ಬಿಟೆಕ್ ಪದವಿ ಪೂರ್ಣಗೊಳಿಸದ ವಿದ್ಯಾರ್ಥಿಗಳಿಗೆ ಬಿಎಸ್‌ಸಿ ಪದವಿ ಕೊಡಲಿದೆ ಐಐಟಿ ಮದ್ರಾಸ್‌!

Published : Dec 15, 2025, 02:44 PM IST
IIT Madras

ಸಾರಾಂಶ

ಐಐಟಿ ಮದ್ರಾಸ್, ಬಿಟೆಕ್ ಪದವಿ ಪೂರ್ಣಗೊಳಿಸಲು ಕಷ್ಟಪಡುವ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ನಂತರ ಬಿಎಸ್ಸಿ ಪದವಿಯೊಂದಿಗೆ ನಿರ್ಗಮಿಸುವ ಹೊಸ ಆಯ್ಕೆಯನ್ನು ಪರಿಚಯಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿರುವ ಈ ಕ್ರಮವು, ವಿದ್ಯಾರ್ಥಿಗಳ ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡುವ ಗುರಿ ಹೊಂದಿದೆ.

ಚೆನ್ನೈ: ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮದ್ರಾಸ್‌ ಬಿಟೆಕ್ ಪದವಿಯನ್ನು ಪೂರ್ಣಗೊಳಿಸಲು ಅಸಮರ್ಥರಾಗಿರುವ ವಿದ್ಯಾರ್ಥಿಗಳಿಗೆ ಇದೀಗ ಮಹತ್ವದ ಶೈಕ್ಷಣಿಕ ಆಯ್ಕೆಯನ್ನು ಪರಿಚಯಿಸಿದೆ. ಬಿಟೆಕ್ ಕೋರ್ಸ್‌ನಲ್ಲಿ ಮುಂದುವರಿಯಲು ಕಷ್ಟಪಡುತ್ತಿರುವ ವಿದ್ಯಾರ್ಥಿಗಳು, ಮೂರು ವರ್ಷಗಳ ಅಧ್ಯಯನದ ನಂತರ ಬಿಎಸ್ಸಿ (Bachelor of Science) ಪದವಿಯೊಂದಿಗೆ ನಿರ್ಗಮಿಸುವ ಅವಕಾಶವನ್ನು ಹೊಂದಿರಲಿದ್ದಾರೆ. ಈ ಆಯ್ಕೆಯನ್ನು ಪಡೆಯಲು ವಿದ್ಯಾರ್ಥಿಗಳು ಒಟ್ಟು 400 ಕ್ರೆಡಿಟ್‌ಗಳಲ್ಲಿ ಕನಿಷ್ಠ 250 ಕ್ರೆಡಿಟ್‌ಗಳನ್ನು ಗಳಿಸಿರಬೇಕು.

ಯಾರು ಬಳಸಿಕೊಳ್ಳಬಹುದು?

ಈ ವ್ಯವಸ್ಥೆಯನ್ನು 2024 ಬ್ಯಾಚ್‌ನ ವಿದ್ಯಾರ್ಥಿಗಳು 2027 ರಿಂದ ಬಳಸಿಕೊಳ್ಳಬಹುದಾಗಿದೆ. ಇದೇ ವೇಳೆ, ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಹಿರಿಯ ವಿದ್ಯಾರ್ಥಿಗಳಿಗೆ ಸಹ ಈ ಆಯ್ಕೆಯನ್ನು ಲಭ್ಯವಾಗುವಂತೆ ಮಾಡಲು ಐಐಟಿ ಮದ್ರಾಸ್ ಯೋಜನೆ ರೂಪಿಸಿದೆ. ಆದರೆ, ಬಿಎಸ್ಸಿ ಪದವಿಯನ್ನು ಆಯ್ಕೆ ಮಾಡುವ ಮೊದಲು ವಿದ್ಯಾರ್ಥಿಗಳು ಕನಿಷ್ಠ ಒಂದು ಬಾರಿ ಆದರೂ ಬಿಟೆಕ್ ಪದವಿಯನ್ನು ಪೂರ್ಣಗೊಳಿಸುವ ಪ್ರಯತ್ನ ಮಾಡಿರಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ.

