ವರದಿ : ಲಿಂಗರಾಜು ಕೋರಾ
ಬೆಂಗಳೂರು (ಜೂ.11): ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಎಲ್ಲ 5.86 ಲಕ್ಷ ಹೊಸ ವಿದ್ಯಾರ್ಥಿಗಳನ್ನೂ (ಫ್ರೆಷರ್ಸ್) ಪರೀಕ್ಷೆ ಇಲ್ಲದೆ ಪಾಸು ಮಾಡುತ್ತಿರುವುದರಿಂದ ರಾಜ್ಯದ ಪದವಿ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಗೊಂದಲದ ಗೂಡಾಗಿದೆ. ಇದರ ಪರಿಣಾಮ ಮುಂದಿನ ಶೈಕ್ಷಣಿಕ ವರ್ಷದ ಪದವಿ ಕಾಲೇಜುಗಳ ಆರಂಭ ವಿಳಂಬವಾಗುವ ಸಾಧ್ಯತೆಯಿದೆ.
ಏಕೆಂದರೆ, ದ್ವಿತೀಯ ಪಿಯುಸಿಯ ಎಲ್ಲ ಹೊಸ ವಿದ್ಯಾರ್ಥಿಗಳನ್ನೂ ಪರೀಕ್ಷೆ ಇಲ್ಲದೆ ಪಾಸು ಮಾಡುವುದರಿಂದ ಪದವಿ ಕಾಲೇಜುಗಳ ಪ್ರವೇಶಕ್ಕೆ ಆಕಾಂಕ್ಷಿಗಳ ಸಂಖ್ಯೆ ಲಕ್ಷಾಂತರ ಸಂಖ್ಯೆಯಲ್ಲಿ ಹೆಚ್ಚಲಿದೆ. ಪ್ರತಿ ವರ್ಷ 3ರಿಂದ 3.5 ಲಕ್ಷ ವಿದ್ಯಾರ್ಥಿಗಳು ಪದವಿ ಕೋರ್ಸುಗಳಿಗೆ ಪ್ರವೇಶ ಪಡೆದರೆ ಈ ವರ್ಷ 4.5ರಿಂದ 5 ಲಕ್ಷ ಆಕಾಂಕ್ಷಿಗಳೂ ಪದವಿ ಕಾಲೇಜುಗಳ ಪ್ರವೇಶಕ್ಕೆ ಮುಂದಾಗಬಹುದೆಂದು ಅಂದಾಜಿಸಲಾಗಿದೆ. ಅಷ್ಟೂವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಸಾಮರ್ಥ್ಯ ನಮ್ಮ ಕಾಲೇಜುಗಳಿಗೆ ಇಲ್ಲ ಎಂದೇ ಶಿಕ್ಷಣ ತಜ್ಞರು ಹೇಳುತ್ತಾರೆ. ರಾಜ್ಯದಲ್ಲಿ ಇರುವ ಡಿಗ್ರಿ ಕಾಲೇಜುಗಳ ಸಂಖ್ಯೆ 2500.
ಹತ್ತಾರು ಸಮಸ್ಯೆ:
ಹೀಗಾಗಿ ಇಷ್ಟುಇದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕಾದರೆ ಕಾಲೇಜುಗಳ ಸೀಟಿನ ಸಂಖ್ಯೆ ಹೆಚ್ಚಿಸಬೇಕು. ಆದರೆ, ಆ ಪ್ರಕ್ರಿಯೆ ಸರಳವಲ್ಲ. ಕಾಲೇಜುಗಳಲ್ಲಿ ಸೀಟು ಸಂಖ್ಯೆ ಹೆಚ್ಚಿಸಲು ಸಂಬಂಧಿಸಿದ ವಿಶ್ವವಿದ್ಯಾಲಯಗಳು ಕಾಲೇಜುಗಳಲ್ಲಿ ಅಗತ್ಯದಷ್ಟುಬೋಧಕ ವರ್ಗ, ಮೂಲಸೌಕರ್ಯ ಇದೆಯಾ ಎಂದು ಸಮಿತಿಗಳಿಂದ ಪರಿಶೀಲಿಸಿ ವರದಿ ಪಡೆದು ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಬೇಕಿದೆ. ಇದಕ್ಕೆ ಸರ್ಕಾರ ಸ್ಪಷ್ಟನಿರ್ದೇಶನವನ್ನೂ ನೀಡಬೇಕು.
ವಿದ್ಯಾರ್ಥಿಗಳ ಗಮನಕ್ಕೆ: ಪ್ರಥಮ ಪಿಯುಗೆ ಪರೀಕ್ಷೆ..! ...
ಇದಕ್ಕೆ ಸಾಕಷ್ಟುಸಮಯ ಬೇಕಾಗುತ್ತದೆ. ಪರಿಶೀಲನೆ ಇಲ್ಲದೆ ನೇರ ಸೀಟು ಸಂಖ್ಯೆ ಹೆಚ್ಚಿಸಲು ಅವಕಾಶ ನೀಡಿದರೆ ಅವೈಜ್ಞಾನಿಕ ಕ್ರಮವಾಗಲಿದೆ. ಹಾಗಾಗಿ ಈ ಸಮಸ್ಯೆ ಪರಿಹಾರಕ್ಕೆ ಯಾವ ಪರಿಹಾರ ಮಾರ್ಗ ಹುಡುಕುವುದು ಎಂದು ಉನ್ನತ ಶಿಕ್ಷಣ ಇಲಾಖೆ ತಲೆಕೆಡಿಸಿಕೊಂಡಿದೆ.
