ಮಾರ್ಚ್-ಏಪ್ರಿಲ್ ತಿಂಗಳುಗಳು ಎಂದರೆ ಪರೀಕ್ಷಾ ಕಾಲ. ತಿಳಿದೋ ತಿಳಿಯದೆಯೋ ಪರೀಕ್ಷೆಗಳೆಂದರೆ ಅತಿಯಾಗಿ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ‘ಈ ಪರೀಕ್ಷಾ ಒತ್ತಡವನ್ನು ನಿವಾರಿಸುವುದು ಹೇಗೆ ಎಂದು ಹೇಳುತ್ತಾರೆ ಲೇಖಕರಾದ ಡಾ. ವಿರೂಪಾಕ್ಷ ದೇವರಮನೆ
ಲೇಖಕ: ಡಾ. ವಿರೂಪಾಕ್ಷ ದೇವರಮನೆ
ಮಾರ್ಚ್-ಏಪ್ರಿಲ್ ತಿಂಗಳುಗಳು ಎಂದರೆ ಪರೀಕ್ಷಾ ಕಾಲ. ತಿಳಿದೋ ತಿಳಿಯದೆಯೋ ಪರೀಕ್ಷೆಗಳೆಂದರೆ ಅತಿಯಾಗಿ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ‘ಪರೀಕ್ಷೆ ಹತ್ರ ಬಂತು ನೀನಿನ್ನು ಸೀರಿಯಸ್ಸಾಗಿಲ್ಲ’ ಎಂದು ಮಕ್ಕಳ ಬದಲಾಗಿ ತಾವೇ ಆತಂಕಿತರಾಗುವ ಹೆತ್ತವರು, ಮತ್ತು ಹೇಗಾದ್ರೂ ಮಾಡಿ ಪ್ರತೀ ವರ್ಷದಂತೆ ಈ ವರ್ಷವೂ ಶಾಲೆಯ ಫಲಿತಾಂಶಗಳನ್ನೂ 100% ಬರುವಂತೆ ಶತಾಯಗತಾಯ ಪ್ರಯತ್ನಿಸುವ ಆತಂಕದಲ್ಲಿರುವ ಶಿಕ್ಷಕರ ಪರಿಸ್ಥಿತಿಯನ್ನು ನೋಡಿದಾಗ ಈ ಪರೀಕ್ಷೆಗಳ ಬಗೆಗೆ ಫಲಿತಾಂಶಗಳ ಕುರಿತು ನಮ್ಮ ಧೋರಣೆ ಬದಲಾಗಬೇಕು ಎನಿಸುವುದು ಸಹಜ. ಈ ಪರೀಕ್ಷಾ ತಯಾರಿಗಳು ಶಿಬಿರಗಳು, ಪರೀಕ್ಷಾ ಒತ್ತಡ ನಿರ್ವಹಣೆ ಕುರಿತ ತರಬೇತಿಗಳು ವರ್ಷದ ಕೊನೆಯಲ್ಲಿ ಮಾತ್ರ ಸೀಮಿತವಾಗದೆ ಆರಂಭದಿಂದಲೂ ವ್ಯವಸ್ಥಿತವಾಗಿ ಮಾಡುವುದರ ಅಗತ್ಯತೆ ತೋರುತ್ತದೆ. ವಿದ್ಯಾರ್ಥಿಗಳ ವಿಷಯವಾರು ನಿರ್ವಹಣೆಯಲ್ಲಿನ ಶಕ್ತತೆ-ಅಶಕ್ತತೆಗಳು ಆರಂಭದಿಂದಲೂ ತಿಳಿದಿದ್ದು ಅವರಿಗೆ ಬೇಕಾದ ಪೂರಕ ತರಬೇತಿಗಳನ್ನು ಶಾಲೆ ನೀಡಲು ಸಾಧ್ಯವಾಗುತ್ತದೆ. ಹಾಗೆಯೇ ಮಕ್ಕಳ ಶೈಕ್ಷಣಿಕ ನಿರ್ವಹಣೆ ಕುರಿತು ಪೋಷಕರಿಗೆ ವಾಸ್ತವ ನಿರೀಕ್ಷೆಗಳನ್ನಿಟ್ಟುಕೊಂಡು ಅಗತ್ಯವಿರುವ ಮಕ್ಕಳಿಗೆ ಆರಂಭದಿಂದಲೇ ಹೆಚ್ಚಿನ ಸಹಾಯವನ್ನು ಒದಗಿಸಬಹುದು.
