ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಥಮವಾಗಿ ರಾಜ್ಯದಲ್ಲಿ ಜಾರಿಗೊಳಿಸಲು ಡಿಸಿಎಂ ಅಶ್ವತ್ಥ ನಾರಯಣ ಪಣತೊಟ್ಟಿದ್ದು, ಇದನ್ನು ಹೆಚ್ಚು ಜನರಿಗೆ ತಲುಪಿಸಲು ಕಾರ್ಯಕ್ಕೆ ಚಾಲನೆ ಕೊಟ್ಟರು.
ಬೆಂಗಳೂರು, (ಸೆ.11): ವಿದ್ಯಾಭಾರತಿ ರಾಷ್ಟ್ರೀಯ ಸಂಘಟನೆ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮತ್ತಷ್ಟು ಜನಪ್ರಿಯಗೊಳಿಸುವ ಸಲುವಾಗಿ ʼಮೈಎನ್‌ಇಪಿʼ (ನನ್ನ ರಾಷ್ಟ್ರೀಯ ಶಿಕ್ಷಣ ನೀತಿ) ರಾಷ್ಟ್ರೀಯ ಸ್ಪರ್ಧೆಯನ್ನು ಆಯೋಜಿಸಿದ್ದು, ಇದಕ್ಕೆ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಶುಕ್ರವಾರ ಇಲ್ಲಿ ಚಾಲನೆ ನೀಡಿದರು.
ವಿದ್ಯಾಭಾರತಿ ಆಯೋಜಿಸಿದ್ದ ಸಮಾರಂಭದಲ್ಲಿ ಮೈಎನ್‌ಇಪಿ ವೆಬ್‌ಸೈಟ್‌ಗೂ ಚಾಲನೆ ನೀಡಿದ ಅವರು ಎನ್‌ಇಪಿ ಕುರಿತ ರಾಷ್ಟ್ರೀಯ ಸ್ಪರ್ಧೆಯಲ್ಲಿ ಹೆಚ್ಚು ಹೆಚ್ಚು ಜನ ಭಾಗವಹಿಸುವುದರ ಮೂಲಕ ಅದು ಹೆಚ್ಚು ಜನರಿಗೆ ತಲುಪುವ ಹಾಗೆ ಆಗಬೇಕು. ಈ ಕೆಲಸವನ್ನು ವಿದ್ಯಾಭಾರತಿ ಸಂಸ್ಥೆ ಕೈಗೆತ್ತಿಕೊಂಡಿರುವುದು ಸಂತೋಷದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾ ವಿದ್ಯಾರ್ಥಿಗಳಿಗೆ ಹೊಸ ಪಠ್ಯಕ್ರಮ: ಈ ಬಗ್ಗೆ ಮಾಹಿತಿ ಹಂಚಿಕೊಂಡ ಪ್ರಧಾನಿ ಮೋದಿ
ಜಗತ್ತಿಗೆ ವಿಶ್ವ ಗುರು ಭಾರತವಾಗಬೇಕಾದರೆ ಶಿಕ್ಷಣ ನೀತಿ ಚೆನ್ನಾಗಿರಬೇಕು. ಅಂತಹ ನೀತಿಯನ್ನು ಮೂವತ್ತು ನಾಲ್ಕು ವರ್ಷಗಳ ನಂತರ ಕೇಂದ್ರ ಸರ್ಕಾರ ನಾಡಿಗೆ ಕೊಟ್ಟಿರುವುದು ನಮ್ಮೆಲ್ಲರ ಪುಣ್ಯ. ಹೀಗಾಗಿ ಅದರಲ್ಲಿನ ಅಂಶಗಳು ಎಲ್ಲರಿಗೂ ತಲುಪುವಂತಾಗಬೇಕು. ಈ ಸ್ಪರ್ಧೆ ಮೂಲಕ ಅದು ಹೆಚ್ಚು ಚರ್ಚೆಯಾಗಬೇಕು. ನೀತಿ ಜಾರಿ ಸಂಬಂಧ ಇನ್ನೊಂದು ವರ್ಷ ಕಾಲ ನಿರಂತರವಾಗಿ ಸಭೆಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶಕುಮಾರ ಮಾತನಾಡಿ, ʼಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿ ಮಾಡಲು ಎಲ್ಲ ರೀತಿಯ ತಯಾರಿ ನಡೆದಿದೆ. ಈ ನಿಟ್ಟಿನಲ್ಲಿ ಉಪ ಮುಖ್ಯಮಂತ್ರಿಯೂ ಹಲವು ಸಭೆಗಳನ್ನು ಮಾಡಿದ್ದಾರೆʼ ಎಂದು ಹೇಳಿದರು.
