* ಕಲಾ-ಶಿಕ್ಷಣ-ವಿಜ್ಞಾನ ಕೋರ್ಸ್‌ಗೆ ವಿದ್ಯಾರ್ಥಿಗಳ ಪ್ರವೇಶ
* ಪ್ರವೇಶ ಪಡೆಯಲು ನಿತ್ಯ ಸರದಿ ಸಾಲಿನಲ್ಲಿ ನಿಲ್ಲುತ್ತಿರುವ ನೂರಾರು ವಿದ್ಯಾರ್ಥಿಗಳು
* ಜೂನ್ 15ರ ವರೆಗೆ ಪ್ರವೇಶ ಪ್ರಕ್ರಿಯೆ
ಮಂಜುನಾಥ ಕೆ.ಎಂ.
ಬಳ್ಳಾರಿ(ಜೂ.08): ಗ್ರಾಮೀಣ ವಿದ್ಯಾರ್ಥಿಗಳ ಪಾಲಿನ ಅಕ್ಷರತಾಣ ಎನಿಸಿದ ಇಲ್ಲಿನ ಸರ್ಕಾರಿ ಪದವಿಪೂರ್ವ (ಮುನ್ಸಿಪಲ್) ಕಾಲೇಜು ಪ್ರವೇಶಕ್ಕೆ ಈ ಬಾರಿ ಬೇಡಿಕೆ ಹೆಚ್ಚಿದೆ. ಈಗಾಗಲೇ ಪ್ರವೇಶಾತಿ ಪ್ರಕ್ರಿಯೆ ಚಾಲನೆ ಸಿಕ್ಕಿದ್ದು ಕಲಾ, ವಿಜ್ಞಾನ ಹಾಗೂ ಶಿಕ್ಷಣ ವಿಭಾಗದಲ್ಲಿ ಪ್ರವೇಶ ಪಡೆಯಲು ನಿತ್ಯ ನೂರಾರು ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.
undefined
ಜಿಲ್ಲೆಯ ವಿವಿಧ ತಾಲೂಕಿನ ವಿದ್ಯಾರ್ಥಿಗಳು ದೂರದ ಊರುಗಳಿಂದ ಆಗಮಿಸಿ ಈ ಕಾಲೇಜಿನಲ್ಲಿ ಪ್ರವೇಶ ಪಡೆಯುತ್ತಿರುವುದು ಕಾಲೇಜಿನ ಗುಣಮಟ್ಟಕ್ಕೆ ಹಿಡಿದ ಕನ್ನಡಿ. ಕಳೆದ ವರ್ಷ ಪಿಯುಸಿ ಮೊದಲ ವರ್ಷಕ್ಕೆ 1617 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಪ್ರಥಮ ಹಾಗೂ ದ್ವಿತೀಯ ವರ್ಷ ಸೇರಿ 2540 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ತರಗತಿ ಕೋಣೆಗಳ ಕೊರತೆಯೇನಿಲ್ಲ ಎನ್ನುತ್ತಾರೆ ಕಾಲೇಜಿನ ಪ್ರಾಂಶುಪಾಲ ವೆಂಕಟರೆಡ್ಡಿ. ಎಜ್ಯುಕೇಷನ್ ಬ್ಲಾಕ್‌ನಲ್ಲಿ ಹೆಚ್ಚುವರಿ ಮೂರ್ನಾಲ್ಕು ಕೋಣೆಗಳಿವೆ. ಈಗಾಗಲೇ ತರಗತಿ ಕೋಣೆಗಳ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಎನ್‌ಎಸ್‌ಎಸ್, ಮಹಿಳೆಯರ ವಿಶ್ರಾಂತಿ ಕೋಣೆ, ಸ್ಕೌಟ್ಸ್ ಅಂಡ್ ಗೈಡ್‌್ಸಗೂ ಪ್ರತ್ಯೇಕ ರೂಂನ ವ್ಯವಸ್ಥೆಯಾಗಲಿದೆ. ಗ್ರಂಥಾಲಯದ ಜಾಗವನ್ನು ಸಹ ಮತ್ತಷ್ಟೂವಿಸ್ತರಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಅಲ್ಲಿಯೇ ಕುಳಿತು ಓದಿಕೊಳ್ಳಲು ಅನುಕೂಲವಾಗಲಿದೆ ಎನ್ನುತ್ತಾರೆ.
