
ಬೆಂಗಳೂರು: ಕರ್ನಾಟಕ ಸರ್ಕಾರ ಮತ್ತು ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಸಹಯೋಗದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ರಾಜ್ಯದ ವಿದ್ಯಾರ್ಥಿನಿಯರಿಗಾಗಿ 'ದೀಪಿಕಾ' ವಿದ್ಯಾರ್ಥಿವೇತನ ಯೋಜನೆ ಜಾರಿಗೆ ಬರುವುದಾಗಿ ಘೋಷಿಸಲಾಗಿದೆ. ಈ ಯೋಜನೆಯನ್ನು ಜಿಕೆವಿಕೆ ಆವರಣದಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅಜೀಮ್ ಪ್ರೇಮ್‌ಜಿ ಫೌಂಡೇಶನ್‌ನ ಮುಖ್ಯಸ್ಥ ಅಜೀಮ್ ಪ್ರೇಮ್‌ಜಿ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, “ಅಜೀಮ್ ಪ್ರೇಮ್‌ಜಿ ಕಳೆದ 25 ವರ್ಷಗಳಿಂದ ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಶಾಲಾ ಮಕ್ಕಳಿಗೆ ಪ್ರತಿದಿನ ಮೊಟ್ಟೆ ವಿತರಣೆ ಮಾಡುವುದರಿಂದ ಹಿಡಿದು, ಇದೀಗ ಕಾಲೇಜು ವಿದ್ಯಾರ್ಥಿನಿಯರಿಗೆ ಸಹಾಯವಾಗುವಂತೆ 'ದೀಪಿಕಾ' ವಿದ್ಯಾರ್ಥಿವೇತನ ಯೋಜನೆಯನ್ನು ಪ್ರಾರಂಭಿಸಿರುವುದು ಶ್ಲಾಘನೀಯ ಎಂದರು.
ಮುಖ್ಯಮಂತ್ರಿಗಳು ಹೆಣ್ಣುಮಕ್ಕಳ ಶಿಕ್ಷಣದ ಅಗತ್ಯವನ್ನು ಹಿಗ್ಗಾಮುಗ್ಗವಾಗಿ ವಿವರಿಸಿದರು. “ಹೆಣ್ಣುಮಕ್ಕಳು ಸಾಮಾನ್ಯವಾಗಿ ಬಾಲ್ಯವಿವಾಹ, ಪೊಕ್ಸೊ ಪ್ರಕರಣಗಳು ಮತ್ತು ಅನೇಕ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ. ಅವರು ಶಿಕ್ಷಣ ಪಡೆದರೆ ಸಮಾಜವೆಂದರೇನು, ಇತಿಹಾಸವೆಂದರೇನು ಎಂಬ ಅರಿವು ಬರಲಿದೆ. ಅಸಮಾನತೆ ಅಳಿದು ಹೋಗಿ, ಪುರುಷ-ಮಹಿಳೆ ಸಮಾನತೆ ಸಾಧಿಸಬಹುದು. ಜಾತಿ ಅಸಮಾನತೆ ಕೂಡ ತೊಡೆದು ಹಾಕಬಹುದು,” ಎಂದು ಹೇಳಿದರು.
ಮಹಾತ್ಮ ಗಾಂಧಿಜಿ ಸಂಪತ್ತು ಗಳಿಸಿದ ನಂತರ ಅದನ್ನು ಸಮಾಜದ ಕಲ್ಯಾಣಕ್ಕಾಗಿ ಬಳಸಬೇಕು ಎಂದು ಹೇಳಿದ್ದರು. ಅಜೀಮ್ ಪ್ರೇಮ್‌ಜಿ ತಮ್ಮ ಆದಾಯದ ಒಂದು ದೊಡ್ಡ ಭಾಗವನ್ನು ಸಮಾಜಮುಖಿ ಸೇವೆಗೆ ಮೀಸಲಿಡುತ್ತಿದ್ದಾರೆ. ಅವರು ನಿಜವಾಗಿಯೂ ಗಾಂಧಿಯವರ ಆದರ್ಶದ ವಾರಸುದಾರರಾಗಲು ಅರ್ಹರು,” ಎಂದು ಸಿಎಂ ಶ್ಲಾಘಿಸಿದರು.
ಸಿದ್ದರಾಮಯ್ಯ ಮುಂದುವರಿದು, “ಮೂಢನಂಬಿಕೆಗಳನ್ನು ಬಳಸಿಕೊಂಡು ಕೆಲವು ಹಿತಾಸಕ್ತಿಗಳು ಜನರ ಮೇಲೆ ದೌರ್ಜನ್ಯ ಮಾಡಲು ಯತ್ನಿಸುತ್ತಿವೆ. ಇವುಗಳ ವಿರುದ್ಧ ಹೋರಾಡಲು ಶಿಕ್ಷಣ ಅವಶ್ಯಕ. ಶಿಕ್ಷಣವೇ ವೈಚಾರಿಕತೆ ಬೆಳೆಸುತ್ತದೆ, ಅಂಧಕಾರ ನಿವಾರಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿಗಳು ತಮ್ಮ ಸರ್ಕಾರದ ಬದ್ಧತೆಯನ್ನು ನೆನಪಿಸಿಕೊಂಡು, ನಮ್ಮ ಸರ್ಕಾರ ಮಹಿಳೆಯರಿಗಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ದೀಪಿಕಾ ವಿದ್ಯಾರ್ಥಿವೇತನವೂ ಅದರಲ್ಲಿ ಪ್ರಮುಖ. ಆದರೆ ಈ ವಿದ್ಯಾರ್ಥಿವೇತನವನ್ನು ನಿರಂತರವಾಗಿ ಪಡೆಯಲು ವಿದ್ಯಾರ್ಥಿನಿಯರು ಪ್ರತಿವರ್ಷ ಉತ್ತೀರ್ಣರಾಗುವುದು ಕಡ್ಡಾಯ. ಆಗ ಮಾತ್ರ ಮುಂದುವರಿದ ನೆರವು ಸಿಗುತ್ತದೆ ಎಂದು ಹೇಳಿದರು. ಅಜೀಮ್ ಪ್ರೇಮ್‌ಜಿಯವರ ಸೇವೆಗಳನ್ನು ಮೆಚ್ಚಿಕೊಂಡ ಸಿದ್ದರಾಮಯ್ಯ, ಅವರಿಗೆ ಇನ್ನೂ ಹೆಚ್ಚಿನ ಶಕ್ತಿ, ಆಯುಷ್ಯ ದೊರಕಲಿ. ಅವರು ಸಮಾಜಕ್ಕೆ ಮಾಡಿದ ಕೊಡುಗೆ ಇಂದಿಗೂ, ಮುಂದೆಯೂ ಶಾಶ್ವತವಾಗಿರಲಿ ಎಂದು ಹಾರೈಸಿದರು.