ಎಂಜಿನಿಯರಿಂಗ್‌ ಸೀಟು ಶುಲ್ಕ 10% ಹೆಚ್ಚಳಕ್ಕೆ ಸರ್ಕಾರ ಸಿದ್ಧತೆ?

By Kannadaprabha NewsFirst Published Aug 30, 2021, 10:42 AM IST
Highlights
  • ಕೋವಿಡ್‌ ಆರ್ಥಿಕ ಸಂಕಷ್ಟದ ಕಾಲದಲ್ಲೂ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಒತ್ತಡ
  • ಒತ್ತಡಕ್ಕೆ ಮಣಿದು ಎಂಜಿನಿಯರಿಂಗ್‌ ಸೀಟುಗಳ ಶುಲ್ಕ ಹೆಚ್ಚಳ ಮಾಡಲು ಸರ್ಕಾರ ನಿರ್ಧಾರ

ವರದಿ :  ಲಿಂಗರಾಜು ಕೋರಾ

 ಬೆಂಗಳೂರು (ಆ.30):  ಕೋವಿಡ್‌ ಆರ್ಥಿಕ ಸಂಕಷ್ಟದ ಕಾಲದಲ್ಲೂ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಒತ್ತಡಕ್ಕೆ ಮಣಿದು ಎಂಜಿನಿಯರಿಂಗ್‌ ಸೀಟುಗಳ ಶುಲ್ಕ ಹೆಚ್ಚಳ ಮಾಡಲು ಸರ್ಕಾರ ಹೊರಟಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿನ ಸರ್ಕಾರಿ ಹಾಗೂ ಆಡಳಿತ ಮಂಡಳಿ ಕೋಟಾದ ಸೀಟುಗಳ ಶುಲ್ಕವನ್ನು ಶೇ.10 ರಷ್ಟುಹೆಚ್ಚಿಸಲು ಸರ್ಕಾರ ಮುಂದಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಎಂಜಿನಿಯರಿಂಗ್‌ ಕೋರ್ಸ್‌ಗಳ ಶುಲ್ಕವನ್ನು ಹೆಚ್ಚಿಸಿ ಮೂರು ವರ್ಷಗಳು ಕಳೆದಿವೆ. ಸಿಬ್ಬಂದಿ ಮತ್ತು ಇತರ ವೆಚ್ಚಗಳ ಹೆಚ್ಚಳವನ್ನು ಉಲ್ಲೇಖಿಸಿ ಕಾಲೇಜು ಆಡಳಿತ ಮಂಡಳಿಗಳು ಶೇ.30 ರಷ್ಟುಶುಲ್ಕ ಹೆಚ್ಚಿಸಲು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿವೆ. ಆದರೆ ಸರ್ಕಾರ ಶೇ.10ರಷ್ಟುಶುಲ್ಕ ಹೆಚ್ಚಳಕ್ಕೆ ಮಾತ್ರ ಒಪ್ಪಿಗೆ ನೀಡಲು ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

ವೈದ್ಯಕೀಯ ಕೋರ್ಸ್‌ಗಳ ಶುಲ್ಕವನ್ನು ಸರ್ಕಾರ ಪ್ರತಿವರ್ಷ ಹೆಚ್ಚಿಸುತ್ತಿದೆ. ಅದೇ ರೀತಿ ಎಂಜಿನಿಯರಿಂಗ್‌ ಕೋರ್ಸುಗಳ ಶುಲ್ಕವನ್ನೂ ಪ್ರತಿ ವರ್ಷ ಹೆಚ್ಚಿಸಬೇಕೆಂಬುದು ಕಾಲೇಜುಗಳ ಬೇಡಿಕೆಯಾಗಿದೆ. ಆದರೆ, ಪ್ರತಿ ವರ್ಷ ಶುಲ್ಕ ಏರಿಕೆಗೆ ಸರ್ಕಾರ ಒಪ್ಪಿಲ್ಲ ಎಂದು ತಿಳಿದು ಬಂದಿದೆ.

ರಾಜ್ಯದ 6 ಇಂಜಿನಿಯರಿಂಗ್ ಕಾಲೇಜು ರದ್ದು, ಈ ಕಾಲೇಜುಗಳಲ್ಲಿ ಅಡ್ಮಿಷನ್ ಮಾಡಿಸದಂತೆ ಮನವಿ

ಸೆಪ್ಟೆಂಬರ್‌ನಲ್ಲಿ ಸಭೆ:  ಈ ಮಧ್ಯೆ, ಶುಲ್ಕ ಹೆಚ್ಚಳ ವಿಚಾರ ಸಂಬಂಧ ಚರ್ಚಿಸಲು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರು ಸೆಪ್ಟಂಬರ್‌ ಎರಡನೇ ವಾರ ಖಾಸಗಿ ಕಾಲೇಜುಗಳ ಪ್ರತಿನಿಧಿಗಳ ಸಭೆ ಕರೆದಿದ್ದಾರೆ. ಸಭೆಯಲ್ಲಿ ಶೇ.10ರಷ್ಟುಶುಲ್ಕ ಹೆಚ್ಚಿಸುವ ಸರ್ಕಾರದ ನಿರ್ಧಾರವನ್ನು ತಿಳಿಸಲಾಗುತ್ತದೆ. ಇದಕ್ಕೆ ಖಾಸಗಿ ಕಾಲೇಜುಗಳು ಒಪ್ಪದಿದ್ದರೆ ಹಗ್ಗಜಗ್ಗಾಟ ನಡೆಯಬಹುದು. ಆದರೆ, ಕಾಲೇಜುಗಳು ಎಷ್ಟೇ ಒತ್ತಡ ಹಾಕಿದರೂ ಕೋವಿಡ್‌ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಇದಕ್ಕಿಂತ ಹೆಚ್ಚಿನ ಶುಲ್ಕ ಏರಿಕೆಗೆ ಅವಕಾಶ ನೀಡದಿರಲು ಸರ್ಕಾರ ಈಗಾಗಲೇ ನಿರ್ಧರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈಗಿನ ಶುಲ್ಕ ಎಷ್ಟು?

ಸಿಇಟಿ ಕೋಟಾ: .58,806- .65,360

ಕಾಮೆಡ್‌-ಕೆ ಕೋಟಾ: .1,43,748- .2,01,960

ಸೀಟು ಹಂಚಿಕೆ 

ಕೆಸಿಇಟಿ ಕೋಟಾ: ಶೇ.45

ಕಾಮೆಡ್‌-ಕೆ ಕೋಟಾ: ಶೇ.30

ಮ್ಯಾನೇಜ್‌ಮೆಂಟ್‌ ಮತ್ತು ಎನ್‌ಆರ್‌ಐ ಕೋಟಾ: ಶೇ.25

ರಾಜ್ಯದ ಖಾಸಗಿ ಇಂಜಿನಿಯರಿಂಗ್‌ ಕಾಲೇಜುಗಳು ಈ ವರ್ಷ ಪದವಿಪೂರ್ವ ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಶೇ.25 ರಿಂದ 30 ರಷ್ಟುಶುಲ್ಕ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದು, ಈ ಸಂಬಂಧ ಖಾಸಗಿ ಕಾಲೇಜುಗಳ ಪ್ರತಿನಿಧಿಗಳ ನಿಯೋಗವೊಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನೂ ಭೇಟಿ ಮಾಡಿ ಮನವಿ ಮಾಡಿದೆ.

click me!