ರಾಜ್ಯದಲ್ಲಿ ತಕ್ಷಣಕ್ಕೆ ಶಾಲೆ ಆರಂಭ ಇಲ್ಲ| ವಿವಿಧ ಇಲಾಖೆ, ತಜ್ಞರು ಮತ್ತಿತರೆ ಅಭಿಮತ ಸಂಗ್ರಹ| ಶಾಲೆ ಪುನಾರಂಭಿಸಿದ ರಾಜ್ಯಗಳ ಸೂಕ್ಷ್ಮ ಅವಲೋಕನ| ಸಾಧಕ-ಬಾಧಕ ಚರ್ಚಿಸಿ ಮುಂದಿನ ಹೆಜ್ಜೆಗೆ ನಿರ್ಧಾರ
ಬೆಂಗಳೂರು(ನ.05): ರಾಜ್ಯದಲ್ಲಿ ಶಾಲೆ ಹಾಗೂ ಪಿಯು ಕಾಲೇಜುಗಳನ್ನು ಆರಂಭಿಸುವ ವಿಷಯದಲ್ಲಿ ತರಾತುರಿ ಮಾಡದೆ, ಸಂಬಂಧಿಸಿದ ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಶಾಲೆಗಳನ್ನು ಆರಂಭಿಸಿರುವ ರಾಜ್ಯಗಳಲ್ಲಿನ ಪರಿಣಾಮಗಳನ್ನು ಅವಲೋಕಿಸಿ ಅಂತಿಮ ತೀರ್ಮಾನಕ್ಕೆ ಬರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಅಂದರೆ, ಸದ್ಯಕ್ಕೆ ಶಾಲೆಗಳ ಶಾಲೆಗಳು ಆರಂಭವಾಗುವ ಸಾಧ್ಯತೆಯಿಲ್ಲ. ಇನ್ನಷ್ಟುಕಾಲ ಪರಾಮರ್ಶೆ ನಡೆಸಿ, ಸಾಧಕ ಬಾಧಕಗಳನ್ನು ಅವಲೋಕಿಸಿದ ನಂತರವೇ ಮುಂದಿನ ಹೆಜ್ಜೆ ಇಡಲು ಉದ್ದೇಶಿಸಿದೆ.
ಶಾಲೆಗಳನ್ನು ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಇಲಾಖಾ ಸಚಿವರಾದ ಎಸ್.ಸುರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಆಯುಕ್ತ ಅನ್ಬುಕುಮಾರ್, ಪಿಯು ಇಲಾಖೆ ನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಹಾಗೂ ಶಿಕ್ಷಕ ಸಂಘಟನೆಗಳ ಪ್ರತಿನಿಧಿಗಳ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ಇದೇ ವೇಳೆ, ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟವಿವಿಧ ಇಲಾಖೆ ಹಾಗೂ ಇತರರ ಅಭಿಪ್ರಾಯ ಸಂಗ್ರಹಿಸಿ, ಜೊತೆಗೆ ಬೇರೆ ಬೇರೆ ರಾಜ್ಯಗಳಲ್ಲಿನ ಪರಿಣಾಮಗಳನ್ನು ಅವಲೋಕಿಸಿ ವರದಿ ನೀಡುವಂತೆ ಇಲಾಖೆಯ ಆಯುಕ್ತರಿಗೆ ಸಚಿವರು ಸೂಚನೆ ನೀಡಿದ್ದಾರೆ. ಆಯುಕ್ತರು ನೀಡುವ ವರದಿಯನ್ನು ಮುಖ್ಯಮಂತ್ರಿ ಅವರೊಂದಿಗೆ ವಿಸ್ತೃತವಾಗಿ ಚರ್ಚಿಸಿದ ಬಳಿಕ ಶಾಲೆ, ಪಿಯು ಕಾಲೇಜುಗಳ ಆರಂಭದ ಬಗ್ಗೆ ನಿರ್ಧಾರ ಮಾಡೋಣ ಎಂದು ತಿಳಿಸಿದ್ದಾರೆ.