3700 ಸರ್ಕಾರಿ ಶಾಲೆ, ಕಾಲೇಜಲ್ಲಿ ಸದ್ಯದಲ್ಲೇ ಸ್ಮಾರ್ಟ್‌ ಕ್ಲಾಸ್‌ ಶುರು, ಖಾಸಗಿ ಶಾಲೆಗಳ ಮಾದರಿ ಡಿಜಿಟಲ್‌ ಶಿಕ್ಷಣಕ್ಕೆ ಸರ್ಕಾರ ಸಿದ್ಧತೆ

Published : Sep 05, 2026, 06:57 AM IST
Karnataka smart classroom

ಸಾರಾಂಶ

ಕರ್ನಾಟಕ 2026-27ನೇ ಸಾಲಿನಲ್ಲಿ 3,767 ಸರ್ಕಾರಿ ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ 'ಸ್ಮಾರ್ಟ್‌ ಕ್ಲಾಸ್‌'ಗಳನ್ನು ಆರಂಭಿಸಲು ಮುಂದಾಗಿದೆ. 88.52 ಕೋಟಿ ರೂ. ವೆಚ್ಚದ ಈ ಯೋಜನೆಯು, ಡಿಜಿಟಲ್ ಶಿಕ್ಷಣ ನೀಡಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಆಧಾರಿತ ಕಲಿಕೆಯನ್ನು ಒದಗಿಸುವ ಗುರಿ ಹೊಂದಿದೆ.

ಲಿಂಗರಾಜು ಕೋರಾ

ಕನ್ನಡಪ್ರಭ ವಾರ್ತೆ ಬೆಂಗಳೂರು (ಸೆ.5): ಖಾಸಗಿ ಶಾಲೆಗಳ ಮಾದರಿಯಲ್ಲಿ ಸರ್ಕಾರಿ ಶಾಲೆ, ಪಿಯು ಕಾಲೇಜುಗಳಲ್ಲೂ ಡಿಜಿಟಲ್‌ ಶಿಕ್ಷಣ ನೀಡಲು 2026-27ನೇ ಸಾಲಿನಲ್ಲಿ 3,767 ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ‘ಸ್ಮಾರ್ಟ್‌ ಕ್ಲಾಸ್‌’ಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ. ಕಳೆದ ಕೆಲ ವರ್ಷಗಳಿಂದ 50, 100 ಶಾಲೆ, ಕಾಲೇಜುಗಳಲ್ಲಿ ಸ್ಮಾರ್ಟ್‌ಕ್ಲಾಸ್‌ ಆರಂಭಿಸುತ್ತಾ ಬರುತ್ತಿರುವ ಸರ್ಕಾರ, ಈ ಬಾರಿ ದೊಡ್ಡಸಂಖ್ಯೆಯಲ್ಲಿ 3,767 ಪ್ರಾಥಮಿಕ, ಪ್ರೌಢ ಮತ್ತು ಪಿಯು ಕಾಲೇಜುಗಳನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಂಡಿದೆ. ಇದಕ್ಕಾಗಿ 88.52 ಕೋಟಿ ರು. ಅನುದಾನ ಒದಗಿಸಿದೆ.

ಕಳೆದ ಫೆಬ್ರವರಿಯಲ್ಲೇ ಈ ಸಂಬಂಧ ಆದೇಶ ಹೊರಡಿಸಿದ್ದ ಸರ್ಕಾರ ಇದೀಗ ಟೆಂಡರ್‌ ಆಹ್ವಾನಿಸಿದೆ. ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಆಹ್ವಾನಿಸಿರುವ ಟೆಂಡರ್‌ ಪ್ರಕ್ರಿಯೆ ಕಾಲಮಿತಿಯಲ್ಲಿ ಪೂರ್ಣಗೊಂಡರೆ ಒಂದೆರಡು ತಿಂಗಳಲ್ಲೇ ರಾಜ್ಯದ 3,700ಕ್ಕೂ ಹೆಚ್ಚು ಶಾಲೆ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಲಕ್ಷಾಂತರ ಮಕ್ಕಳಿಗೆ ತಂತ್ರಜ್ಞಾನ ಆಧಾರಿತ ಡಿಜಿಟಲ್‌ ಶಿಕ್ಷಣ ದೊರೆಯಲಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲೂ ದೊಡ್ಡ ಮಟ್ಟದ ಡಿಜಿಟಲ್‌ ಶಿಕ್ಷಣ ಕ್ರಾಂತಿಗೆ ದಾರಿಯಾಗಲಿದೆ.

