ಸರ್ಕಾರಿ ಕಾಲೇಜುಗಳಿಗೆ ಉಪನ್ಯಾಸಕರೇ ಇಲ್ಲ..!

By Kannadaprabha NewsFirst Published Sep 17, 2021, 2:38 PM IST
Highlights

*  ಕಾಲೇಜುಗಳನ್ನು ಮುನ್ನಡೆಸುವುದಕ್ಕೆ ಪ್ರಾಚಾರ್ಯರೂ ಇಲ್ಲ
*  420 ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಲ್ಲ ಕಾಯಂ ಪ್ರಾಚಾರ್ಯರು
*  ಆಸರೆಯಾಗಿದ್ದ ಅತಿಥಿ ಉಪನ್ಯಾಸಕರ ಅವಧಿಯೂ ಸೆ. 11ಕ್ಕೆ ಮುಗಿದಿದೆ
 

ಸೋಮರಡ್ಡಿ ಅಳವಂಡಿ

ಕೊಪ್ಪಳ(ಸೆ.17): ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ ಬಹುತೇಕ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ಪಾಸಾಗಿರುವ ಹಿನ್ನೆಲೆಯಲ್ಲಿ ಪದವಿ ಕಾಲೇಜುಗಳ ಪ್ರವೇಶಾತಿ ಅಧಿಕವಾಗಿದೆ. ಎಲ್ಲೆಡೆ ಕಾಲೇಜು ಹೌಸಫುಲ್‌. ಆದರೆ ಇಲ್ಲಿ ಪಾಠ ಮಾಡಲು ಉಪನ್ಯಾಸಕರೇ ಇಲ್ಲ. ಇದ್ದ ಅತಿಥಿ ಉಪನ್ಯಾಸಕರ ಗುತ್ತಿಗೆ ಮುಗಿದಿದ್ದರಿಂದ ಸೆ.11 ರಂದು ಅವರೂ ಬಿಡುಗಡೆಗೊಂಡಿದ್ದಾರೆ. ಇನ್ನು 420 ಸರ್ಕಾರಿ ಪದವಿ ಕಾಲೇಜುಗಳನ್ನು ಮುನ್ನಡೆಸಲು ಕಾಯಂ ಪ್ರಾಚಾರ್ಯರೇ ಇಲ್ಲ. ಇದರ ಜೊತೆಗೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಿದ್ದು, ಅದನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಸಿಬ್ಬಂದಿ, ಉಪನ್ಯಾಸಕ ಪ್ರಿನ್ಸಿಪಾಲ್‌ರಿಲ್ಲದೇ ಸರ್ಕಾರಿ ಪದವಿ ಕಾಲೇಜುಗಳ ಪರಿಸ್ಥಿತಿ ಅಯೋಮಯವಾಗಿದೆ. ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ ಎಂದೇ ಹೇಳಬಹುದು.

ರಾಜ್ಯದಲ್ಲಿರುವ 420 ಪದವಿ ಕಾಲೇಜುಗಳಲ್ಲಿ ಪ್ರಭಾರಿ ಪ್ರಾಂಶುಪಾಲರಿಂದಲೇ ಕಾರ್ಯ ನಿರ್ವಹಣೆ ನಡೆಯುತ್ತಿದೆ. ಒಬ್ಬೇ ಒಬ್ಬ ಕಾಯಂ ಪ್ರಾಚಾರ್ಯರಿಲ್ಲದ್ದರಿಂದ ಪ್ರಭಾರಿಗಳಿಗೆ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವುದು ಸಹ ಕಷ್ಟ. ಇದರಿಂದ ನಿರ್ವಹಣೆ ಸಮಸ್ಯೆಯೂ ಎದುರಾಗುತ್ತಿದೆ.

