಲಬುರಗಿಯ ಕ್ಷೇತ್ರ ಆಯುಕ್ತರ ಕಚೇರಿಯಲ್ಲಿ ಬಡ್ತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸ್ಥಳ ಆಯ್ಕೆ ಕೌನ್ಸೆಲಿಂಗ್ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.
ಶಿಕ್ಷಕರ ಸಮಸ್ಯೆಗಳನ್ನು ಕೇವಲ ಆಲಿಸುವುದಷ್ಟೇ ಅಲ್ಲದೆ, ಅವುಗಳ ಪರಿಹಾರಕ್ಕಾಗಿ ನಿರಂತರವಾಗಿ ಪ್ರಯತ್ನಿಸಿದಾಗ ಸಕಾರಾತ್ಮಕ ಫಲಿತಾಂಶ ದೊರೆಯುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಶಿಕ್ಷಕರ ಹಿತಾಸಕ್ತಿಯೇ ತಮ್ಮ ಆದ್ಯತೆಯಾಗಿದ್ದು, ಶಿಕ್ಷಕರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಸದಾ ಬದ್ಧನಾಗಿದ್ದೇನೆ ಎಂದು ಶಶೀಲ್ ನಮೋಶಿಯವರು ತಿಳಿಸಿದ್ದಾರೆ. ಬಹುದಿನಗಳಿಂದ ಬಡ್ತಿಗಾಗಿ ಕಾಯುತ್ತಿದ್ದ ಅರ್ಹ ಶಿಕ್ಷಕರಿಗೆ ಈ ಪ್ರಮುಖ ಬೆಳವಣಿಗೆ ಹೊಸ ಭರವಸೆ ಮೂಡಿಸಿದೆ.