ಕಾಯಂ ಉಪನ್ಯಾಸಕರಿಲ್ಲ
ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಗುಣಮಟ್ಟದ ಬೋಧನೆಗೆ ಹೆಸರಾಗಿರುವ ಮುನ್ಸಿಪಲ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗಕ್ಕೆ ಕಾಯಂ ಉಪನ್ಯಾಸಕರೇ ಇಲ್ಲ. ಹೀಗಾಗಿ, ಈ ವಿಭಾಗದಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ವಾಣಿಜ್ಯ ವಿಭಾಗದ ನಾಲ್ಕು ಮಂಜೂರಾತಿ ಹುದ್ದೆಗಳ ಪೈಕಿ ಎಲ್ಲವೂ ಖಾಲಿ ಇವೆ. ವರ್ಗಾವಣೆ ಕೌನ್ಸೆಲಿಂಗ್‌ನಲ್ಲಿ ಉಪನ್ಯಾಸಕರು ಬರುವ ಸಾಧ್ಯತೆಯಿದೆ. ಜೊತೆಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಮೂಲಕ ಉಪನ್ಯಾಸಕರ ಕೊರತೆಯನ್ನು ನೀಗಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಸದ್ಯ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ 396 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟು 34 ಸಿಬ್ಬಂದಿ ಇದ್ದು ಈ ಪೈಕಿ ಓರ್ವ ಪ್ರಾಂಶುಪಾಲರು ಸೇರಿದಂತೆ 28 ಬೋಧಕರು ಹಾಗೂ 5 ಜನ ಡಿ ಗ್ರೂಫ್ ನೌಕರರಿದ್ದಾರೆ.
ನೀಟ್-ಸಿಇಟಿ ಇಲ್ಲ ಎಂಬ ಕೊರಗು
ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ಮುನ್ಸಿಪಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ನೀಟ್ ಹಾಗೂ ಸಿಇಟಿ ತರಬೇತಿ ಲಭ್ಯವಿಲ್ಲ. ಖಾಸಗಿ ಕಾಲೇಜುಗಳು ‘ನೀಟ್-ಸಿಇಟಿಯಲ್ಲಿ ನಾವು ಮುಂದಿದ್ದೇವೆ. ನಿಮ್ಮ ಮಕ್ಕಳ ಭವಿಷ್ಯ ರೂಪಿಸುತ್ತೇವೆ’ ಎಂದು ಪ್ರಚಾರ ಮಾಡಿಕೊಂಡೇ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದಾಖಲು ಮಾಡಿಕೊಳ್ಳುತ್ತಿವೆ.
ಜೂನ್ 15ರ ವರೆಗೆ ಪ್ರವೇಶ ಪ್ರಕ್ರಿಯೆ
ಸರ್ಕಾರದ ನಿಯಮ ಪ್ರಕಾರ ಈ ತಿಂಗಳು 9 ರಿಂದ ತರಗತಿಗಳು ಶುರುಗೊಳ್ಳಬೇಕು. ಆದರೆ, ಕಾಲೇಜಿನ ಪ್ರಾಂಶುಪಾಲ ಸೇರಿದಂತೆ ಎಲ್ಲ ಬೋಧಕ ಸಿಬ್ಬಂದಿ ದ್ವಿತೀಯ ಪರೀಕ್ಷೆಯ ಮೌಲ್ಯಮಾಪನ ಕಾರ್ಯಕ್ಕೆ ನಿಯೋಜನೆಗೊಂಡಿದ್ದರಿಂದ ತರಗತಿಗಳ ಆರಂಭಕ್ಕೆ ಒಂದಷ್ಟುವಿಳಂಬವಾಗುವ ಸಾಧ್ಯತೆ ಇದೆ. ಇದೀಗಷ್ಟೇ ಪ್ರಥಮ ವರ್ಷದ ಪ್ರವೇಶ ಪ್ರಕ್ರಿಯೆ ಶುರುಗೊಂಡಿದ್ದು ಎಲ್ಲ ಉಪನ್ಯಾಸಕರು ತೊಡಗಿಸಿಕೊಂಡಿದ್ದಾರೆ. ಜೂನ್ 15ರ ವರೆಗೆ ದಂಡವಿಲ್ಲದೆ ಪ್ರವೇಶಕ್ಕೆ ಅವಕಾಶವಿದೆ. ಸರ್ಕಾರ ಪ್ರವೇಶ ದಿನಾಂಕವನ್ನು ಮುಂದೂಡುವ ಸಾಧ್ಯತೆ ಇದೆ.
ಈ ಬಾರಿ ವಿಜ್ಞಾನ, ಕಲಾ ಹಾಗೂ ಶಿಕ್ಷಣ ವಿಭಾಗದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಸಾಧ್ಯತೆ ಇದೆ. ಈಗಾಗಲೇ ನೂರಾರು ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಕಾಲೇಜಿಗೆ ಬರುತ್ತಿದ್ದು, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಇಡೀ ಕಾಲೇಜಿನ ಬೋಧಕ ಸಿಬ್ಬಂದಿ ತಂಡ ಶ್ರಮಿಸಲಿದೆ ಅಂತ ಬಳ್ಳಾರಿ ಸರ್ಕಾರಿ ಪದವಿಪೂರ್ವ (ಮುನ್ಸಿಪಲ್) ಕಾಲೇಜಿನ ಪ್ರಾಂಶುಪಾಲ ವೆಂಕಟರೆಡ್ಡಿ ತಿಳಿಸಿದ್ದಾರೆ.