ಐಐಟಿ ಮದ್ರಾಸ್‌ನ ಡೀನ್ (ಶೈಕ್ಷಣಿಕ ಕೋರ್ಸ್‌ಗಳು) ಪ್ರೊಫೆಸರ್ ಪ್ರತಾಪ್ ಹರಿದಾಸ್ ಈ ಕುರಿತು ಮಾತನಾಡಿ, ನಾವು ವಿಶೇಷತೆಯೊಂದಿಗೆ ಬಿಎಸ್ಸಿ ಪದವಿಯನ್ನೂ ನೀಡಲು ಯೋಜಿಸುತ್ತಿದ್ದೇವೆ. ಪ್ರತಿಯೊಂದು ವಿಭಾಗವೂ ಬಿಎಸ್ಸಿ ವಿಶೇಷತೆಗೆ ಅಗತ್ಯವಿರುವ ಕೋರ್ ಕ್ರೆಡಿಟ್‌ಗಳ ಸಂಖ್ಯೆಯನ್ನು ನಿರ್ದಿಷ್ಟಪಡಿಸಲಿದೆ ಎಂದು ತಿಳಿಸಿದ್ದಾರೆ.

ಮುಂದುವರೆದು ಮಾತನಾಡಿ, ಈ ಬಿಎಸ್ಸಿ ಪದವಿ ವಿದ್ಯಾರ್ಥಿಗಳಿಗೆ ಎಂಬಿಎ ಸೇರಿದಂತೆ ಉನ್ನತ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಹಾಗೂ ನಾಗರಿಕ ಸೇವೆಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ಸಹಕಾರಿಯಾಗಲಿದೆ. ಜೊತೆಗೆ, ಕೋರ್ಸ್ ಮಧ್ಯದಲ್ಲಿ ನಿರ್ಗಮಿಸುವ ವಿದ್ಯಾರ್ಥಿಗಳು ನಂತರ ನಮ್ಮ ಆನ್‌ಲೈನ್ ಬಿಎಸ್ ಪದವಿ ಕಾರ್ಯಕ್ರಮಗಳಿಗೆ ಸೇರುವ ಅವಕಾಶವೂ ಹೊಂದಿರುತ್ತಾರೆ ಎಂದು ಹೇಳಿದ್ದಾರೆ.

ಐಐಟಿ ಮದ್ರಾಸ್ ಅಧಿಕಾರಿಗಳ ಪ್ರಕಾರ, ಕೆಲವೊಂದು ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಹೊಂದದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡಿರುವುದರಿಂದ ಪದವಿಯನ್ನು ಪೂರ್ಣಗೊಳಿಸಲು ಸಂಕಷ್ಟ ಅನುಭವಿಸುತ್ತಿದ್ದಾರೆ. ಇನ್ನೂ ಕೆಲವರು ಉದ್ಯಮಶೀಲತೆಯತ್ತ ಹೆಜ್ಜೆ ಇಟ್ಟು, ಸ್ವಂತ ವ್ಯವಹಾರ ಆರಂಭಿಸಿದ ನಂತರ ತಮ್ಮ ಪದವಿಯನ್ನು ಮಧ್ಯದಲ್ಲಿ ತೊರೆಯುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಪದವಿಯೊಂದನ್ನು ಪಡೆದಂತೆ ಮಾಡಲು ಈ ಹೊಸ ನಿರ್ಗಮನ ಆಯ್ಕೆಯನ್ನು ಪರಿಚಯಿಸಲಾಗಿದೆ ಎಂದು ಡೀನ್ ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ 

ಗಮನಾರ್ಹವಾಗಿ, ಪದವಿ ಕಾರ್ಯಕ್ರಮಗಳಲ್ಲಿ ಬಹು ಪ್ರವೇಶ ಮತ್ತು ಬಹು ನಿರ್ಗಮನ ವ್ಯವಸ್ಥೆಯನ್ನು ಒದಗಿಸುವುದು ರಾಷ್ಟ್ರೀಯ ಶಿಕ್ಷಣ ನೀತಿ (NEP) ಯ ಪ್ರಮುಖ ಅಂಶಗಳಲ್ಲಿ ಒಂದಾಗಿದ್ದು, ಐಐಟಿ ಮದ್ರಾಸ್ ಈ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದೆ.

ಇದಲ್ಲದೆ, ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಐಐಟಿ ಮದ್ರಾಸ್ ಹಲವು ಸುಧಾರಣೆಗಳನ್ನು ಜಾರಿಗೊಳಿಸಿದೆ. ಅದರ ಭಾಗವಾಗಿ, ಪ್ರತಿ ಸೆಮಿಸ್ಟರ್‌ನಲ್ಲಿ ವಿದ್ಯಾರ್ಥಿಗಳು ಗಳಿಸಬೇಕಾದ ಕನಿಷ್ಠ ಕ್ರೆಡಿಟ್‌ಗಳ ಸಂಖ್ಯೆಯನ್ನು ಸುಮಾರು 10 ಶೇಕಡಾ ಇಳಿಸಲಾಗಿದೆ.