ಮೈಎನ್‌ಇಪಿ ಸ್ಪರ್ಧೆಯಲ್ಲಿ ಹೆಚ್ಚು ಹೆಚ್ಚು ಜನರು ಭಾಗವಹಿಸುವುದರ ಮೂಲಕ ಅದು ಜನಪ್ರಿಯ ಎನ್‌ಇಪಿ ಆಗಬೇಕು. ಆಗ ಮಾತ್ರ ಅದು ಯಶಸ್ವಿ ಕೂಡ ಆಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ವಿಧಾನ ಪರಿಷತ್ ಸದಸ್ಯ ಅರುಣ್ ಶಹಪೂರ ಮಾತನಾಡಿ, ಎನ್ಇಪಿ ಜಾರಿಗೆ ಸರ್ಕಾರ ಹಾಕಿಕೊಂಡಿರುವ ಕಾರ್ಯಕ್ರಮಗಳು ಮೆಚ್ಚುವಂತಹದ್ದು. ಜಾರಿ ವಿಷಯದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿರಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು.
ಎನ್ಇಪಿ ಕರಡು ಸಮಿತಿ ಅಧ್ಯಕ್ಷ ಪ್ರೊ ಕಸ್ತೂರಿರಂಗನ್ ಅವರು ವರ್ಚುಯಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಯೊಕಾನ್ನ ಕಿರಣ ಮಂಜುಂದಾರ್ ಷಾ, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ ವೇಣುಗೋಪಾಲ, ವಿದ್ಯಾಭಾರತಿ ಕರ್ನಾಟಕ ಶಾಖೆಯ ಉಪಾಧ್ಯಕ್ಷ ರಾಜಶೇಖರರೆಡ್ಡಿ ಮಾತನಾಡಿದರು.
ವಿದ್ಯಾಭಾರತಿಯ ನಾಗರಾಜ ರೆಡ್ಡಿ ಮಾತನಾಡಿ, ಹದಿಮೂರು ಭಾಷೆ ಮತ್ತು ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ೯ರಿಂದ ೧೨ನೇ ತರಗತಿ ಮಕ್ಕಳಿಗಾಗಿ ಎರಡು ನಿಮಿಷದ ಭಾಷಣ ಸ್ಪರ್ಧೆ, ಕೈಬರಹದ ಭಿತ್ತಪತ್ರ ಸ್ಪರ್ಧೆ, ಪ್ರಧಾನಿಗೆ ಪತ್ರ ಬರೆಯುವ ಸ್ಪರ್ಧೆ, ೩೦೦ ಪದಗಳ ಪ್ರಬಂಧ ಸ್ಪರ್ಧೆ ಇರುತ್ತದೆ. ಪದವಿ ಹಂತದವರಿಗಾಘಿ ಹಾಗೂ ಸಾರ್ವಜನಿಕರಿಗಾಗಿ ಎರಡು ಪ್ರತ್ಯೇಕ ಸ್ಪರ್ಧೆಗಳು ಇರುತ್ತವೆ. ಕಿರುಚಿತ್ರ (೨.೨೦ ನಿಮಿಷ), ಡಿಜಿಟಲ್ ಪೋಸ್ಟರ್, ಪ್ರಿಂಟಿಂಗ್ ಮತ್ತು ಹ್ಯಾಂಡ್‌ಮೇಡ್ ಪೋಸ್ಟರ್, ೮ ಟ್ವೀಟ್‌ಗಳ ಥ್ರೇಡ್ ಇತ್ಯಾಧಿ ಇರುತ್ತದೆ ಎಂದು ಅವರು ಮಾಹಿತಿ ನೀಡಿದರು.