ಏನಿದು ಸ್ಮಾರ್ಟ್‌ಕ್ಲಾಸ್‌?

ಕಂಪ್ಯೂಟರ್‌, ಸ್ಮಾರ್ಟ್‌ಟೀವಿ, ಪ್ರೊಜೆಕ್ಟರ್‌ ಮೂಲಕ 2ಡಿ, 3ಡಿ ವಿಧಾನದಲ್ಲಿ ಬೋಧನೆ ಮಾಡುವ ವಿಧಾನ. ಇದರಿಂದ ಕಠಿಣ ವಿಷಯಗಳನ್ನೂ ಮಕ್ಕಳಿಗೆ ಸುಲಭವಾಗಿ ಅರ್ಥ ಮಾಡಿಸಬಹುದು. ಕಪ್ಪು ಹಲಗೆ ಮೇಲೆ ಚಿತ್ರ ಬಿಡಿಸಲು ಶಿಕ್ಷಕರಿಗೆ ತಗುಲುವ ಸಮಯ ಉಳಿತಾಯವಾಗಲಿದ್ದು, ಮಕ್ಕಳ ಜತೆ ಚರ್ಚೆಗೆ ಹೆಚ್ಚು ಸಮಯ ಸಿಗುತ್ತದೆ.

ಯಾವೆಲ್ಲಾ ಶಾಲೆಗಳಿಗೆ ಲಭ್ಯ?:

ಯೋಜನೆಗೆ ಕೇವಲ ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮೀಣ ಭಾಗದ ಶಾಲೆ, ಕಾಲೇಜುಗಳನ್ನೂ ಆಯ್ಕೆ ಮಾಡಲಾಗಿದೆ. ಈ ಪೈಕಿ 1,600ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳು, ಸುಮಾರು 1977 ಪ್ರೌಢ ಶಾಲೆಗಳು ಮತ್ತು 160ಕ್ಕೂ ಹೆಚ್ಚು ಪಿಯು ಕಾಲೇಜುಗಳು ಸೇರಿವೆ.

ಕಳೆದ ಫೆಬ್ರವರಿಯಲ್ಲೇ ಸ್ಮಾರ್ಟ್‌ ಕ್ಲಾಸ್‌ ಯೋಜನೆಗೆ ಅನುಮೋದನೆ ನೀಡಿದ್ದ ಸರ್ಕಾರ ಸೂಕ್ತ ಅನುದಾನವನ್ನೂ ಮೀಸಲಿಟ್ಟಿತ್ತು. ಇದೀಗ ಟೆಂಡರ್‌ ಆಹ್ವಾನಿಸಿದ್ದು ಸೆ.10ರಂದು ಟೆಕ್ನಿಕಲ್‌ ಬಿಡ್‌ ಓಪನ್‌ ಆಗಲಿದೆ. ಅತ್ಯುತ್ತಮ ಗುಣಮಟ್ಟದ ಸ್ಮಾರ್ಟ್‌ ಕ್ಲಾಸ್‌ ಉಪಕರಣಗಳನ್ನು ಒದಗಿಸಬಲ್ಲ ಸಾಮರ್ಥ್ಯವಿರುವ ಕಂಪನಿಗಳು ತಮ್ಮ ಉಪಕರಣಗಳ ಮೂಲಕ ಪ್ರಾತ್ಯಕ್ಷಿಕೆ ನೀಡಬಹುದು. ಪ್ರತಿ ಶಾಲೆಗೆ ಇಂಟರ್‍ಯಾಕ್ಟಿವ್‌ ಡಿಸ್‌ಪ್ಲೇ ಬೋರ್ಡ್‌, ಯುಪಿಎಸ್‌ ಸೇರಿ ವಿವಿಧ ಉಪಕರಣಗಳಿಗೆ ಟೆಂಡರ್‌ ಕರೆಯಲಾಗಿದೆ. ಸೆ.18ಕ್ಕೆ ಆರ್ಥಿಕ ಬಿಡ್‌ ಓಪನ್‌ ಆಗಲಿದೆ.