ಈ ಕುರಿತು ಪ್ರೊಫೆಸರ್ ಪ್ರತಾಪ್ ಹರಿದಾಸ್ ವಿವರಿಸುತ್ತಾ, “ಸಾಮಾನ್ಯವಾಗಿ ಒಬ್ಬ ವಿದ್ಯಾರ್ಥಿ ಒಂದು ಸೆಮಿಸ್ಟರ್‌ನಲ್ಲಿ 66 ಕ್ರೆಡಿಟ್‌ಗಳನ್ನು ಸುಲಭವಾಗಿ ಗಳಿಸಬಹುದು. ಆದರೆ ಈಗ ನಾವು ಪ್ರತಿ ಸೆಮಿಸ್ಟರ್‌ಗೆ ಅಗತ್ಯವಿರುವ ಕನಿಷ್ಠ ಕ್ರೆಡಿಟ್‌ಗಳ ಸಂಖ್ಯೆಯನ್ನು 50 ಕ್ರೆಡಿಟ್‌ಗಳಿಗೆ ಇಳಿಸಿದ್ದೇವೆ. ಉತ್ತಮ ಸಿಜಿಪಿಎ ಹೊಂದಿರುವ ವಿದ್ಯಾರ್ಥಿಗಳಿಗೆ ಮಾತ್ರ ಒಂದು ಸೆಮಿಸ್ಟರ್‌ನಲ್ಲಿ ಹೆಚ್ಚಿನ ಕ್ರೆಡಿಟ್‌ಗಳನ್ನು ಪಡೆಯಲು ಅವಕಾಶ ನೀಡಲಾಗುತ್ತದೆ” ಎಂದು ತಿಳಿಸಿದ್ದಾರೆ.

ಇದೇ ವೇಳೆ, ಐಐಟಿ ಮದ್ರಾಸ್ ತನ್ನ ಬಿಟೆಕ್ ಕಾರ್ಯಕ್ರಮದಲ್ಲಿ ಸುಮಾರು 40 ಶೇಕಡಾ ಕೋರ್ಸ್‌ಗಳನ್ನು ಐಚ್ಛಿಕ ವಿಷಯಗಳಾಗಿ ಪರಿವರ್ತಿಸಿದೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಹಾಗೂ ಭವಿಷ್ಯ ಗುರಿಗಳಿಗೆ ಹೊಂದುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ದೊರೆಯಲಿದೆ. ಜೊತೆಗೆ, ವಿದ್ಯಾರ್ಥಿಗಳಿಗೆ ಹೆಚ್ಚಿನ ಶೈಕ್ಷಣಿಕ ಆಯ್ಕೆಯನ್ನು ಒದಗಿಸುವ ಉದ್ದೇಶದಿಂದ ಅಂತರಶಿಸ್ತೀಯ ಡ್ಯುಯಲ್ ಡಿಗ್ರಿ ಹಾಗೂ ಮೈನರ್ ಡಿಗ್ರಿ ಕಾರ್ಯಕ್ರಮಗಳನ್ನು ಸಹ ಸಂಸ್ಥೆ ಪರಿಚಯಿಸಿದೆ.

ಈ ಎಲ್ಲ ಸುಧಾರಣೆಗಳು ವಿದ್ಯಾರ್ಥಿ ಸ್ನೇಹಿ ಶಿಕ್ಷಣ ವ್ಯವಸ್ಥೆಯತ್ತ ಐಐಟಿ ಮದ್ರಾಸ್ ತೆಗೆದುಕೊಂಡಿರುವ ಮಹತ್ವದ ಹೆಜ್ಜೆಗಳಾಗಿವೆ ಎಂದು ಶೈಕ್ಷಣಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

PREV
Read more Articles on
click me!

Recommended Stories

ನಗರ ವಿವಿ ಎಡವಟ್ಟು: 400 ಎಂಕಾಂ ಸ್ಟೂಡೆಂಟ್ಸ್ ಫೇಲ್‌!
ಸರ್ಕಾರಿ ಶಾಲೆಗಳ ಆಘಾತಕಾರಿ ಬೆಳವಣಿಗೆ, ಮಕ್ಕಳ ದಾಖಲಾತಿ 17 ಲಕ್ಷ ಕುಸಿತ ನಿಜವೆಂದು ಒಪ್ಪಿಕೊಂಡ ಸರ್ಕಾರ!