ಶಾಲಾ ಶುಲ್ಕ 15% ಮಾತ್ರ ಕಡಿತ..!

By Kannadaprabha News  |  First Published Sep 17, 2021, 3:34 PM IST

*  30% ಕಡಿತಗೊಳಿಸಿದ್ದ ರಾಜ್ಯದ ಸರ್ಕಾರ ಆದೇಶ ರದ್ದುಗೊಳಿಸಿದ ಹೈಕೋರ್ಟ್‌
*  ಶುಲ್ಕ ನಿಗದಿಪಡಿಸಲು ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ 
*  ಸಂಪೂರ್ಣ ಶುಲ್ಕ ಪಾವತಿಸುವಂತೆ ಖಾಸಗಿ ಶಾಲೆಗಳಿಂದ ಒತ್ತಡ 
 


ಬೆಂಗಳೂರು(ಸೆ.17): ಕೊರೋನಾ ಹಿನ್ನೆಲೆಯಲ್ಲಿ ಪೋಷಕರು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದನ್ನು ಪರಿಗಣಿಸಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಖಾಸಗಿ ಶಾಲೆಗಳಲ್ಲಿ ಬೋಧನಾ ಶುಲ್ಕದಲ್ಲಿ (ಟ್ಯೂಷನ್‌ ಫೀ) ಶೇ.30ರಷ್ಟು ಕಡಿತಗೊಳಿಸಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್‌, ಶೇ.15ರಷ್ಟು ಮಾತ್ರ ಕಡಿತಕ್ಕೆ ಆದೇಶಿಸಿದೆ. ಬೋಧನಾ ಶುಲ್ಕದಲ್ಲಿ ಶೇ.15ರಷ್ಟು ವಿನಾಯಿತಿ ನೀಡುವಂತೆ ಶಾಲೆಗಳಿಗೆ ಸೂಚಿಸಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಶೇ.30ರಷ್ಟು ಬೋಧನಾ ಶುಲ್ಕ ಕಡಿತಗೊಳಿಸಿ 2021ರ ಜ.29ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕ್ಯಾಮ್ಸ್‌ ಹಾಗೂ ಇತರ ಖಾಸಗಿ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ತಕರಾರು ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಆರ್‌. ದೇವದಾಸ್‌ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಗುರುವಾರ ಪ್ರಕಟಿಸಿತು.

Latest Videos

undefined

ಇಂಡಿಯನ್‌ ಸ್ಕೂಲ್‌ ಆಫ್‌ ಜೋಧಪುರ ಹಾಗೂ ರಾಜಸ್ಥಾನ ಸರ್ಕಾರದ ನಡುವಿನ ಪ್ರಕರಣದಲ್ಲಿ 2021ರ ಮೇ 3ರಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದ್ದ ಆಧರಿಸಿ ಈ ತೀರ್ಪು ನೀಡಿರುವ ಹೈಕೋರ್ಟ್‌, 2019-20ನೇ ಸಾಲಿನಲ್ಲಿ ಸಂಗ್ರಹಿಸಿದ ಶುಲ್ಕದ ಒಟ್ಟು ಮೊತ್ತದಲ್ಲಿ ಶೇ.15ರಷ್ಟುರಿಯಾಯಿತಿ ನೀಡಿದರೆ ಉಳಿಯುವ ಮೊತ್ತದಷ್ಟುಶುಲ್ಕವನ್ನು 2020-21ನೇ ಸಾಲಿನಲ್ಲಿ ಸಂಗ್ರಹಿಸುವಂತೆ ಖಾಸಗಿ ಶಾಲೆಗಳಿಗೆ ನಿರ್ದೇಶಿಸಿದೆ. ಜತೆಗೆ, ಖಾಸಗಿ ಶಾಲೆಗಳ ಶುಲ್ಕ ನಿಗದಿಪಡಿಸಲು ಸರ್ಕಾರಕ್ಕೆ ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟು 2021ರ ಜ.29ರಂದು ಸರ್ಕಾರ ಹೊರಡಿಸಿದ್ದ ಆದೇಶ ರದ್ದುಪಡಿಸಿ ಅರ್ಜಿಗಳನ್ನು ಇತ್ಯರ್ಥಪಡಿಸಿದೆ.

ಸರ್ಕಾರಿ ಕಾಲೇಜುಗಳಿಗೆ ಉಪನ್ಯಾಸಕರೇ ಇಲ್ಲ..!

ಹಿನ್ನೆಲೆ:

