
ಬೆಂಗಳೂರು (ಸೆ.9) ರಾಜ್ಯದ ಜಿಲ್ಲಾ ಕೇಂದ್ರಗಳ ವ್ಯಾಪ್ತಿಯಲ್ಲಿರುವ ನಗರ ಪ್ರದೇಶಗಳ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 8, 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳನ್ನು ಹಳ್ಳಿಗಳಿಗೆ ಕರೆದೊಯ್ದು ಗ್ರಾಮೀಣ ಜೀವನದ ವಿಶಿಷ್ಟ ಅನುಭವ ಒದಗಿಸುವ ಉದ್ದೇಶದಿಂದ ‘ಗ್ರಾಮಾನುಭವ’ ಎಂಬ ಕಾರ್ಯಕ್ರಮ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಆದೇಶಿಸಿದೆ.
ನಗರಪ್ರದೇಶಗಳ ಎಲ್ಲಾ ಪಿಎಂಶ್ರೀ ಮತ್ತು ಕೆಪಿಎಸ್ ಶಾಲೆಗಳು ಹಾಗೂ 800ಕ್ಕಿಂತ ಹೆಚ್ಚಿನ ದಾಖಲಾತಿ ಹೊಂದಿರುವ ಇತರೆ ಸರ್ಕಾರಿ ಶಾಲೆಗಳು ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜುಗಳು ಸೇರಿದಂತೆ ಒಟ್ಟು 160 ಸರ್ಕಾರಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ 2.46 ಕೋಟಿ ರು. ವೆಚ್ಚದಲ್ಲಿ ಈ ಗ್ರಾಮಾನುಭವ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ.
ಈ ಕಾರ್ಯಕ್ರಮದಡಿ ವಿದ್ಯಾರ್ಥಿಗಳನ್ನು ಹಳ್ಳಿಗಳಿಗೆ ಕರೆದೊಯ್ದು ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕಲೆ ಮತ್ತು ಸಂಸ್ಕೃತಿ ಸೇರಿದಂತೆ ಗ್ರಾಮೀಣ ಜೀವನದ ವಿಶಿಷ್ಟ ಅನುಭವ ಒದಗಿಸಲಾಗುತ್ತದೆ.
ಒಂದು ರಾತ್ರಿ ಸೇರಿದಂತೆ ಎರಡು ದಿನಗಳ ಕಾಲ ಗ್ರಾಮದಲ್ಲಿಯೇ ಉಳಿದುಕೊಳ್ಳುವ ಮಕ್ಕಳಿಗೆ ಗ್ರಾಮೀಣದ ಜನಜೀವನ, ಕೃಷಿ ಚಟುವಟಿಕೆಗಳು, ಸಾಂಸ್ಕೃತಿಕ ಜಗತ್ತಿನ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಪ್ರತಿ ಶೈಕ್ಷಣಿಕ ಸಾಲಿನಲ್ಲಿಯೂ ಸೆಪ್ಟೆಂಬರ್‌ನಿಂದ ಡಿಸೆಂಬರ್ ಒಳಗೆ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತದೆ. ಜನವರಿ ಅಥವಾ ಫೆಬ್ರವರಿಯಲ್ಲಿ ಈ ಭೇಟಿ ಕುರಿತು ಶಾಲಾ ಮಟ್ಟದ ಸಂವಹನ ಚಟುವಟಿಕೆಗಳನ್ನು ನಡೆಸಬೇಕೆಂದು ಸೂಚಿಸಲಾಗಿದೆ.