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಸಚಿವ ಸುರೇಶ್ ಕುಮಾರ್ ಅವರು, ಶಾಲೆ ಮತ್ತು ಪಿಯು ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಶಿಕ್ಷಕರ ಸಂಘದ ಪ್ರತಿನಿಧಿಗಳೊಂದಿಗೆ ಪೂರ್ವಭಾವಿ ಸಭೆಯನ್ನಷ್ಟೇ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಶಾಲೆಗಳನ್ನು ಆರಂಭಿಸಲು ತರಾತುರಿಯಲ್ಲಿ ನಿರ್ಧಾರ ಮಾಡುವುದಿಲ್ಲ. ಸಭೆಯಲ್ಲಿ ವ್ಯಕ್ತವಾದ ಸಲಹೆಯಂತೆ ಈಗಾಗಲೇ ಶಾಲೆಗಳನ್ನು ಆರಂಭಿಸಿರುವ ರಾಜ್ಯಗಳಲ್ಲಿ ಉಂಟಾಗಿರುವ ಪರಿಣಾಮಗಳನ್ನು ಅವಲೋಕಿಸಲಾಗುವುದು. ಜೊತೆಗೆ ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಬಿಬಿಎಂಪಿ, ವಸತಿ ಶಾಲೆಗಳ ಮುಖ್ಯಸ್ಥರು, ತಾಲೂಕು ಮಟ್ಟದ ಶಾಲಾಭಿವೃದ್ಧಿ ಸಮಿತಿಗಳು, ಎಲ್ಲಾ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪಿಯು ಉಪನ್ಯಾಸಕರು ಮತ್ತು ಶಾಲಾ ಶಿಕ್ಷಕ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲಾಗುವುದು. ಈ ಸಂಬಂಧ ಮುಂದಿನ ಎರಡು ದಿನಗಳಲ್ಲಿ ಅಭಿಪ್ರಾಯ ಸಂಗ್ರಹಿಸಿ, ಪರಿಣಾಮಗಳ ಅವಲೋಕಿಸಿ ವರದಿ ನೀಡಲು ಆಯುಕ್ತರಾದ ಅನ್ಬುಕುಮಾರ್ ಅವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಆಯುಕ್ತರು ನೀಡುವ ವರದಿಯನ್ನು ಪರಿಶೀಲಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರೊಂದಿಗೆ ವಿಸ್ತೃತ ಚರ್ಚೆ ನಡೆಸಿ, ಬಳಿಕವಷ್ಟೇ ಶಾಲೆ, ಪಿಯು ಕಾಲೇಜುಗಳ ಆರಂಭಕ್ಕೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಯಾವುದೇ ನಿರ್ಧಾರವನ್ನು ಮಕ್ಕಳ ಯೋಗಕ್ಷೇಮ, ಶಿಕ್ಷಕರ ಹಿತ ಹಾಗೂ ಪೋಷಕರ ಆತಂಕವನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಅತಿವೃಷ್ಟಿ, ಪ್ರವಾಹಪೀಡಿತ ಪ್ರದೇಶಗಳಲ್ಲಿ ಹಾನಿಗೊಳಗಾಗಿರುವ ಶಾಲೆಗಳೆಷ್ಟು, ಶಾಲಾ ಕೊಠಡಿಗಳೆಷ್ಟುಹಾಗೂ ಅವುಗಳ ದುರಸ್ತಿಗೆ ಎಷ್ಟುಅನುದಾನ ಬೇಕಾಗುತ್ತದೆ ಎಂದು ಇಲಾಖೆಗೆ ವರದಿ ಸಲ್ಲಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಸರ್ಕಾರದೊಂದಿಗೆ ಚರ್ಚಿಸಿ ಅವುಗಳ ದುರಸ್ತಿಗೆ ಕ್ರಮ ವಹಿಸಲಾಗುವುದು ಎಂದು ಇದೇ ವೇಳೆ ಸಚಿವರು ಭರವಸೆ ನೀಡಿದರು.
