
ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ಯುಜಿಸಿಇಟಿ (UGCET) ಮೊದಲ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆಯ (Provisional Seat Allotment) ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಪ್ರಕಟಿಸಿದೆ. ಈ ಬಾರಿ ಪ್ರಾಧಿಕಾರವು ನಿಗದಿಪಡಿಸಿದ್ದ ಸಮಯಕ್ಕಿಂತ ಮುನ್ನವೇ ಫಲಿತಾಂಶವನ್ನು ಬಿಡುಗಡೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಅಚ್ಚರಿ ಮೂಡಿಸಿದೆ.
ಎಂಜಿನಿಯರಿಂಗ್, ವೈದ್ಯಕೀಯ, ದಂತವೈದ್ಯಕೀಯ, ಕೃಷಿ, ಫಾರ್ಮಸಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಸೀಟು ಹಂಚಿಕೆ ಪ್ರಕ್ರಿಯೆ ನಡೆದಿದೆ. ಅಭ್ಯರ್ಥಿಗಳು ಜುಲೈ 9ರವರೆಗೆ ಆನ್‌ಲೈನ್ ಮೂಲಕ ದಾಖಲಿಸಿದ್ದ ಕಾಲೇಜು ಮತ್ತು ಕೋರ್ಸ್‌ಗಳ ಆದ್ಯತೆಗಳ (Options Entry) ಆಧಾರದ ಮೇಲೆ ಈ ತಾತ್ಕಾಲಿಕ ಸೀಟುಗಳನ್ನು ಹಂಚಲಾಗಿದೆ.
ಸದ್ಯ ಪ್ರಕಟವಾಗಿರುವುದು ತಾತ್ಕಾಲಿಕ ಫಲಿತಾಂಶವಾಗಿದ್ದು, ಇದರಲ್ಲಿ ಯಾವುದೇ ರೀತಿಯ ಲೋಪದೋಷಗಳು ಅಥವಾ ತಪ್ಪುಗಳಿದ್ದಲ್ಲಿ ಆಕ್ಷೇಪಣೆ ಸಲ್ಲಿಸಲು ಕೆಇಎ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ನೀಡಿದೆ. ಅಭ್ಯರ್ಥಿಗಳು ತಮ್ಮ ಆಕ್ಷೇಪಣೆಗಳನ್ನು ಇಂದು ಸಂಜೆ 5 ಗಂಟೆಯೊಳಗೆ ಆನ್‌ಲೈನ್ ಮೂಲಕವೇ ಸಲ್ಲಿಸಬೇಕಾಗಿ ಪ್ರಾಧಿಕಾರ ತಿಳಿಸಿದೆ. ನಿಗದಿತ ಸಮಯದ ನಂತರ ಬರುವ ಯಾವುದೇ ದೂರುಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಅಭ್ಯರ್ಥಿಗಳು ತಮಗೆ ಲಭ್ಯವಾಗಿರುವ ಸೀಟಿನ ವಿವರಗಳನ್ನು ಪರಿಶೀಲಿಸಲು ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ವೆಬ್‌ಸೈಟ್‌ನಲ್ಲಿ ತಮ್ಮ ಲಾಗಿನ್ ವಿವರಗಳನ್ನು ನಮೂದಿಸುವ ಮೂಲಕ ತಾತ್ಕಾಲಿಕ ಸೀಟು ಹಂಚಿಕೆಯ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಲು ಸೂಚಿಸಲಾಗಿದೆ.
ಗಈ ಸುತ್ತಿನಲ್ಲಿ ಸಲ್ಲಿಕೆಯಾಗುವ ಎಲ್ಲಾ ಆಕ್ಷೇಪಣೆ ಹಾಗೂ ದೂರುಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮೊದಲ ಸುತ್ತಿನ ಅಂತಿಮ ಸೀಟು ಹಂಚಿಕೆಯ (Final Seat Allotment) ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದೆ. ಅಲ್ಲಿಯವರೆಗೆ ವಿದ್ಯಾರ್ಥಿಗಳು ವೆಬ್‌ಸೈಟ್ ಅನ್ನು ನಿರಂತರವಾಗಿ ಗಮನಿಸುತ್ತಿರಬೇಕು.