ವೃತ್ತಿಪರ ಕೋರ್ಸ್‌ಗೆ ಪ್ರವೇಶ: ಸೀಟ್‌ ಬ್ಲಾಕ್‌ ಮಾಡಿ​ದ್ರೆ 5 ಪಟ್ಟು ಶುಲ್ಕ ದಂಡ

By Kannadaprabha NewsFirst Published Oct 8, 2020, 10:08 AM IST
Highlights

ಶುಲ್ಕ ಮುಟ್ಟು​ಗೋ​ಲು| ಕೆಇಎ ವೃತ್ತಿ​ಪರ ಕೋರ್ಸ್‌ಗೆ ಅನ್ವ​ಯ| ಸೀಟ್‌ ಬ್ಲಾಕಿಂಗ್‌ ದಂಧೆಗೆ ಸರ್ಕಾರ ಲಗಾ​ಮು| ಹಂಚಿಕೆಯಾಗದಿರುವ ಸೀಟುಗಳನ್ನು ಮುಂದಿನ ಸುತ್ತುಗಳಲ್ಲಿ ಹಂಚಿಕೆ ಮಾಡಲು ಅನುಕೂಲ| 

ಬೆಂಗಳೂರು(ಅ.08): ಇನ್ಮುಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ವೃತ್ತಿಪರ ಕೋರ್ಸುಗಳ ಪ್ರವೇಶ ಪ್ರಕ್ರಿಯೆಯಲ್ಲಿ ಸಿಕ್ಕ ಸೀಟಿಗೆ ಅಭ್ಯರ್ಥಿಗಳು ನಿಗದಿತ ಸಮಯಕ್ಕೆ ಪ್ರವೇಶ ಪಡೆಯದೆ ಅಥವಾ ಬೇಡದ ಸೀಟನ್ನು ವಾಪಸ್‌ ನೀಡದೇ ಹೋದರೆ ತಾವು ಪಾವತಿಸಿದ ಶುಲ್ಕ ಮುಟ್ಟುಗೋಲಿನ ಜೊತೆಗೆ 5 ಪಟ್ಟು ದಂಡ ಪಾವತಿಸಬೇಕಾಗುತ್ತದೆ.

ಖಾಸಗಿ ವೃತ್ತಿಪರ ಕಾಲೇಜುಗಳ ಸೀಟ್‌ ಬ್ಲಾಕಿಂಗ್‌ ದಂಧೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಇಂತಹದ್ದೊಂದು ಕಠಿಣ ಅಸ್ತ್ರ ಪ್ರಯೋಗಕ್ಕೆ ಸಿದ್ಧವಾಗಿದೆ. ಈ ಸಂಬಂಧ ಅಗತ್ಯ ನಿಯಮಾವಳಿಗಳನ್ನು ಸೇರಿಸಿ ಸಿದ್ದಪಡಿಸಲಾಗಿದ್ದ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ (ಸರ್ಕಾರಿ ಸೀಟುಗಳ ದಾಖಲಾತಿ) ತಿದ್ದುಪಡಿ ಕಾಯ್ದೆ 2020ಕ್ಕೆ ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಅನುಮೋದನೆಯೂ ದೊರೆತಿದೆ. ಹಾಗಾಗಿ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಶೀಘ್ರದಲ್ಲೇ ಆರಂಭವಾಗಲಿರುವ ಪ್ರಸಕ್ತ ಸಾಲಿನ ಪ್ರವೇಶ ಪ್ರಕ್ರಿಯೆಯಲ್ಲೇ ಈ ನಿಯಮ ಜಾರಿಗೆ ಬರಲಿದೆ.

ಶಾಲೆ ಆರಂಭ ಬೇಡ ಎಂಬ ಬಗ್ಗೆ ಮರುವಿಮರ್ಶೆ ಅಗತ್ಯ: ಸುರೇಶ್ ಕುಮಾರ್!

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸರ್ಕಾರಿ ಕೋಟಾದಡಿ ಖಾಸಗಿ ಕಾಲೇಜುಗಳಲ್ಲಿ ಸೀಟು ಪಡೆದು, ನಿರ್ದಿಷ್ಟಸುತ್ತು ಮುಗಿದ ನಂತರವೂ ಸಂಬಂಧಪಟ್ಟಕಾಲೇಜಿಗೆ ಸೇರಿಕೊಳ್ಳದೇ ಇದ್ದರೆ ಅಂತಹ ಸೀಟುಗಳನ್ನು ಹಾಗೂ ಪಾವತಿಸಿದ ಶುಲ್ಕವನ್ನು ಪ್ರಾಧಿಕಾರದ ಕಾರ್ಯಕಾರಿ ನಿರ್ದೇಶಕರು ಮುಟ್ಟುಗೋಲು ಹಾಕಿಕೊಳ್ಳಲಿದ್ದಾರೆ. ಇದರ ಜೊತೆಗೆ ಶುಲ್ಕದ ಐದು ಪಟ್ಟು ದಂಡವನ್ನು ಸದರಿ ವಿದ್ಯಾರ್ಥಿಗೆ ವಿಧಿಸಲು ಅವಕಾಶ ನೀಡುವ ನಿಯಮ ರೂಪಿಸಲಾಗಿದೆ. ವೃತ್ತಿಪರ ಶಿಕ್ಷಣ ಸಂಸ್ಥೆಗಳು ಸರ್ಕಾರಿ ಕೋಟಾ ಸೀಟು ಹಂಚಿಕೆಯ ನಂತರ ದಾಖಲಾತಿ ಪ್ರಕ್ರಿಯೆ ಮಾಹಿತಿಯನ್ನು ಸೂಕ್ತ ಸಮಯಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಲ್ಲಿಸಬೇಕು. 

ಹಂಚಿಕೆಯಾಗದಿರುವ ಸೀಟುಗಳನ್ನು ಮುಂದಿನ ಸುತ್ತುಗಳಲ್ಲಿ ಹಂಚಿಕೆ ಮಾಡಲು ಅನುಕೂಲವಾಗಲಿದೆ. ಎಂಜಿನಿಯರಿಂಗ್‌ ಕಾಲೇಜುಗಳು ಸೂಕ್ತ ಸಮಯದಲ್ಲಿ ಸೀಟು ಭರ್ತಿಯಾಗದೇ ಇರುವ ಮಾಹಿತಿ ನೀಡದೆ, ಅಂತಿಮವಾಗಿ ಸೀಟು ಭರ್ತಿಯಾಗದೇ ಉಳಿದಲ್ಲಿ, ಸಂಬಂಧಪಟ್ಟ ಎಂಜಿನಿಯರಿಂಗ್‌ ಕಾಲೇಜು ಅಥವಾ ಶಿಕ್ಷಣ ಸಂಸ್ಥೆ ವಿದ್ಯಾರ್ಥಿ ಶುಲ್ಕದ 5 ಪಟ್ಟು ದಂಡ ಪಾವತಿಸಬೇಕಾಗುತ್ತದೆ ಎಂದು ಕಾಯ್ದೆಯ ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.
 

click me!