ಏನಿದು ಸ್ಮಾರ್ಟ್‌ಕ್ಲಾಸ್‌?

ಡಿಜಿಟಲ್ ಉಪಕರಣಗಳೊಂದಿಗೆ ಸಜ್ಜುಗೊಂಡ ತರಗತಿ ಕೊಠಡಿ. ಇದರಲ್ಲಿ ಕಂಪ್ಯೂಟರ್, ಪ್ರೊಜೆಕ್ಟರ್, ಸ್ಮಾರ್ಟ್ ಟಿವಿ ಹಾಗೂ ಇಂಟರ್‍ಯಾಕ್ಟಿವ್ ಫ್ಲಾಟ್ ಪ್ಯಾನೆಲ್‌ಗಳನ್ನು ಬಳಸಲಾಗುತ್ತದೆ. ಪುಸ್ತಕ ಬೋಧನೆ ಜತೆಗೆ ದೃಶ್ಯ ಮತ್ತು ಶ್ರವ್ಯ ಮಾಧ್ಯಮ ಮೂಲಕ ಪಾಠ ಮಾಡಲಾಗುತ್ತದೆ. ಪ್ರೊಜೆಕ್ಟರ್‌ ಮೂಲಕ ಅಪ್ಲೋಡ್‌ ಮಾಡಿರುವ ಪಾಠವನ್ನು ಮಕ್ಕಳು 2ಡಿ ಹಾಗೂ 3ಡಿ ಎಫೆಕ್ಟ್‌ನಲ್ಲಿ ನೋಡಬಹುದು ಹಾಗೂ ಕೇಳಬಹುದು. ಅನಿಮೇಷನ್ ವಿಡಿಯೊಗಳು ಮತ್ತು ಚಿತ್ರಗಳ ಮೂಲಕ ಕಠಿಣ ವಿಷಯಗಳನ್ನು (ವಿಜ್ಞಾನ, ಗಣಿತ) ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

ಕಪ್ಪುಹಲಗೆ ಮೇಲೆ ಚಿತ್ರಗಳನ್ನು ಬಿಡಿಸಲು ತಗಲುವ ಸಮಯ ಉಳಿದು, ವಿದ್ಯಾರ್ಥಿಗಳೊಂದಿಗೆ ಚರ್ಚಿಸಲು ಶಿಕ್ಷಕರಿಗೆ ಹೆಚ್ಚು ಸಮಯ ಸಿಗುತ್ತದೆ. ಮಕ್ಕಳಲ್ಲಿ ಕಲಿಕೆ ಬಗ್ಗೆ ಆಸಕ್ತಿ ಮತ್ತು ಗ್ರಹಿಕೆ ಶಕ್ತಿ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಸ್ಥಳೀಯ ಭಾಷೆಯ ಡಿಜಿಟಲ್ ಕಲಿಕಾ ಸಾಮಗ್ರಿಗಳನ್ನು ಒದಗಿಸಲಾಗುತ್ತದೆ. ಪಾಠದಲ್ಲಿ ಏನೇ ಅನುಮಾನ ಬಂದರೂ ಮಕ್ಕಳು ಸ್ಮಾರ್ಟ್‌ಕ್ಲಾಸ್‌ನಲ್ಲಿ ಪರಿಹರಿಸಿಕೊಳ್ಳಬಹುದು.

PREV
Read more Articles on
click me!

Recommended Stories

ಸರ್ಕಾರಿ ಶಾಲೆಯಲ್ಲೇ ಸ್ಪೋಕನ್‌ ಇಂಗ್ಲಿಷ್‌ ಕ್ರಾಂತಿ: ಕವನ್ ಮೇಷ್ಟ್ರು ಕಲಿಸಿದ ಪಾಠಕ್ಕೆ ಮಕ್ಕಳೇ ಸಾಕ್ಷಿ!
7ನೇ ತರಗತಿ ಮಕ್ಕಳಿಗೂ ಅ,ಆ,ಇ,ಈ ಬರುತ್ತಿಲ್ಲ; ಅಕ್ಷರ ಕಲಿಸದ ಶಿಕ್ಷಕರನ್ನ ಸಸ್ಪೆಂಡ್ ಮಾಡಿ-ಪ್ರದೀಪ್ ಈಶ್ವರ್!