ಉಪನ್ಯಾಸಕರೂ ಇಲ್ಲ

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಶೇ.20 ರಷ್ಟೂ ಸಹ ಕಾಯಂ ಉಪನ್ಯಾಸಕರು ಇಲ್ಲ. ಅತಿಥಿ ಉಪನ್ಯಾಸಕರ ಮೇಲೆಯೇ ಬಹುತೇಕ ಕಾಲೇಜುಗಳು ನಡೆಯುತ್ತಿವೆ. ಸೆ.11 ರಂದು ಅವರ ಅವಧಿ ಮುಗಿದಿದ್ದರಿಂದ ಅವರನ್ನು ಬಿಡುಗಡೆ ಮಾಡಲಾಗಿದೆ. ಈ ಬಾರಿ ಕಾಲೇಜಿಗೆ ದಾಖಲಾದ ಮಕ್ಕಳ ಸಂಖ್ಯೆ ಭಾರೀ ಹೆಚ್ಚಿದೆ. ಪ್ರತಿ ವರ್ಷ ಕಾಲೇಜಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 2 ಲಕ್ಷ. ಆದರೆ ಈ ಬಾರಿ ಸುಮಾರು 6.66 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಸುಮಾರು 4.5 ಲಕ್ಷ ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶ ಪಡೆಯಲಿದ್ದಾರೆ. ಈ ಮಕ್ಕಳಿಗೆ ಇದೀಗ ಕೊಠಡಿ, ಮೂಲ ಸೌಕರ್ಯಗಳ ಜೊತೆ ಉಪನ್ಯಾಸಕರ ಕೊರೆಯೂ ದೊಡ್ಡ ಸಮಸ್ಯೆಯಾಗಲಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಗ್ಗೆ ಆತಂಕ ಬೇಡ, ಮುಕ್ತ ಚರ್ಚೆಗೆ ಸಿದ್ಧ ಎಂದ ಸಿಎಂ

ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 18 ಸಾವಿರ ಉಪನ್ಯಾಸಕರಿದ್ದು ಅವರಲ್ಲಿ 14564 ಅತಿಥಿ ಉಪನ್ಯಾಸಕರಿದ್ದಾರೆ. (ಅವರನ್ನೂ ಇದೀಗ ಗುತ್ತಿಗೆ ಮುಗಿದಿದ್ದರಿಂದ ಬಿಡುಗಡೆ ಮಾಡಲಾಗಿದೆ) ಉಳಿದವರು ಮಾತ್ರ ಕಾಯಂ ಲೆಕ್ಟರರ್‌ಗಳು. ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬರೋಬ್ಬರಿ 100 ಉಪನ್ಯಾಸಕರು ಬೇಕು. ಇದರಲ್ಲಿ ಖಾಯಂ ಉಪನ್ಯಾಸಕರು ಸಂಖ್ಯೆ ಇರುವುದು ಕೇವಲ 11.

30 ಸಾವಿರ ಉಪನ್ಯಾಸಕರು ಬೇಕು:

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಹಾಗೂ ದಾಖಲೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರಥಮ ವರ್ಷದ ಪದವಿಗೆ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ಕಾಲೇಜುಗಳಿಗೆ ಅಂದಾಜು 30 ಸಾವಿರ ಉಪನ್ಯಾಸಕರು ಬೇಕಾಗುತ್ತಾರೆ ಎಂದು ಪ್ರಭಾರಿ ಪ್ರಾಚಾರ್ಯರೊಬ್ಬರು ಅಭಿಪ್ರಾಯಪಡುತ್ತಾರೆ. ಈ ಪರಿಸ್ಥಿತಿಯಲ್ಲಿ ಸರ್ಕಾರಿ ಪದವಿ ಕಾಲೇಜು ಮುನ್ನಡೆಸುವುದು ಕಷ್ಟಸಾಧ್ಯ. ಸರ್ಕಾರ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಶಿಕ್ಷಣದ ಗುಣಮಟ್ಟ ಕುಸಿಯುವುದಲ್ಲದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸಲಿದ್ದಾರೆ.

