ದೂರ ಶಿಕ್ಷಣದಿಂದ ಕೆಲಸ ಕಳೆದುಕೊಂಡ ವ್ಯಕ್ತಿಗೆ ಉದ್ಯೋಗ: ಹೈಕೋರ್ಟ್‌

By Girish Goudar  |  First Published May 14, 2022, 7:56 AM IST

*   ದೂರ ಶಿಕ್ಷಣ ಬಿಟೆಕ್‌ಗೆ ಮಾನ್ಯತೆ ನೀಡದ ಎಐಸಿಟಿಇ
*  ಸಹಾಯಕ ಎಂಜಿನಿಯರ್‌ ವಜಾಗೊಳಿಸಿದ ಒಳಚರಂಡಿ ಮಂಡಳಿ
*  ಡಿಪ್ಲೊಮಾ ಆಧರಿಸಿ ಕಿರಿಯ ಎಂಜಿನಿಯರ್‌ ಹುದ್ದೆ ನೀಡಲು ಹೈಕೋರ್ಟ್‌ ಆದೇಶ
 


ವೆಂಕಟೇಶ್‌ ಕಲಿಪಿ

ಬೆಂಗಳೂರು(ಮೇ.14):  ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ(Karnataka Open University) ದೂರ ಶಿಕ್ಷಣ ಮೂಲಕ ಪಡೆದ ಬಿ.ಟೆಕ್‌ ಪದವಿಗೆ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (AICTE) ಅನುಮೋದನೆ ನಿರಾಕರಿಸಿದ್ದರಿಂದ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಸಹಾಯಕ ಎಂಜಿನಿಯರ್‌ ಹುದ್ದೆ ಕಳೆದುಕೊಂಡು ಆತಂಕದಲ್ಲಿದ್ದ ವ್ಯಕ್ತಿಯ ನೆರವಿಗೆ ಬಂದಿರುವ ಹೈಕೋರ್ಟ್‌(High Court), ಕಿರಿಯ ಎಂಜಿನಿಯರ್‌ ಹುದ್ದೆ ನೀಡುವಂತೆ ಆದೇಶಿಸುವ ಮೂಲಕ ನ್ಯಾಯ ಕಲ್ಪಿಸಿದೆ.

Tap to resize

Latest Videos

ಕರ್ನಾಟಕ ಮುಕ್ತ ವಿವಿಯ ಬಿ.ಟೆಕ್‌ ಪದವಿ ಮೇಲೆ ಸಹಾಯಕ ಎಂಜಿನಿಯರ್‌ ಆಗಿ ಐದು ವರ್ಷ ಸೇವೆ ಸಲ್ಲಿಸಿದ್ದ ಚಿಕ್ಕಮಗಳೂರಿನ ಕಲ್ಯಾಣ ನಗರ ನಿವಾಸಿ ಕೆ.ಆರ್‌. ದೇವರಾಜು ಅವರಿಗೆ ಎಐಸಿಟಿಇ ಬಿಟೆಕ್‌ ಪದವಿಗೆ ಮಾನ್ಯತೆ ನೀಡದ ಕಾರಣ ಮಂಡಳಿ ಏಕಾಏಕಿ ಕೆಲಸದಿಂದ ತೆಗೆದು ಹಾಕಿತ್ತು. ಈ ಹುದ್ದೆ ನಂಬಿ ಜೀವನ ನಡೆಸುತ್ತಿದ್ದ ಅವರ ಮೊರೆ ಆಲಿಸಿದ ಕೋರ್ಟ್‌, ಕಿರಿಯ ಎಂಜಿನಿಯರ್‌ ಹುದ್ದೆಯ ಮರು ನೇಮಕಾತಿಗೆ ಪರಿಗಣಿಸುವಂತೆ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಆದೇಶಿಸಿ ಮಾನವೀಯತೆ ಮೆರೆದಿದೆ.

Online Course ನೀಡುತ್ತಿರುವ ಎಜುಟೆಕ್ ಸಂಸ್ಥೆಗಳಿಗೆ UGC ಎಚ್ಚರಿಕೆ

ಪ್ರಕರಣದ ವಿವರ:

