
ಬೆಂಗಳೂರು(ಜೂ.11): ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿ ಫಲಿತಾಂಶ ಆಧರಿಸಿ ಈ ಬಾರಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ನೀಡುವ ಹಿನ್ನೆಲೆಯಲ್ಲಿ ಆ ಎರಡೂ ಫಲಿತಾಂಶಗಳ ಸಂಬಂಧ ವಿದ್ಯಾರ್ಥಿಗಳ ಅಂಕಪಟ್ಟಿ ಪರಿಶೀಲಿಸಿ ದೃಢೀಕರಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯು ಡಿಡಿಪಿಯುಗಳಿಗೆ ಸೂಚನೆ ನೀಡಿದೆ.
2020ನೇ ಸಾಲಿನ ಪ್ರಥಮ ಪಿಯುಸಿ ಅಂಕಪಟ್ಟಿ ಮತ್ತು 2019ನೇ ಸಾಲಿನ 10ನೇ ತರಗತಿ ಅಂಕಪಟ್ಟಿಯನ್ನು ತಾಳೆ ನೋಡಬೇಕು. ಎರಡು ದಾಖಲೆಗಳು ಸರಿ ಇದೆಯೇ ಎಂಬುದನ್ನು ಪರಿಶೀಲನೆ ಮಾಡಬೇಕು. ಜೂನ್ 12 ರಿಂದ 16ರ ವರೆಗೆ ಪರಿಶೀಲನಾ ಕಾರ್ಯ ನಡೆಸಿ ದೃಢಿಕರಿಸಬೇಕು. ಪ್ರಥಮ ಪಿಯುಸಿ ಅಂಕಪಟ್ಟಿ ಕಾಲೇಜುಗಳಲ್ಲಿ ಲಭ್ಯವಿದೆ.
ಎಲ್ಲರೂ ಪಿಯು ಪಾಸ್ ಎಫೆಕ್ಟ್ : ಡಿಗ್ರಿ ಕಾಲೇಜುಗಳಿಗೆ ತೀವ್ರ ಒತ್ತಡ
10ನೇ ತರಗತಿ ಅಂಕ ಪಟ್ಟಿಯನ್ನು ಎಸ್‌ಎಟಿಎಸ್ ವೆಬ್ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ಯಾವುದೇ ತಾಂತ್ರಿಕ ಸಮಸ್ಯೆ ಎದುರಾದರೂ ಇಲಾಖೆ ನೇಮಿಸಿರುವ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ, ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಕಾಲೇಜು ಹಂತದ ಪ್ರಕ್ರಿಯೆ ಮುಗಿದ ನಂತರ ಕೇಂದ್ರ ಕಚೇರಿಯಲ್ಲಿ ಮುಂದಿನ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.