ಅನುದಾನಿತ ಶಿಕ್ಷಕರ ಬೇಡಿಕೆ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಮುಷ್ಕರ

By Kannadaprabha News  |  First Published Oct 6, 2022, 12:26 PM IST
  • ಅನುದಾನಿತ ಶಿಕ್ಷಕರ ಬೇಡಿಕೆ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಮುಷ್ಕರ
  • ಬೇಡಿಕೆ ಈಡೇರಿಸದಿದ್ದರೆ ಅ. 16ರಿಂದ ರಾಜ್ಯಾದ್ಯಂತ ಶಾಲಾ-ಕಾಲೇಜು ಬಂದ್‌

ಗುತ್ತಲ (ಅ.6) : ಅನುದಾನಿತ ಶಾಲಾ-ಕಾಲೇಜುಗಳ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸುಮಾರು 40 ಸಾವಿರ ಅನುದಾನಿತ ನೌಕರರ ಬೃಹತ್‌ ಪಾದಯಾತ್ರೆಯ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಪಿಂಚಣಿ ವಂಚಿತ ಶಾಲಾ ಕಾಲೇಜು ನೌಕರರ ಸಂಘದ ರಾಜ್ಯಾಧ್ಯಕ್ಷ ಜಿ. ಹನುಮಂತಪ್ಪ ಹೇಳಿದರು.

7000 ಅನುದಾನಿತ ಶಿಕ್ಷಕರ ನೇಮಕಕ್ಕೆ ಶಾಲೆಗಳ ಆಗ್ರಹ

Latest Videos

undefined

ಬುಧವಾರ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 7ರಿಂದ ತುಮಕೂರ ಸಿದ್ಧಗಂಗಾ ಮಠದಿಂದ ಆರಂಭಗೊಂಡ ಪಾದಯಾತ್ರೆ ಅ. 10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಲಿದೆ. ಅನಿರ್ದಿಷ್ಟಾವಧಿ ವರೆಗೆ ಸುಮಾರು 40 ಸಾವಿರ ನೌಕರರು ಸೇರಿಕೊಂಡು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಅ. 16ರಿಂದ ರಾಜ್ಯಾದ್ಯಂತ ಶಾಲಾ-ಕಾಲೇಜುಗಳನ್ನು ಬಂದ್‌ ಮಾಡಲಾಗುವುದು ಎಂದರು. ನಮ್ಮ ಹೋರಾಟಕ್ಕೆ ರಾಜ್ಯದಲ್ಲಿ ಶಿಕ್ಷಕರ ಮತಕ್ಷೇತ್ರದಿಂದ ಆಯ್ಕೆಯಾದ ಸದಸ್ಯರು, ವಿವಿಧ ಮಠಾಧೀಶ್ವರರ ಬೆಂಬಲ ನೀಡಿದ್ದು, ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಮಠಾಧೀಶ್ವರರು ನಮಗೆ ಬೆನ್ನಲುಬಾಗಿ ನಿಂತಿದ್ದಾರೆ. ಅದೇ ರೀತಿ ಪಾದಯಾತ್ರೆಗೆ ಸಿದ್ಧಗಂಗಾ ಮಠದ ಹಿರಿಯ ಸ್ವಾಮೀಜಿಗಳು ಸೇರಿದಂತೆ ವಿವಿಧ ಮಠಾಧೀಶರು ಚಾಲನೆ ನೀಡಲಿದ್ದಾರೆ ಎಂದರು.

ಬೇಡಿಕೆಗಳು:

ಕಾಲ್ಪನಿಕ ವೇತನ ಜಾರಿಗೆ ತರುವುದು. 2006ರ ಏ. 1ರ ಮೊದಲು ನೇಮಕವಾಗಿ ಆನಂತರ ಅನುದಾನಕ್ಕೊಳಪಟ್ಟು ಹಾಲಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ನಿವೃತ್ತರಾಗಿರುವ ನೌಕರರ ಸೇವಾ ಅವಧಿಯನ್ನು ಕಾಲ್ಪನಿಕವಾಗಿ ಪರಿಗಣಿಸಿ ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ ನೀಡುವುದು. ಎಲ್ಲ ನೌಕರರಿಗೆ ‘ನಿಶ್ಚಿತ ಪಿಂಚಣಿ ಸೌಲಭ್ಯ’ ನೀಡಬೇಕು.