ಕಲಿಯುವವರಲ್ಲಿ ಹಲವು ವಿಧ. ಕೆಲವರು ಕೇವಲ ಪಾಠಗಳನ್ನು ಕೇಳಿಸಿಕೊಂಡೇ ಕಲಿತು ಬಿಟ್ಟರೆ ಇನ್ನೂ ಕೆಲವರಿಗೆ ಏನಾದರೂ ಬೋಧನಾ ಸಾಮಾಗ್ರಿಗಳನ್ನೋ, ದೃಶ್ಯ- ಶ್ರವಣ ಮಾಧ್ಯಮಗಳನ್ನು ಬಳಸಿ ಕಲಿಸಿದರೆ ಹೆಚ್ಚು ಅರ್ಥವಾಗುವುದು. ಕೆಲವು ವಿದ್ಯಾರ್ಥಿಗಳಿಗೆ ಆಟ- ಚಟುವಟಿಕೆಗಳ ಮೂಲಕ ಕಲಿಸಿದರೆ ಮಾತ್ರ ವಿಷಯಗಳು ನೆನಪಿನಲ್ಲಿ ಉಳಿಯುತ್ತವೆ. ಹಾಗೆಯೇ ಮಿದುಳು ಎಲ್ಲರಿಗೂ ಒಂದೇ ಆದರೂ ಪ್ರತಿಯೊಬ್ಬರಲ್ಲೂ ಬಲ ಅಥವಾ ಎಡ ಮಿದುಳುಗಳಲ್ಲಿ ಒಂದು ಭಾಗದ ಪ್ರಭಾವ ಹೆಚ್ಚಾಗಿರುವುದನ್ನು ಕಾಣುತ್ತೇವೆ. ಬಲ ಮಿದುಳಿನ ಪ್ರಾಧಾನ್ಯತೆ ಕಂಡು ಬರುವವರಲ್ಲಿ ಕಲ್ಪನೆಗಳು, ಸಂಗೀತ, ಲಯಬದ್ಧತೆ, ಊಹಾತ್ಮಕತೆ, ಸೃಜನಶೀಲತೆ, ಹಗಲು ಕನಸು, ಕಲೆ, ಬಣ್ಣಗಳು, ಪ್ರಾದೇಶಿಕ ಜ್ಞಾನ ಧಾರಾಳವಾಗಿ ಸಿಗುತ್ತದೆ. ಎಡ ಮಿದುಳಿನ ಪ್ರಾಧಾನ್ಯತೆ ಇರುವವರು ತಾರ್ಕಿಕತೆ, ವಿಶ್ಲೇಷಣೆ, ಗಣಿತ, ಭಾಷೆ, ಪದಗಳು, ಬರವಣಿಗೆ, ಓದು, ವಾಕ್‌ಚಾತುರ್ಯದಲ್ಲಿ ನಿಪುಣರಾಗಿರುತ್ತಾರೆ. ಈ ರೀತಿ ಮಕ್ಕಳ ಕಲಿಕೆ ವಿವಿಧ ರೀತಿಯ ಮಿದುಳಿನ ಕಾರ್ಯವೈಖರಿಯ ಮೇಲೆ, ಅನುವಂಶಿಕ ಸಮರ್ಥತೆ - ಅಸಮರ್ಥತೆಗಳ ಮೇಲೆ ಅವಲಂಬಿತವಾಗಿದ್ದರೂ ಕೂಡ ಸಾಮರ್ಥ್ಯತೆಯನ್ನು ನಿರ್ಧರಿಸುವ ಪರೀಕ್ಷೆಗಳು, ಪ್ರಶ್ನೆಪತ್ರಿಕೆಗಳು ಒಂದೇ ರೀತಿಯವು ಆಗಿರಬೇಕಾದ ಅನಿವಾರ್ಯತೆಯನ್ನು ಅರ್ಥಮಾಡಿಕೊಂಡಾಗ ವಿದ್ಯಾರ್ಥಿಗಳ ಅಂಕಗಳನ್ನು ನಾವು ಇನ್ನಷ್ಟು ಸಹಜವಾಗಿ ಸ್ವೀಕರಿಸಲಾದೀತು.
