Coronavirus ಬೆಂಗಳೂರಿನಲ್ಲಿ ಶಾಲೆಗಳ ರಜೆ ಅವಧಿ ವಿಸ್ತರಣೆ, ಶಿಕ್ಷಣ ಇಲಾಖೆ ಆದೇಶ

By Suvarna News  |  First Published Jan 12, 2022, 3:53 PM IST

* ಕರ್ನಾಟಕದಲ್ಲಿ ಕೊರೋನಾ ಹೆಚ್ಚಳ
* ಬೆಂಗಳೂರಿನಲ್ಲಿ ಜನವರಿ 31ರವರೆಗೆ ಶಾಲೆಗಳಿಗೆ ರಜೆ
* ಇತರೆ ಜಿಲ್ಲೆಗಳ ಬಗ್ಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ


ಬೆಂಗಳೂರು, (ಜ.12):  ಕೊರೋನಾ 3ನೇ ಅಲೆ ವ್ಯಾಪಕವಾಗಿ (Corona Third wave) ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ(Bengaluru) ಜನವರಿ 31ರವರೆಗೆ ಶಾಲೆಗಳಿಗೆ ರಜೆ ವಿಸ್ತರಿಸಿ ಕರ್ನಾಟಕ ಶಿಕ್ಷಣ ಇಲಾಖೆ(Karnataka Education Department) ಆದೇಶ ಹೊರಡಿಸಿದೆ. 

ಈ ಮೊದಲು ಜನವರಿ 19ರವರೆಗೆ ಮಾತ್ರ ಶಾಲೆಗಳಿಗೆ ರಜೆ (Schools holiday) ನೀಡಲಾಗಿತ್ತು. ಆದ್ರೆ, ದಿನದಿಂದ ದಿನಕ್ಕೆ ಕೊರೋನಾ ಸೋಂಕಿನ ಪ್ರಮಾಣ ವ್ಯಾಪಕವಾಗಿ ಹೆಚ್ಚಳವಾಗುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಸೋಂಕು ಮಿತಿ ಮೀರುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳ ರಜೆ ವಿಸ್ತರಣೆ ಮಾಡಲಾಗಿದೆ.

Tap to resize

Latest Videos

undefined

ಇನ್ನು ಈ  ಬಗ್ಗೆ ಇಂದು(ಬುಧವಾರ) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ನಾಗೇಶ್, ಬೆಂಗಳೂರಿನಲ್ಲಿ ಜ.31ರವರೆಗೆ 1ರಿಂದ 9ನೇ ತರಗತಿವರೆಗೆ ರಜೆ ಘೋಷಿಸಲಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ 10, 11, 12ನೇ ತರಗತಿ ನಡೆಸುತ್ತಿದ್ದೇವೆ. ಗ್ರಾಮಾಂತರ ಪ್ರದೇಶದಲ್ಲಿ ಕೊರೋನಾ ಸೋಂಕು ಕಡಿಮೆಯಿದೆ. ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. 

ಕೊರೋನಾ ಸಂಬಂಧಿತ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಂಗಳೂರು, ಮೈಸೂರು, ಬೆಳಗಾವಿ ಬಿಟ್ಟು ಬೇರೆಲ್ಲೂ ಆತಂಕವಿಲ್ಲ ಎಂದು ಹೇಳಿದರು.

ಬೆಂಗಳೂರು ನಗರದಲ್ಲಿ ಸೋಂಕಿನ ತೀವ್ರತೆ ಆಧರಿಸಿ ಮುಂದಿನ ದಿನಗಳಲ್ಲಿ 10, 11 ಹಾಗೂ 12ನೇ ತರಗತಿ ಬಗ್ಗೆ ಅಗತ್ಯ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಇನ್ನು ಬೆಂಗಳೂರು ಹೊರತುಪಡಿಸಿ ಇನ್ನುಳಿದ ಜಿಲ್ಲೆಗಳಲ್ಲೂ ಕೊರೋನಾ ಏರಿಕೆಯಾಗಿ ಪಾಸಿಟಿವಿಟಿ ಪ್ರಮಾಣವು ಶೇ 5ಕ್ಕಿಂತ ಹೆಚ್ಚಾದರೆ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದು ವಿವರಿಸಿದರು.

ಧಾರವಾಡದಲ್ಲಿ ಶಾಲೆ ಬಂದ್
ಧಾರವಾಡ ಜಿಲ್ಲೆಯ ಧಾರವಾಡ ನಗರ ಮತ್ತು ಗ್ರಾಮೀಣ ಹಾಗೂ ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ  ತಾಲೂಕಿನಾದ್ಯಂತ ಬೌತಿಕ ತರಗತಿಗಳು, ವಸತಿ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳನ್ನು ಒಳಗೊಂಡು ಎಲ್ಲ ಮಾಧ್ಯಮದ 1 ರಿಂದ 8ನೇ ತರಗತಿವರೆಗಿನ  ಶಾಲೆಗಳನ್ನು  ಜ.13 ರಿಂದ ಮುಂದಿನ ಆದೇಶದ ವರೆಗೆ ತೆರೆಯದಂತೆ ನಿರ್ದೇಶಿಸಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು  ಇಂದು(ಜ.12) ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ಆನ್ ಲೈನ್ ಮುಖಾಂತರ ತರಗತಿಗಳನ್ನು ನಡೆಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

.ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಾಲೆ, ಹಾಸ್ಟೆಲ್‌ಗಳಲ್ಲಿ ಹೆಚ್ಚಿನ ಸಂಖ್ಯೆ ಕೊರೋನಾ ಕೇಸ್ ಪತ್ತೆಯಾಗುತ್ತಿವೆ. ಇದರಿಂದ ಹಲವೆಡೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಲ್ಲದೇ ರಾಜ್ಯದಲ್ಲಿ ಶಾಲೆ ಬಂದ್ ಮಾಡುವ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ.

ಇನ್ನು ಈ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (Education Minister BC Nagesh) ಪ್ರತಿಕ್ರಿಯಿಸಿದ್ದು, ಶಾಲೆಗಳಿಂದ ಕೋವಿಡ್ ಸೋಂಕು ಹರಡುತ್ತದೆ ಎಂದು ಎಲ್ಲೂ ಸಾಬೀತಾಗಿಲ್ಲ. ಹೀಗಾಗಿ ರಾಜ್ಯವ್ಯಾಪಿ ಶಾಲೆಗಳನ್ನು ಮುಚ್ಚುವ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದರು.

click me!