ಅನುದಾನಿತ ಶಾಲಾ, ಕಾಲೇಜು ನೌಕರರಿಗೂ ಜ್ಯೋತಿ ಸಂಜೀವಿನಿಯಂತಹ ವೈದ್ಯಕೀಯ ಸೌಲಭ್ಯಗಳನ್ನು ಅನುದಾನಿತ ಶಿಕ್ಷಕರಿಗೂ ನೀಡಬೇಕು. ರಾಜ್ಯದಲ್ಲಿ ಇತರ ಸರ್ಕಾರಿ ನೌಕರರ ಪಿಂಚಣೆ ವ್ಯವಸ್ಥೆ ಅನುದಾನಿತ ಶಾಲಾ, ಕಾಲೇಜುಗಳ ಶಿಕ್ಷಕರಿಗೆ ಇಲ್ಲದಿರುವುದು ಅತ್ಯಂತ ನೋವಿನ ಸಂಗತಿ. ರಾಜ್ಯ ಸರ್ಕಾರ ಮಲತಾಯಿ ಧೋರಣೆಯನ್ನು ಕೈಬಿಟ್ಟು ನಮಗೆ ನ್ಯಾಯ ಒದಗಿಸಬೇಕು. ನಮ್ಮನ್ನೇ ನೆಚ್ಚಿರುವ ಕುಟುಂಬ ಸದಸ್ಯರಿಗೆ ನೆರವಾಗುವುದು. ನಮ್ಮ ಮುಪ್ಪಿನಾವಸ್ಥೆಯಲ್ಲಿ ನಮಗೆ ಈ ಯೋಜನೆ ನೆರವು ನೀಡುವುದು ಎಂದರು. ಈ ಹಿಂದಿನ ಎಲ್ಲ ಸರ್ಕಾರಗಳಿಗೆ ಕಳೆದ 12 ವರ್ಷಗಳಿಂದ ನಮ್ಮ ಸಂಘಟನೆಯಿಂದ ಮನವಿ ಮಾಡುತ್ತಾ ಬಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲನ್ನು ತೋಡಿಕೊಂಡರು.

ಅನುದಾನಿತ ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಸಿ. ಮುದಿಗೌಡ್ರ ಮಾತನಾಡಿ, ಪಿಂಚಣಿ ಸಲುವಾಗಿ ಅನೇಕ ಬಾರಿ ಹೋರಾಟ ನಡೆಸಿದ್ದರೂ ಸರ್ಕಾರ ಶಿಕ್ಷಕರ ಸಮಸ್ಯೆಗೆ ಸ್ಪಂದನೆ ನೀಡದಿರುವುದು ನೋವಿನ ಸಂಗತಿಯಾಗಿದೆ. ಇತರ ಸರ್ಕಾರಿ ನೌಕರರಿಗೆ ಇರುವ ಸೌಲಭ್ಯ ಅನುದಾನಿತ ಶಿಕ್ಷಕರಿಗೆ ಮಾತ್ರ ಇಲ್ಲ. ಸಮಾಜದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರಿಗೆ ಅನ್ಯಾಯ ಆಗುತ್ತಿರುವುದು ಶಾಸಕ, ಸಚಿವರಿಗೆ ಮನವರಿಕೆಯಾಗದಿರುವುದು ವಿಷಾದನೀಯವಾದ ಸಂಗತಿ. ಮಕ್ಕಳಿಗೆ ವಿದ್ಯೆ ಹೇಳಿಕೊಟ್ಟಶಿಕ್ಷಕರ ಬದುಕು ನಿವೃತ್ತಿಯ ಆನಂತರ ಅಭದ್ರತೆಯಿಂದ ಕೂಡಿದೆ ಎಂದರು.

 

ಅತಿಥಿ ಶಿಕ್ಷಕರಿಗೆ ಗುಡ್ ನ್ಯೂಸ್ : ಸಂಭಾವನೆ ಹೆಚ್ಚಳಕ್ಕೆ ಚಿಂತನೆ

ರಾಜ್ಯ ಪಿಂಚಣಿ ವಂಚಿತ ಶಾಲಾ ಕಾಲೇಜು ನೌಕರರ ಸಂಘದ ರಾಜ್ಯ ಸಂಚಾಲಕ ಮಂಜುನಾಥ ಭತ್ತದ, ರಾಜ್ಯ ಪ್ರತಿನಿಧಿ ನಾಗರಾಜ ನಲವಾಗಿಲ, ಜಿಲ್ಲಾ ಕಾರ್ಯದರ್ಶಿ ಡಾ. ಮಾರುತಿ ಲಮಾಣಿ, ಹಾವೇರಿ ತಾಲೂಕು ಅಧ್ಯಕ್ಷ ಮಾಲತೇಶ ಮುದಕಪ್ಪನವರ, ರಾಣಿಬೆನ್ನೂರು ತಾಲೂಕು ಅಧ್ಯಕ್ಷ ಎಸ್‌.ಎಚ್‌. ಪಾಟೀಲ ಸೇರಿದಂತೆ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಸದಸ್ಯರಿದ್ದರು.

click me!