ಶಾಲೆ ಪ್ರಾರಂಭಕ್ಕೆ ರಾಜ್ಯ ಸರ್ಕಾರ ಅಧಿಕೃತ ಆದೇಶ: ಇಲ್ಲಿದೆ ಸಂಪೂರ್ಣ ಮಾಹಿತಿ

By Suvarna NewsFirst Published Feb 19, 2021, 3:51 PM IST
Highlights

ರಾಜ್ಯದಲ್ಲಿ ಶಾಲೆ ಪ್ರಾರಂಭಕ್ಕೆ ದಿನಾಂಕ ಫಿಕ್ಸ್ ಆಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. 

ಬೆಂಗಳೂರು, (ಫೆ.19): ರಾಜ್ಯದಲ್ಲಿ 6ರಿಂದ 8ನೇ ತರಗತಿಗಳನ್ನು ಫೆ. 22ರಿಂದ ಪ್ರಾರಂಭಿಸಲು ಕಳೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಅದರಂತೆ ರಾಜ್ಯ ಸರ್ಕಾರ ಇಂದು (ಶುಕ್ರವಾರ) ಈ ಬಗ್ಗೆ  ಅಧಿಕೃತ ಆದೇಶ ಹೊರಡಿಸಿದೆ.

ಆದರೆ ಬೆಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಸಹಿತ ಕೇರಳ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳ ಶಾಲೆಗಳಲ್ಲಿ ಅಂದಿನಿಂದ 8ನೇ ತರಗತಿಗೆ ಮಾತ್ರ ಶಾಲೆ, ಅದಕ್ಕಿಂತ ಕಿರಿಯರಿಗೆ ಎಂದಿನಂತೆ ವಿದ್ಯಾಗಮ ಮುಂದುವರಿಯಲಿದೆ. 

ಸಭೆಯಲ್ಲಿ ಮಹತ್ವದ ನಿರ್ಧಾರ: ಸುದ್ದಿಗೋಷ್ಠಿಯಲ್ಲಿ ಮಾಹಿತಿ ಬಿಚ್ಚಿಟ್ಟ ಸುರೇಶ್ ಕುಮಾರ್

ಕಳೆದ ಮಂಗಳವಾರ (ಫೆ.16) ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ನಡೆದ ತಾಂತ್ರಿಕ ಸಲಹಾ ಸಮಿತಿಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು.

6ರಿಂದ ದ್ವಿತೀಯ ಪಿಯುವರೆಗೆ ದಿನ ಪೂರ್ತಿ ತರಗತಿ ನಡೆಯಲಿದೆ. ಆರೋಗ್ಯ ಇಲಾಖೆ ಶಾಲೆಗೆ ಹಾಜರಾಗುತ್ತಿರುವ ಮಕ್ಕಳ ರ್ಯಾಡಮ್‌ ಕೋವಿಡ್‌ ಪರೀಕ್ಷೆ ನಡೆಸಲಿದೆ.

ಕೇರಳದಿಂದ ಗಡಿಯ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನೆಗೆಟಿವ್‌ ಫಲಿತಾಂಶವಿದ್ದರೆ ಮಾತ್ರ ಶಾಲೆಗೆ ಹಾಜರಾಗಬೇಕು. 6ರಿಂದ 8ನೇ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಪಾಲಕ ಅಥವಾ ಪೋಷಕರಿಂದ ಒಪ್ಪಿಗೆ ಪತ್ರ ತರುವುದು ಕಡ್ಡಾಯ. 

ತರಗತಿಗೆ ಹಾಜರಾಗಬೇಕು ಎಂಬ ಕಡ್ಡಾಯ ನಿಯಮವಿಲ್ಲ ಎಂದು ಸೂಚಿಸಲಾಗಿದೆ. 6ರಿಂದ 8ನೇ ತರಗತಿಯರೆಗೆ ತರಗತಿಗಳನ್ನು ಪೂರ್ಣ ಪ್ರಮಾಣದಲ್ಲಿ ನಡೆಸುವುದರಿಂದ ವಿದ್ಯಾರ್ಥಿಗಳು ಮಧ್ಯಾಹ್ನದ ಊಟವನ್ನು ಮನೆಯಿಂದಲೇ ತರುವಂತೆ ಸೂಚಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

click me!