ಹೈಸ್ಕೂಲ್ ರೀತಿ 1ರಿಂದ 7ನೇ ತರಗತಿಗೂ ಟೀವಿ ಪಾಠ
ಪ್ರೌಢಶಾಲೆ ಮಕ್ಕಳಿಗೆ ಚಂದನ ವಾಹಿನಿಯಲ್ಲಿ ನಡೆಸಲಾಗುತ್ತಿರುವ ಸಂವಾದ ತರಗತಿಗಳ ಮಾದರಿಯಲ್ಲೇ 1ರಿಂದ 7ನೇ ತರಗತಿವರೆಗಿನ ಮಕ್ಕಳಿಗೂ ಆಕಾಶವಾಣಿ ಮತ್ತು ಸ್ಥಳೀಯ ಟೀವಿ ಚಾನಲ್‌ಗಳ ಮೂಲಕ ಪಠ್ಯ ಬೋಧನೆಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಆನ್‌ಲೈನ್ ಶಿಕ್ಷಣದಿಂದ ಸರ್ಕಾರಿ ಶಾಲಾ ಮಕ್ಕಳು ವಂಚಿತರಾಗುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರಿ ಶಾಲಾ ಶಿಕ್ಷಕರು ಕೂಡ ವಾಟ್ಸಪ್, ಯೂಟ್ಯೂಬ್ ಚಾನಲ್‌ಗಳ ಮೂಲಕ ಅವರ ಇತಿಮಿತಿಯಲ್ಲಿ ಮಕ್ಕಳಿಗೆ ಪಾಠಗಳನ್ನು ಮಾಡುತ್ತಿದ್ದಾರೆ. 8ರಿಂದ 10ನೇ ತರಗತಿ ಮಕ್ಕಳಿಗೆ ಸಂವಾದ ತರಗತಿಗಳನ್ನು ಚಂದನ ವಾಹಿನಿಯಲ್ಲಿ ನೀಡಲಾಗುತ್ತಿದ್ದು, ಡಿಸೆಂಬರ್ ವೇಳೆಗೆ ಒಂದು ಸುತ್ತಿನ ಪಾಠ ಬೋಧನೆ ಪೂರ್ಣವಾಗಲಿದೆ. ಅದೇ ರೀತಿ 1ರಿಂದ 7ನೇ ತರಗತಿ ಮಕ್ಕಳಿಗೂ ಆಕಾಶವಾಣಿ ಮತ್ತು ಸ್ಥಳೀಯ ಟೀವಿ ಚಾನಲ್‌ಗಳ ಮೂಲಕ ಪಾಠ ಬೋಧನೆ ನಡೆಸಲು ಟೆಂಡರ್ ಕರೆಯಲಾಗಿದ್ದು, ಇನ್ನೊಂದು ವಾರದಲ್ಲಿ ಈ ಬಗ್ಗೆ ಸ್ಪಷ್ಟನಿರ್ಧಾರ ಕೈಗೊಳ್ಳಲಾಗುವುದು ಎಂದರು.
ತರಾತುರಿಯ ನಿರ್ಧಾರ ಇಲ್ಲ
ಶಾಲೆ ಪುನಾರಂಭ ಕುರಿತು ತರಾತುರಿಯ ನಿರ್ಧಾರ ಕೈಗೊಳ್ಳಲ್ಲ. ಈಗ ಪೂರ್ವಭಾವಿ ಸಭೆ ನಡೆಸಿ ಪೋಷಕರು, ಶಿಕ್ಷಕರು ಸೇರಿ ವಿವಿಧ ಕಡೆಯಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಇನ್ನು ವಿವಿಧ ಇಲಾಖೆಗಳು, ಶಾಲಾಭಿವೃದ್ಧಿ ಸಮಿತಿಗಳು, ಶಿಕ್ಷಕ ಸಂಘಟನೆಗಳ ಜೊತೆ ಚರ್ಚಿಸಲಾಗುವುದು. 2 ದಿನದಲ್ಲಿ ಈ ಪ್ರಕ್ರಿಯೆ ಮುಗಿಸಿ ವರದಿ ನೀಡಲು ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚಿಸಲಾಗಿದೆ. ಆ ವರದಿ ಪರಿಶೀಲಿಸಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು. ಶಿಕ್ಷಕರು ಹಾಗೂ ಪೋಷಕರ ಹಿತ ಮತ್ತು ಆತಂಕವನ್ನು ಗಮನದಲ್ಲಿಟ್ಟುಕೊಂಡು ಶಾಲೆ, ಪಿಯು ಕಾಲೇಜು ಆರಂಭ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.
- ಎಸ್.ಸುರೇಶ್ ಕುಮಾರ್, ಶಾಲಾ ಶಿಕ್ಷಣ ಸಚಿವ