ಕೆ.ಆರ್‌. ದೇವರಾಜು ಅವರು 2016ರ ಜುಲೈನಲ್ಲಿ ಒಳಚರಂಡಿ ಮಂಡಳಿಯ ಸಹಾಯಕ ಎಂಜಿನಿಯರ್‌ (ಸಿವಿಲ್‌) ಹುದ್ದೆಗೆ ನೇಮಕಗೊಂಡಿದ್ದರು. ಆದರೆ, 2019ರಲ್ಲಿ ಕರ್ನಾಟಕ ಮುಕ್ತ ವಿ.ವಿ.ಯಿಂದ ದೂರ ಶಿಕ್ಷಣದ ಮೂಲಕ ಪಡೆದುಕೊಂಡಿರುವ ಬಿ.ಟೆಕ್‌ ಪದವಿಗೆ ಎಐಸಿಟಿಇ ಅನುಮೋದನೆ ನೀಡಿರಲಿಲ್ಲ. ಆದ ಕಾರಣ, ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು 2019ರ ಸೆ.6ರಂದು ದೇವರಾಜ್‌ಗೆ ನೋಟಿಸ್‌ ಜಾರಿಗೊಳಿಸಿದ್ದರು. ನೋಟಿಸ್‌ಗೆ ಉತ್ತರಿಸಿದ್ದ ದೇವರಾಜ್‌, 2012-2014ನೇ ಸಾಲಿನಲ್ಲಿ ಮುಕ್ತ ವಿವಿಯಿಂದ ಬಿ.ಟೆಕ್‌ ಪದವಿ ಪ್ರಮಾಣಪತ್ರ ಪಡೆದಿದ್ದು, ನೇಮಕಾತಿಯಲ್ಲಿ(Recruitment) ತಮ್ಮ ಯಾವ ಲೋಪವಿಲ್ಲ ಎಂದಿದ್ದರು. ಆ ವಿವರಣೆ ತಿರಸ್ಕರಿಸಿ ಅವರ ನೇಮಕಾತಿ ರದ್ದುಪಡಿಸಿ 2021ರ ಜು.13ರಂದು ಮಂಡಳಿ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ದೇವರಾಜ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ (UGC) 2015ರ ಜೂ.16ರಂದು ನೀಡಿರುವ ಪ್ರಕಟಣೆಯ ಪ್ರಕಾರ ಕರ್ನಾಟಕ ಮುಕ್ತ ವಿವಿ 2012-13ನೇ ಸಾಲಿನವರೆಗೆ ನೀಡಿರುವ ಪದವಿ ಪ್ರಮಾಣ ಪತ್ರಗಳು ಮಾನ್ಯತೆ ಹೊಂದಿಲ್ಲ. ಆದರೂ ಮುಕ್ತ ವಿವಿ ರಾಜ್ಯಾದ್ಯಂತ(Karnataka) ನೀಡಿರುವ ಪದವಿ ಪ್ರಮಾಣ ಪತ್ರಗಳಿಗೆ ಮಾನ್ಯತೆ ಇರುವುದಾಗಿ ಸರ್ಕಾರ ನಿರ್ಣಯಿಸಿದೆ ಎಂದು ಅರ್ಜಿದಾರರ ವಕೀಲರು ನ್ಯಾಯಪೀಠಕ್ಕೆ ವಿವರಿಸಿದರು.
ದೇವರಾಜ್‌ ಸಹಾಯಕ ಎಂಜಿನಿಯರ್‌ ಹುದ್ದೆಯಲ್ಲಿ ಐದು ವರ್ಷ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಸಿವಿಲ್‌ ಎಂಜಿನಿಯರ್‌ ಡಿಪ್ಲೊಮಾ ಪದವಿ ಪಡೆದಿದ್ದು, ಅದಕ್ಕೆ ಮಾನ್ಯತೆಯಿದೆ. ಹಾಗಾಗಿ, ಡಿಪ್ಲೊಮಾ ಆಧರಿಸಿ ದೇವರಾಜ್‌ ಅವರನ್ನು ಕಿರಿಯ ಎಂಜಿನಿಯರ್‌ ಹುದ್ದೆಗೆ ಪರಿಣಿಸುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿದರು.

ದೂರಶಿಕ್ಷಣ ಕೋರ್ಸ್‌ಗಳಿಗೆ ಅನುಮತಿ ರದ್ದು ನಿರ್ಣಯ ಸರಿಯಲ್ಲ

ಈ ವಾದವನ್ನು ಒಪ್ಪದ ಯುಜಿಸಿ, ಎಐಸಿಟಿಇ ಮತ್ತು ಮಂಡಳಿ ಪರ ವಕೀಲರು, ದೂರ ಶಿಕ್ಷಣ(Distance Education) ಮೂಲಕ ತಾಂತ್ರಿಕ ವಿಷಯಗಳಲ್ಲಿ ಪಡೆದಿರುವ ಪದವಿಗಳಿಗೆ ಮಾನ್ಯತೆ ಇಲ್ಲ. ಈ ಕುರಿತು ಸುಪ್ರೀಂ ಕೋರ್ಟ್‌ ಮುಂದೆ ಎಐಸಿಟಿಇ ಮತ್ತು ಯುಜಿಸಿ ತಳೆದಿರುವ ನಿಲುವುಗಳ ಪ್ರಕಾರ ಅರ್ಜಿದಾರರ ಸಹಾಯಕ ಎಂಜಿನಿಯರ್‌ ಹುದ್ದೆ ನೇಮಕಾತಿ ರದ್ದತಿಯಲ್ಲಿ ಯಾವುದೇ ಲೋಪವಿಲ್ಲ. ಸಿವಿಲ್‌ ಎಂಜಿನಿಯರ್‌ ಡಿಪ್ಲೊಮಾ ಪದವಿ ಆಧರಿಸಿ ಸಹಾಯಕ ಎಂಜಿನಿಯರ್‌ ಹುದ್ದೆ ಪಡೆಯಲು ಅರ್ಜಿದಾರರು ಅರ್ಹರಾಗಿಲ್ಲ ಎಂದು ಕೋರ್ಟ್‌ ಗಮನಕ್ಕೆ ತಂದರು.

ವಾದ-ಪ್ರತಿವಾದ ನ್ಯಾಯಮೂರ್ತಿ ಆರ್‌.ದೇವದಾಸ್‌ ಅವರು, ಸಿವಿಲ್‌ ಎಂಜಿನಿಯರ್‌ ಡಿಪ್ಲೊಮಾ ಪದವಿ ಆಧರಿಸಿ ಎರಡು ತಿಂಗಳಲ್ಲಿ ಕಿರಿಯ ಎಂಜಿನಿಯರ್‌ ಹುದ್ದೆಯ ಮರು ನೇಮಕಾತಿಗೆ ದೇವರಾಜ್‌ ಅವರನ್ನು ಪರಿಗಣಿಸಬೇಕು. ಮರು ನೇಮಕಾತಿಯು ಮೂಲ ನೇಮಕಾತಿಯಿಂದ ಪೂರ್ವಾನ್ವಯವಾಗುವಂತೆ ನೋಡಿಕೊಳ್ಳಬೇಕು ಎಂದು ಸರ್ಕಾರ ಮತ್ತು ಮಂಡಳಿಗೆ ಆದೇಶಿಸಿದರು.
 

click me!