ವೇತನ:

ಪಿಎಚ್‌ಡಿ, ನೆಟ್‌, ಸೆಟ್‌ ಪಾಸಾಗಿದ್ದರೂ ಅತಿಥಿ ಉಪನ್ಯಾಸಕರಿಗೆ ಕೊಡುವ ವೇತನ ತೀರಾ ನಗಣ್ಯ ಎಂದೇ ಹೇಳಬಹುದು. ಕೇವಲ 11-13 ಸಾವಿರ ವೇತನ ನೀಡುತ್ತಿದ್ದಾರೆ. ಪ್ಯೂನ್‌ಗಳಿಗೆ ಸಿಗುವುದಕ್ಕಿಂತಲೂ ಕಡಿಮೆ ಸಂಬಳ ನಮಗೆ ನೀಡುತ್ತಿದ್ದಾರೆ ಎಂದು ಅತಿಥಿ ಉಪನ್ಯಾಸಕರು ಗೋಳಾಡುತ್ತಾರೆ. ಪಶ್ಚಿಮ್‌ ಬಂಗಾಳ, ಓರಿಸ್ಸಾ, ತಮಿಳನಾಡು, ದೆಹಲಿಯಲ್ಲಿ .25-35 ಸಾವಿರ ನೀಡುತ್ತಾರೆ.

ಪೋಷಕರು ಖಾಸಗಿ ಶಾಲೆಯ ವ್ಯಾಮೋಹ ಬಿಡಬೇಕು: ಸಿಎಂ ಬೊಮ್ಮಾಯಿ

ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಮಾರು 87 ಉಪನ್ಯಾಸಕರ ಅಗತ್ಯವಿದ್ದು, ಇದರಲ್ಲಿ 11 ಜನ ಖಾಯಂ ಉಪನ್ಯಾಸಕರಾಗಿದ್ದಾರೆ. ಉಳಿದ 76 ಅತಿಥಿ ಉಪನ್ಯಾಸಕರು. ಸೆ. 11 ರಂದು ನಿಯಮಾನುಸಾರ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಮಾರುತಿ ಎಸ್‌. ತಿಳಿಸಿದ್ದಾರೆ. 

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ನಡೆಯುತ್ತಿರುವುದು ಅತಿಥಿ ಉಪನ್ಯಾಸಕರಿಂದಲೇ. ಶೇ. 80 ರಷ್ಟುಅತಿಥಿ ಉಪನ್ಯಾಸಕರೇ ಇದ್ದೇವೆ. ಈಗ ಸೆ. 11 ರಂದು ನಮ್ಮನ್ನು ಬಿಡುಗಡೆ ಮಾಡಲಾಗಿದ್ದು, ಮತ್ತೆ ನೇಮಕಾತಿ ಮಾಡಿಕೊಳ್ಳಬೇಕಾಗಿದೆ. ಕೋರ್ಟ್‌ ಆದೇಶವಿದ್ದರೂ ಗೌರವಯುತ ವೇತನ ನೀಡುತ್ತಿಲ್ಲ ಎಂದು ಕೊಪ್ಪಳದ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ. ವಿರೇಶ ಸಜ್ಜನ ಹೇಳಿದ್ದಾರೆ. 

ಜಾರಿ ಮಾಡಿರುವ ರಾಜ್ಯ ಸರ್ಕಾರ ಪಾಠ ಮಾಡುವುದಕ್ಕೆ ಉಪನ್ಯಾಸಕರನ್ನೇ ನೇಮಕ ಮಾಡಿಕೊಳ್ಳದಿದ್ದರೆ ಹೇಗೆ? ಕನಿಷ್ಠ ವೇತನ ನೀಡುತ್ತಿಲ್ಲ, ನ್ಯಾಯಾಲಯದ ಆದೇಶದಂತೆ ನಮ್ಮನ್ನು ಸಕ್ರಮ ಮಾಡಿಕೊಳ್ಳುತ್ತಿಲ್ಲ. ವರ್ಷದಲ್ಲಿ 8-10 ತಿಂಗಳು ದುಡಿಸಿಕೊಳ್ಳುತ್ತಿದ್ದಾರೆ. ಶೀಘ್ರ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳುತ್ತಿದ್ದೇವೆ ಎಂದು ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ ತಿಳಿಸಿದ್ದಾರೆ. 
 

click me!