2020-21ನೇ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ಶಾಲೆಗಳ ಬೋಧನಾ ಶುಲ್ಕವನ್ನು ಶೇ.30ರಷ್ಟುಕಡಿತಗೊಳಿಸಿದ್ದ ರಾಜ್ಯ ಸರ್ಕಾರ, ಶೇ.70ರಷ್ಟುಬೋಧನಾ ಶುಲ್ಕ ಹೊರತುಪಡಿಸಿ ಬೇರೆ ಯಾವುದೇ ಶುಲ್ಕ ಪಡೆಯುವಂತಿಲ್ಲ ಎಂದು ಸರ್ಕಾರ 2021ರ ಜ.29ರಂದು ಆದೇಶಿಸಿತ್ತು. ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಖಾಸಗಿ ಶಾಲೆಗಳು, ಸರ್ಕಾರದ ಆದೇಶದಿಂದ ಶಾಲೆಗಳಲ್ಲಿ ಕಡಿಮೆ ಶುಲ್ಕ ಸಂಗ್ರಹವಾಗಲಿದೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವೇತನ ಪಾವತಿಸಲು ಕಷ್ಟವಾಗುತ್ತದೆ. ಶಾಲೆಗಳ ಸಮರ್ಪಕ ಕಾರ್ಯನಿರ್ವಹಣೆ ಸಾಧ್ಯವಾಗುವುದಿಲ್ಲ. ಮೇಲಾಗಿ ಶುಲ್ಕ ಕಡಿತಗೊಳಿಸಿದ ಆದೇಶ ಶಿಕ್ಷಣ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಖಾಸಗಿ ಶಾಲೆಗಳ ಮೇಲೆ ಸರ್ಕಾರ ಬಲವಂತದ ಕ್ರಮ ಕೈಗೊಳ್ಳಬಾರದು. ಖಾಸಗಿ ಶಾಲೆಗಳೂ ಸಹ ಶುಲ್ಕ ಪಡೆಯುವಾಗ ಪ್ರತಿಯೊಬ್ಬ ಪಾಲಕರ ಅಹವಾಲು ಪರಿಗಣಿಸಬೇಕೆಂದು ಮಧ್ಯಂತರ ಆದೇಶ ನೀಡಿತ್ತು.

ಅದಾದ ನಂತರವೂ ಕೆಲ ಖಾಸಗಿ ಶಾಲೆಗಳು ಸಂಪೂರ್ಣ ಶುಲ್ಕ ಪಾವತಿಸುವಂತೆ ಒತ್ತಡ ಹೇರುತ್ತಿವೆ ಎಂಬ ಆರೋಪ ಹಿನ್ನೆಲೆಯಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಸರ್ಕಾರ, ಶುಲ್ಕ ನಿಗದಿ ವಿವಾದ ಬಗೆಹರಿಸಲು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚನೆಗೆ ಮನವಿ ಮಾಡಿತ್ತು.

ITIಗೆ 6 ಹೊಸ ಕೋರ್ಸ್ ಸೇರ್ಪಡೆ: ಪ್ರಸಕ್ತ ಸಾಲಿನಿಂದಲೇ ಪ್ರವೇಶಾತಿ ಆರಂಭ

ಈ ಮಧ್ಯೆ ಸುಪ್ರೀಂ ಕೋರ್ಟ್‌, ಖಾಸಗಿ ಶಾಲೆಗಳು 2020-21ನೇ ಸಾಲಿನ ಶುಲ್ಕದಲ್ಲಿ ಶೇ.15ರಷ್ಟು ರಿಯಾಯಿತಿ ನೀಡಿ, ಬಾಕಿ ಶುಲ್ಕ ಸಂಗ್ರಹಿಸಬೇಕು. ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನು ಯಾವುದೇ ಕಾರಣಕ್ಕೂ ಆನ್‌ಲೈನ್‌ ಅಥವಾ ಭೌತಿಕ ತರಗತಿಗಳಲ್ಲಿ ಭಾಗವಹಿಸದಂತೆ ನಿರ್ಬಂಧಿಸಬಾರದು. ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ತಡೆಹಿಡಿಯಬಾರದು. ಶುಲ್ಕ ಪಾವತಿಸಲು ಕಷ್ಟವಾಗುತ್ತಿರುವ ಬಗ್ಗೆ ಯಾವುದೇ ವಿದ್ಯಾರ್ಥಿ ಅಥವಾ ಪಾಲಕರು ಮನವಿ ಸಲ್ಲಿಸಿದರೆ, ಅವುಗಳನ್ನು ಪ್ರತ್ಯೇಕವಾಗಿ ಅನುಕಂಪದ ಆಧಾರದಲ್ಲಿ ಪರಿಗಣಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ನಿರ್ದೇಶಿಸಿ 2021ರ ಮೇ 3ರಂದು ತೀರ್ಪು ನೀಡಿತ್ತು.

ಇದರಿಂದ ಶುಲ್ಕ ನಿಗದಿಪಡಿಸಲು ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂಬುದಾಗಿ ಸುಪ್ರೀಂಕೋರ್ಟ್‌ ಆದೇಶ ನೀಡಿದೆ. ಹಾಗಾಗಿ, ಸರ್ಕಾರ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದು ವಾದಿಸಿದ್ದ ಅರ್ಜಿದಾರ ಖಾಸಗಿ ಶಾಲೆಗಳು, 2020-21ನೇ ಸಾಲಿನ ಬೋಧನಾ ಶುಲ್ಕದಲ್ಲಿ ಶೇ.15ರಷ್ಟು ವಿನಾಯಿತಿ ನೀಡುವುದಾಗಿ ಹೈಕೋರ್ಟ್‌ಗೆ ಸ್ವಯಂ ಹೇಳಿಕೆ ನೀಡಿದ್ದವು. ಅದನ್ನು ಪರಿಗಣಿಸಿದ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಅನುಸಾರ 2020-21ನೇ ಸಾಲಿಗೆ ಬೋಧನಾ ಶುಲ್ಕದಲ್ಲಿ ಶೇ.15ರಷ್ಟು ವಿನಾಯಿತಿ ನೀಡುವಂತೆ ರಾಜ್ಯದ ಖಾಸಗಿ ಶಾಲೆಗಳಿಗೆ ನಿರ್ದೇಶಿಸಿದೆ.
 

click me!