ರಾಜ್ಯದಲ್ಲಿ ಕೊರೋನಾ ಅಬ್ಬರ ಜೋರಾಗಿದ್ದರಿಂದ ಕರ್ನಾಟಕದ ಹಲವು ವಿಶ್ವವಿದ್ಯಾಲಯಗಳು ಪರೀಕ್ಷೆಗಳನ್ನು ಮುಂದೂಡಿ ಸುತ್ತೋಲೆ ಹೊರಡಿಸಿವೆ.
ಬೆಂಗಳೂರು, (ಏ.18): ಕರ್ನಾಟಕದಲ್ಲಿ ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡಿದೆ. ಪ್ರತಿದಿನದ ಸೋಂಕು ಪ್ರಕರಣಗಳು ದಾಖಲೆ ಪ್ರಮಾಣದಲ್ಲಿ ವರದಿಯಾಗುತ್ತಿವೆ. ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕಗಳು (ಐಸಿಯು) ಭರ್ತಿಯಾಗಿದ್ದು ರೋಗಿಗಳು ಬೆಡ್ ಸಿಗದೆ ಪರದಾಡುತ್ತಿದ್ದಾರೆ.
ಮತ್ತೊಂದೆಡೆ ಚಿತಾಗಾರಗಳಲ್ಲಿ ಶವಗಳನ್ನು ಹೊತ್ತು ಆಂಬುಲೆನ್ಸ್ಗಳು ಪಾಳಿಯಲ್ಲಿ ನಿಂತಿವೆ. ರಾಜ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಮುಂಜಾತ್ರಾಕ್ರಮವಾಗಿ ರಾಜ್ಯದ ಹಲವು ವಿಶ್ವವಿದ್ಯಾಲಯಗಳು ಪರೀಕ್ಷೆಗಳನ್ನು ಮುಂದೂಡಿವೆ.
ಕೋವಿಡ್ ಎಫೆಕ್ಟ್ : 12ನೇ ತರಗತಿ ಪರೀಕ್ಷೆ ಮುಂದೂಡಿಕೆ
ದಾವಣಗೆರೆ ವಿವಿ ಪರೀಕ್ಷೆ ಮುಂದೂಡಿಕೆ
ಕೊರೋನಾ ಭೀತಿ ಹಿನ್ನೆಲೆ ನಾಳೆ (ಏ.19) ನಡೆಯಬೇಕಿದ್ದ ದಾವಣಗೆರೆ ವಿವಿಯ 'ಬಿ.ಎಡ್' ಪರೀಕ್ಷೆ ಮುಂದೂಡಿಕೆಯಾಗಿದ್ದು, ಈ ಬಗ್ಗೆ ದಾವಣಗೆರೆ ವಿಶ್ವವಿದ್ಯಾಲಯ ಪರೀಕ್ಷಾಂಗ ವಿಭಾಗದ ಕುಲಸಚಿವೆ ಡಾ ಹೆಚ್ ಎಸ್ ಅನಿತಾ ಮಾಹಿತಿ ನೀಡಿದ್ದಾರೆ/
ಕೊರೋನಾ ಭೀತಿ ಹಾಗೂ ಸಾರಿಗೆ ಮುಷ್ಕರದ ಹಿನ್ನೆಲೆ ನಾಳೆ (ಸೋಮವಾರ) ನಡೆಯಬೇಕಿದ್ದ ದಾವಣಗೆರೆ ವಿವಿಯ 'ಬಿ.ಎಡ್' ಪರೀಕ್ಷೆ ಮುಂದೂಡಲಾಗಿದೆ. ಅಲ್ಲದೇ ಏಪ್ರಿಲ್ 20 ರಿಂದ ಆರಂಭವಾಗಲಿರುವ ಸ್ನಾತಕೋತ್ತರ ಪರೀಕ್ಷೆಗಳನ್ನು ಕೂಡ ಮುಂದೂಡಿಕೆ ಮಾಡಲಾಗಿದೆ. ಪರೀಕ್ಷೆ ನಡೆಯುವ ದಿನಾಂಕವನ್ನು ಕೋವಿಡ್ ಪರಿಸ್ಥಿತಿ ನೋಡಿಕೊಂಡು ನಿಗದಿ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ರಾಣಿ ಚೆನ್ನಮ್ಮ ವಿವಿ ಪರೀಕ್ಷೆ ಮುಂದಕ್ಕೆ
ಸಾರಿಗೆ ನೌಕರರ ಮುಷ್ಕರ ಮುಂದುವರೆದ ಹಿನ್ನೆಲೆ ನಾಳೆ ( ಏ.19) ರಂದು ನಡೆಯಬೇಕಿದ್ದ ರಾಣಿ ಚೆನ್ನಮ್ಮ ವಿವಿಯ ಯುಜಿ, ಪಿಜಿ ಎಂಬಿಎ ಪರೀಕ್ಷೆಗಳನ್ನು ಮುಂದೂಡಿ ವಿವಿ ಆದೇಶ ಹೊರಡಿಸಿದೆ.
ಮುಂದಿನ ಆದೇಶದವರೆಗೂ ಪರೀಕ್ಷೆಗಳನ್ನು ಮುಂದೂಡಲಾಗಿದ್ದು,ಪರೀಕ್ಷೆ ನಡೆಯುವ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ರಾಣಿ ಚೆನ್ನಮ್ಮ ವಿವಿ ಪ್ರಕಟಣೆ ಹೊರಡಿಸಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಸಂಯೋಜಿತ ಮಹಾವಿದ್ಯಾಲಯಗಳಲ್ಲಿ ಈ ಪರೀಕ್ಷೆಗಳು ನಡೆಯಬೇಕಿದ್ದವು.
ಗುಲ್ಬರ್ಗಾ ವಿವಿ ಪರೀಕ್ಷೆ ಪೋಸ್ಟ್‌ಪೋನ್ಡ್.
ಗುಲ್ಬರ್ಗಾ ವಿವಿ ಬಿ.ಎಡ್ ದ್ವಿತೀಯ ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆ ಮುಂದೂಡಲಾಗಿದೆ. ಕೊರೋನಾ ಏರಿಕೆ ಹಿನ್ನಲೆ ನಾಳೆಯಿಂದ ಪ್ರಾರಂಭವಾಗಬೇಕಿದ್ದ ಬಿ.ಎಡ್ ದ್ವಿತೀಯ ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದಕ್ಕೆ ಹಾಕಲಾಗಿದೆ. ಈ ಬಗ್ಗೆ ಗುಲಬರ್ಗಾ ವಿವಿ ಪರೀಕ್ಷಾಂಗ ಕುಲಸಚಿವ ಪ್ರೋ.ಸೋನಾರ್ ನಂದಪ್ಪ ಮಾಹಿತಿ ಕೊಟ್ಟಿದ್ದಾರೆ.