ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಪ್ರವೇಶಾತಿಗೆ ನಡೆಸಲಾಗುವ ಜಂಟಿ ಪ್ರವೇಶಾತಿ ಪರೀಕ್ಷೆ| ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ: 24 ಮಂದಿಗೆ ಶೇ.100 ಅಂಕ
ನವದೆಹಲಿ(ಸೆ.12): ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಪ್ರವೇಶಾತಿಗೆ ನಡೆಸಲಾಗುವ ಜಂಟಿ ಪ್ರವೇಶಾತಿ ಪರೀಕ್ಷೆ (ಜೆಇಇ)ಯ ಮುಖ್ಯ ಪರೀಕ್ಷೆಯ ಫಲಿತಾಂಶಗಳು ಹೊರ ಬಿದ್ದಿದ್ದು, 24 ಅಭ್ಯರ್ಥಿಗಳು ಶೇ.100 ಅಂಕಗಳನ್ನು ಪಡೆದಿದ್ದಾರೆ.
ತೆಲಂಗಾಣದಲ್ಲಿ ಅತೀ ಹೆಚ್ಚು ಅಂದರೆ 8 ಮಂದಿಗೆ ಪೂರ್ಣ ಅಂಕ ಲಭಿಸಿದ್ದು, ಐದು ಮಂದಿ ಈ ಸಾಧನೆ ಮಾಡುವ ಮೂಲಕ ದೆಹಲಿ ಎರಡನೇ ಸ್ಥಾನದಲ್ಲಿದೆ. ರಾಜಸ್ಥಾನದ 3 ಮಂದಿ, ಹರ್ಯಾಣದ ಇಬ್ಬರು ಹಾಗೂ ಗುಜರಾತ್ ಹಾಗೂ ಮಹಾರಾಷ್ಟ್ರದ ತಲಾ ಓರ್ವರು ಶೇ.100 ಅಂಕ ಪಡೆದಿದ್ದಾರೆ. ಒಟ್ಟು 8.58 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡಿದ್ದು, ಕೊರೋನಾ ಭಯದಿಂದಾಗಿ ಶೇ.74 ಅಭ್ಯರ್ಥಿಗಳಷ್ಟೇ ಪರೀಕ್ಷೆ ಎದುರಿಸಿದ್ದರು.
ಕೊರೋನಾದಿಂದಾ ಮುಂದೂಡಲಾಗಿದ್ದ ಪರೀಕ್ಷೆ, ಭಾರೀ ವಿರೋಧದ ಹೊರತಾಗಿಯೂ ಸೆ.1 ರಿಂದ 6ರ ವರೆಗೆ ದೇಶಾದ್ಯಂತ ನಡೆದಿತ್ತು. ಪರೀಕ್ಷಾ ಕೇಂದ್ರಗಳ ಹೆಚ್ಚಳ, ದೈಹಿಕ ಅಂತರ ಸೇರಿ ಪರೀಕ್ಷೆ ವೇಳೆ ಹಲವು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಪರೀಕ್ಷೆ ಮುಂದೂಡುವಂತೆ ಹಲವು ಸಂಘ ಸಂಸ್ಥೆಗಳು ಸರ್ವೋಚ್ಛ ನ್ಯಾಯಾಲಯದ ಮೊರೆ ಹೋದರೂ, ಆ ಅರ್ಜಿಗಳೆಲ್ಲಾ ತಿರಸ್ಕೃತಗೊಂಡಿದ್ದವು.