ಖಾಸಗಿ ಕಾಲೇಜುಗಳ ಸಮಸ್ಯೆ ಈ ರೀತಿಯಿದ್ದರೆ ಸರ್ಕಾರಿ ಕಾಲೇಜುಗಳ ಸಮಸ್ಯೆಯೇ ವಿಭಿನ್ನ. ಏಕೆಂದರೆ, ನಿಯಮಾವಳಿ ಪ್ರಕಾರ ಸರ್ಕಾರಿ ಕಾಲೇಜುಗಳಿಗೆ ಎಷ್ಟೇ ಆಕಾಂಕ್ಷಿಗಳು ಪ್ರವೇಶ ಕೋರಿ ಬಂದರೂ ಪ್ರವೇಶ ನಿರಾಕರಿಸುವಂತಿಲ್ಲ. ಹಾಗೇನಾದರೂ ಆಕಾಂಕ್ಷಿಗಳೆಲ್ಲರಿಗೂ ಪ್ರವೇಶ ನೀಡದರೆ ಇದಕ್ಕೆ ಅಗತ್ಯದಷ್ಟುತರಗತಿ ಕೊಠಡಿಗಳು, ಮೂಲಸೌಕರ್ಯ, ಬೋಧಕ ವರ್ಗ ಹೇಗೆ ಹೊಂದಿಸುವುದು, ಹೇಗೆ ನಿಭಾಯಿಸುವುದು ಎಂಬ ತಲೆನೋವು ಶುರುವಾಗಿದೆ.
ಸದ್ಯಕ್ಕೆ ಈ ಯಾವ ಸಮಸ್ಯೆಗೂ ಶಿಕ್ಷಣ ಇಲಾಖೆ ಬಳಿ ಪರಿಹಾರವಿಲ್ಲ. ಈ ಎಲ್ಲದಕ್ಕೂ ಪರಿಹಾರ ಸೂತ್ರಗಳನ್ನು ಹುಡುಕುವ ಹಾದಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ನಿರತವಾಗಿದೆ. ಇದರಿಂದ ಈ ಬಾರಿ ಪದವಿ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಕೊಂಚ ತಡವಾಗುವ ಸಾಧ್ಯತೆ ಇದೆ.
5 ಲಕ್ಷ ಪ್ರವೇಶಾಕಾಂಕ್ಷಿಗಳು?:
ಕಳೆದ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 6.75 ಲಕ್ಷ ವಿದ್ಯಾರ್ಥಿಗಳ ಪೈಕಿ (ಹೊಸಬರು, ಪುನರಾವರ್ತಿತ ಸೇರಿ) 4.17 ಲಕ್ಷ (ಶೇ.61.20) ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದರು. ಪಾಸಾದ 4.17 ಲಕ್ಷ ಮಕ್ಕಳಲ್ಲಿ 3.5 ಲಕ್ಷ ವಿದ್ಯಾರ್ಥಿಗಳು ರಾಜ್ಯದಲ್ಲಿರುವ 1800 ಖಾಸಗಿ, 415 ಸರ್ಕಾರಿ ಹಾಗೂ 392 ಅನುದಾನಿತ ಸೇರಿ ಒಟ್ಟು 2535 ಪದವಿ ಕಾಲೇಜುಗಳಲ್ಲಿ ವಿವಿಧ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕೋರ್ಸುಗಳಿಗೆ ಪ್ರವೇಶ ಪಡೆದಿದ್ದರು. ಉಳಿದವರು ವೃತ್ತಿಪರ ಕೋರ್ಸುಗಳು ಸೇರಿ ಬೇರೆ ಬೇರೆ ಕೋರ್ಸುಗಳನ್ನು ಸೇರಿದ್ದರು.
ಈ ಬಾರಿ ಕೋವಿಡ್‌ನಿಂದಾಗಿ ಪುನರಾವರ್ತಿತ ಅಭ್ಯರ್ಥಿಗಳನ್ನು ಹೊರತುಪಡಿಸಿ ಹೊಸ ಅಭ್ಯರ್ಥಿಗಳೆಲ್ಲರನ್ನೂ ಪರೀಕ್ಷೆ ಇಲ್ಲದೆ ಪಾಸು ಮಾಡಿದೆ. ಇದರಿಂದ 2020-21ರಲ್ಲಿ ಪರೀಕ್ಷೆ 6.72 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರೂ ಇದರಲ್ಲಿ ಹೊಸಬರ ಸಂಖ್ಯೆಯೇ 5.86 ಲಕ್ಷದಷ್ಟಿದೆ. ಅವರೆಲ್ಲರೂ ಉತ್ತೀರ್ಣರಾಗಿ ಉನ್ನತ ಶಿಕ್ಷಣಕ್ಕೆ ಅರ್ಹತೆ ಪಡೆಯುತ್ತಾರೆ. ಇದರಲ್ಲಿ ಸುಮಾರು 1 ಲಕ್ಷ ಜನ ವೃತ್ತಿಪರ ಕೋರ್ಸು ಸೇರಿ ಇತರೆ ಕೋರ್ಸುಗಳತ್ತ ಮುಖ ಮಾಡಿದರೂ 4.5 ರಿಂದ 5 ಲಕ್ಷ ಜನ ಪದವಿ ಕೋರ್ಸುಗಳ ಪ್ರವೇಶಕ್ಕೆ ಮುಂದಾಗುವ ಸಾಧ್ಯತೆ ಇದೆ. ಇದರಿಂದ ಲಭ್ಯ ಸೀಟುಗಳಿಗಿಂತ ಪ್ರವೇಶಾಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ಕಾಲೇಜುಗಳ ಮೇಲೆ ಭಾರೀ ಒತ್ತಡ ನಿರ್ಮಾಣವಾಗಲಿದೆ.