ಹೊಟ್ಟೆಕಿಚ್ಚಿನಿಂದ ಇನ್ನೂ ಎತ್ತರಕ್ಕೆ ಬೆಳೆಯಲಾಗುತ್ತಿಲ್ಲ: ತ್ಯಾಗೀಶ್ವರಾನಂದ ಸ್ವಾಮೀಜಿ

By Kannadaprabha News  |  First Published Dec 11, 2022, 9:12 AM IST
  • ಹೊಟ್ಟೆಕಿಚ್ಚಿನಿಂದ ಇನ್ನೂ ಎತ್ತರಕ್ಕೆ ಬೆಳೆಯಲಾಗುತ್ತಿಲ್ಲ
  • ರಾಮಕೃಷ್ಣ ಆಶ್ರಮದ ಸ್ವಾಮಿ ತ್ಯಾಗೀಶ್ವರಾನಂದ ಶ್ರೀ ಅಭಿಮತ
  • ನವೀಕರಣ ಕಲ್ಯಾಣ ಮಂಟಪದ ಉದ್ಘಾಟನೆ, ವಿದ್ಯಾರ್ಥಿಗಳಿಗೆ ಪುರಸ್ಕಾರ

ದಾವಣಗೆರೆ (ಡಿ.11) : ಮನುಷ್ಯನ ಬಳಿ ಇಂದು ಎಲ್ಲವೂ ಇದೆ. ಆದರೆ ಮತ್ತೊಬ್ಬರ ಬೆಳವಣಿಗೆ ಕಂಡು ಹೊಟ್ಟೆಕಿಚ್ಚಿನಿಂದ ಇನ್ನೂ ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಎಲ್ಲರ ಬಳಿ ಇಂದು ದೈಹಿಕ, ತಾಂತ್ರಿಕ ಬುದ್ಧಿವಂತಿಕೆ, ಆರ್ಥಿಕ ಸದೃಢತೆ ಎಲ್ಲವೂ ಇದೆ. ಆದರೆ ಗುರು ಹಿರಿಯರಿಗೆ ಗೌರವ ಕೊಡುವ ಭಾವನೆ ಕಾಣೆಯಾಗುತ್ತಿದೆ. ದೇವರಿಗೆ ಕೈ ಮುಗಿಯುತ್ತೀರೋ ಇಲ್ಲವೋ ಗೊತ್ತಿಲ್ಲ, ಅಪ್ಪ ಅಮ್ಮನಿಗೆ ಗೌರವ ಕೊಟ್ಟರೆ ಅವರ ಮುಖಾಂತರ ಭಗವಂತ ಆಶೀರ್ವಾದ ಮಾಡುತ್ತಾನೆ ಎಂದು ರಾಮಕೃಷ್ಣ ಆಶ್ರಮದ ಸ್ವಾಮಿ ತ್ಯಾಗೀಶ್ವರಾನಂದ ಶ್ರೀಗಳು ಹೇಳಿದರು.

ನಗರದ ಎಸ್‌ಕೆಪಿ ರಸ್ತೆಯಲ್ಲಿರುವ ಶ್ರೀಕನ್ನಿಕಾ ಪರಮೇಶ್ವರಿ ದೇವಸ್ಥಾನ ಸಂಘದಿಂದ ನವೀಕರಣಗೊಂಡ ಶ್ರೀಕಾಸಲ್‌ ಎಸ್‌.ವಿಠ್ಠಲ್‌ ಶ್ರೀಮತಿ ಸುನಂದಮ್ಮ ಕಲ್ಯಾಣ ಮಂಟಪದ ಉದ್ಘಾಟನೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೆತ್ತವರು ಮತ್ತು ಗುರು-ಹಿರಿಯರಿಗೆ ಗೌರವ ಕೊಡುವ ಮತ್ತು ಆತ್ಮೀಯತೆಯಿಂದ ಕಾಣುವ ಮನೋಭಾವ ರೂಢಿಸಿಕೊಳ್ಳಿರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Tap to resize

Latest Videos

ಹೊಟ್ಟೆಯೊಳಗಿನ ಕಿಚ್ಚಿಗೆ ತಣ್ಣೀರ್ ಸುರಿಯದಿದ್ರೆ ದಕ್ಕಲ್ಲ ಯಶಸ್ಸು!

ಪರಿಶ್ರಮದಿಂದ ಪಡೆಯಿರಿ:

ಈ ಕಲ್ಯಾಣ ಮಂಟಪದಂತೆ ನಾವೂ ನವೀಕರಣಗೊಳ್ಳುತ್ತಿರಬೇಕು. ಇಲ್ಲವಾದರೆ ನಮ್ಮನ್ನೂ ಮನೆಯಲ್ಲಿ ಮೂಲೆ ಗುಂಪು ಮಾಡಲಾಗುತ್ತದೆ. ಸದಾ ಹೊಸ ಚಿಂತನೆಗಳು, ಉತ್ಸಾಹ, ಆನಂದ, ಸಂತೋಷ ನಮ್ಮ ಮನಸ್ಸಿನಲ್ಲಿರಬೇಕು. ಕೆಲವನ್ನು ಪರಿಶ್ರಮದಿಂದ ಪಡೆಯಬಹುದು, ಕೆಲವುಗಳನ್ನು ಸಾಧನೆ ಮಾಡಿ ತೆಗೆದುಕೊಳ್ಳಬೇಕಾಗುತ್ತದೆ. ಪ್ರೀತಿ ತೋರಿಸಿ ಇಲ್ಲವೇ ಸೇವೆ ಮಾಡಿ ತೆಗೆದುಕೊಳ್ಳಬೇಕಾಗುತ್ತದೆ. ಪ್ರೀತಿಯಿಂದ ಪ್ರಪಂಚವನ್ನೇ ಗೆಲ್ಲಬಹುದು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ವಿವಿಧೆಡೆಯಿಂದ ಸಮಾಜ ಬಾಂಧವರು, ಹಿರಿಯರು ಆಗಮಿಸಿ ನಿಮ್ಮಲ್ಲಿ ಅನೇಕರು ಸಾಧನೆ ಮಾಡಿದ್ದಾರೆ. ರಾಮಕೃಷ್ಣ ಮಿಷನ್‌ನಲ್ಲಿ ಆರ್ಯವೈಶ್ಯ ಸಮಾಜದಿಂದ ಅತೀ ಬುದ್ಧಿವಂತ ವಿದ್ಯಾರ್ಥಿಗಳಿದ್ದಾರೆ. ಅವರು ವಿಶೇಷ ಸ್ಥಾನಮಾನ ಹೊಂದಿದ್ದಾರೆ. ಪ್ರತಿಯೊಬ್ಬರೂ ನಮ್ಮ ಸಂಸ್ಕೃತಿ ಸಂಸ್ಕಾರ ಬಿಡದೇ ಕಡೆಯ ತನಕ ಮುಂದುವರಿಸಿ ಹೋಗಬೇಕು. ಪರಿವರ್ತನೆ ಅಂದ ತಕ್ಷಣ ನಮ್ಮ ಜೀವನ ಶೈಲಿಯ ಬದಲಾವಣೆಯಲ್ಲ ಅದು ಆಂತರಿಕ ಬದಲಾವಣೆಯಾಗಬೇಕು. ಪ್ರತಿಯೊಬ್ಬರ ಬೆಳವಣಿಗೆಗೆ ಶಿಕ್ಷಣ ಬಹಳ ಮುಖ್ಯ ಎಂದು ತಿಳಿಸಿದರು.

Jealous ಇರೋ ಜನರ ನಕಾರಾತ್ಮಕ ದೃಷ್ಟಿಯಿಂದ ಬಚಾವಾಗಲು ಇಲ್ಲಿವೆ ನೋಡಿ ಎಕ್ಸ್ಪರ್ಟ್ ಅಡ್ವೈಸ್!

ಕನ್ನಿಕಾ ಪರಮೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷ ಆರ್‌.ಎಲ್‌. ಪ್ರಭಾಕರ್‌ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್‌.ಪಿ.ರವಿಶಂಕರ್‌, ಅಜೀವ ಗೌರವಾಧ್ಯಕ್ಷರಾದ ಆರ್‌.ಎಸ್‌.ನಾರಾಯಣ ಸ್ವಾಮಿ, ಆರ್‌.ಜಿ.ನಾಗೇಂದ್ರಪ್ರಕಾಶ, ಕಾರ್ಯಾಧ್ಯಕ್ಷ ಕಾಸಲ್‌ ಸತೀಶ, ಸತ್ಯನಾರಾಯಣ ಸ್ವಾಮಿ, ನವೀಕರಣ ದಾನಿಗಳಾದ ಕಾಸಲ್‌ ನಾಗರಾಜ, ಬದರಿನಾಥ ಸಹೋದರರು, ಅನಂತರಾಮ ಶ್ರೇಷ್ಠಿ, ಮಾಕಂ ನಾಗರಾಜ ಗುಪ್ತ, ಆರ್‌.ಜಿ.ಶ್ರೀನಿವಾಸ ಮೂರ್ತಿ, ತಾತಾ ವೆಂಕಟಾಚಲಪತಿ ಶ್ರೇಷ್ಠಿ, ರವೀಂದ್ರ ಗುಪ್ತ, ಗುಂಡಾಲ ಮಂಜುನಾಥ, ಬಿ.ಪಿ.ನಾಗಭೂಷಣ, ಶಿವಾನಂದ, ಬದ್ರಿನಾಥ, ಸಾಯಿಪ್ರಸಾದ, ಸತೀಶ, ಸಂಘದ ಸದಸ್ಯರು, ದಾನಿಗಳು, ಸೇವಾಕರ್ತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು.

ಹೆತ್ತವರು ಮಕ್ಕಳಿಗೆ ಒಳ್ಳೆ ಊಟ, ತಿಂಡಿ, ಮೊಬೈಲ್‌, ಕಾರು ಕೊಡಿಸಬಹುದು, ಉತ್ತಮ ಶಾಲೆಗೆ ಸೇರಿಸಬಹುದು. ಯಾವುದು ದುಡ್ಡು ಕೊಟ್ಟು ತರಬಹುದೋ ಅದನ್ನು ಕೊಡಿಸಬಹುದು. ಆದರೆ ಒಳ್ಳೆಯ ಗುಣಗಳನ್ನು ಖರೀದಿಸಿ ತರಲು ಸಾಧ್ಯವಿಲ್ಲ. ಅದೇನಿದ್ದರೂ ಮನೆಯಲ್ಲಿ ಹೆತ್ತವರು ನೀಡುವ ಸಂಸ್ಕಾರದಿಂದ ಮಾತ್ರ ಸಾಧ್ಯವಾಗಲಿವೆ.

- ಸ್ವಾಮಿ ತ್ಯಾಗೀಶ್ವರಾನಂದ ಶ್ರೀಗಳು, ರಾಮಕೃಷ್ಣ ಆಶ್ರಮ

click me!