ನಮ್ಮ ದೇಶದಲ್ಲಿ ಹದಿಹರೆಯದವರರಲ್ಲಿ ಆತ್ಮಹತ್ಯೆಯ ಅಪಾಯ ಶೇಕಡ 1.3ರಷ್ಟಿದೆ. ಫ್ರೌ ಶಾಲಾ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆಯ ಆಲೋಚನೆಗಳು 6.0- 21.7%ರಷ್ಟಿದೆ. ಹಾಗೆಯೇ ಆತ್ಮಹತ್ಯೆಯ ಪ್ರಯತ್ನಗಳು 0.39- 8% ಇದೆ. ಒಂದು ವೇಳೆ ಈ ಹದಿಹರೆಯದವರಲ್ಲಿಮಾನಸಿಕ ಆರೋಗ್ಯದ ಸಮಸ್ಯೆಗಳಿದ್ದರೆ ಆತ್ಮಹತ್ಯೆಯ ಅಪಾಯ 47- 74%ರಷ್ಟು ಹೆಚ್ಚುತ್ತದೆ. 2020ರಲ್ಲಿ ಪ್ರತಿ ಗಂಟೆಗೆ ಒಬ್ಬ ಹದಿಹರೆಯದವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಗಳು ತಿಳಿಸುತ್ತದೆ. ಅದರಲ್ಲೂ ಬಾಲಕರಿಗಿಂತ, ಬಾಲಕಿಯರೇ ಹೆಚ್ಚು. ಕೌಟುಂಬಿಕ ಸಮಸ್ಯೆಗಳು(35%), ಸಂಬಂಧಗಳಲ್ಲಿ ಬಿರುಕು (12%), ದೈಹಿಕ- ಮಾನಸಿಕ ಅನಾರೋಗ್ಯ(12%), ಪರೀಕ್ಷಾ ವೈಫಲ್ಯ(10%) ಆತ್ಮಹತ್ಯೆಗೆ ತಿಳಿದು ಬಂದ ಕಾರಣಗಳು. ಶೈಕ್ಷಣಿಕ ಸಂಸ್ಥೆಗಳು ಹಾಗೂ ಪೋಷಕರು ಜಂಟಿಯಾಗಿ ಪ್ರಯತ್ನಿಸಿದರೆ ಈ ಪರೀಕ್ಷಾ ವೈಫಲ್ಯಕ್ಕೆ ಸಂಬಂಧಿಸಿದ ಆತ್ಮಹತ್ಯೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯವಿದೆ ಎನ್ನುವುದೇ ಸಮಾಧಾನದ ವಿಚಾರ.
ಶಾಲೆಯಲ್ಲಿ ಶಿಕ್ಷಕರು ಅಗತ್ಯವಿರುವವರಿಗೆ ಪರೀಕ್ಷೆಗಾಗಿ ಓದುವ ವಿಧಾನಗಳನ್ನೂ ಅಗತ್ಯ ವಿಚಾರಗಳಿಗೆ ಒತ್ತು ಕೊಡುವುದನ್ನೂ ಆಕರ್ಷಕವಾಗಿ ಉತ್ತರಿಸುವುದನ್ನು ಹೇಳಿ, ನಿಗದಿತವಾಗಿ ಓದಲು ಪುರಕವಾದ ವೇಳಾಪಟ್ಟಿಮಾಡಲು ಸಹಾಯ ಮಾಡಬಹುದು. ಪರೀಕ್ಷಾ ಆತಂಕ ಇರುವ ಮಕ್ಕಳಿಗೆ ಆಗಾಗ್ಗೆ ಅಣಕು ಪರೀಕ್ಷೆಗಳನ್ನು ನಡೆಸಬಹುದು. ದೀರ್ಘ ಶ್ವಾಸದ ಪ್ರಾಣಾಯಾಮಗಳನ್ನು ಹೇಳಿಕೊಡಬಹುದು. ಪೋಷಕರು ಮಕ್ಕಳ ಪರೀಕ್ಷಾ ದಿನಗಳಿಗೆ ತಕ್ಕಂತೆ ತಮ್ಮ ದಿನಚರಿಗಳನ್ನು ಬದಲಾಯಿಸಿಕೊಂಡು ಸಾಧ್ಯವಾದಷ್ಟು ಮನೆಯಲ್ಲಿ ಆತಂಕ ರಹಿತ, ಗೊಂದಲ ರಹಿತ ವಾತಾವರಣ ಕಲ್ಪಿಸಿಕೊಡಲು ಪ್ರಯತ್ನಿಸುವುದು ಅವರ ಕರ್ತವ್ಯ. ಪೌಷ್ಟಿಕ ಆಹಾರ, ಹೇರಳವಾದ ಪಾನೀಯ ಮಕ್ಕಳ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತವೆ. ಮಕ್ಕಳೊಂದಿಗೆ ಕುಳಿತು ಅವರ ಶಕ್ತತೆಗೆ ಅನುಗುಣವಾದ ವೇಳಾಪಟ್ಟಿ ತಯಾರಿಸಿ ಅದರಂತೆ ಓದಲು ಪ್ರೇರೇಪಿಸುವುದು ಒಳಿತು. ಒತ್ತಡ ನಿರ್ವಹಣೆಗಾಗಿ ವ್ಯಾಯಾಮ, ಸಂಗೀತ, ನೃತ್ಯ, ಭಜನೆ, ತಿಳಿಹಾಸ್ಯ ಇರಲಿ. ಓದುವಾಗ ಓದಿ- ಆಟವಾಡುವಾಗ ಆಡಲಿ. ಆಗಾಗ್ಗೆ ಅವರ ಹಿಂದಿನ ವೈಫಲ್ಯಗಳನ್ನು ಸ್ಮರಿಸುವುದು, ಇತರ ಮಕ್ಕಳ ಅಂತರಾಳದೊಂದಿಗೆ ಹೋಲಿಸುವುದೋ, ಈ ಬಾರಿ ಕಡಿಮೆ ಅಂಕ ಬಂದರೆ ಎಂದು ಹೆದರಿಸುವುದು ಬೇಡ.
ಮಾರ್ಚ್ ಏಪ್ರಿಲ್ ತಿಂಗಳು ಬಂತೆಂದರೆ ವಿಪರೀತ ಸೆಕೆ ಹಾಗೂ ಬಿಸಿಲು. ಮನೆಯ ಹೊರಗಡೆ ಈ ವಾತಾವರಣವಿದ್ದರೆ ಮನೆಯ ಒಳಗಡೆ ಮಕ್ಕಳ ಹಾಗೂ ಪೋಷಕರ ಮನದಲ್ಲಿ ಪರೀಕ್ಷೆ ಬಿಸಿ. ಬದಲಾದ ಹವಾಮಾನ ಗಿಡ ಮರಗಳಲ್ಲಿ ಚಿಗುರೊಡೆಸಿ, ಪಕ್ಷಿಗಳ ಕಲರವದಿಂದ ಪ್ರಕೃತಿ ಸೌಂದರ್ಯ ಹೆಚ್ಚಿಸುವುದು ಗೊತ್ತಿರುವ ವಾಸ್ತವವಾದುದರಿಂದ ಸೆಕೆ ಸಹಿಸಿಕೊಳ್ಳಲೇಬೇಕು. ಅಂತೆಯೇ ಪರೀಕ್ಷೆಗಳು ಮುಗಿದ ತಕ್ಷಣ ಬರುವ ರಜಾ ದಿನಗಳು, ಆಕರ್ಷಕ ಸಮ್ಮರ್ ಕ್ರಾಂತಿಗಳು, ಅಜ್ಜಿ ಮನೆ ಭೇಟಿ, ಪ್ರವಾಸ ಇತ್ಯಾದಿಗಳು ಬರಬೇಕೆಂದರೆ ಪರೀಕ್ಷೆಗಳು ಮುಗಿಯಲೇ ಬೇಕಲ್ವೇ ಎಂದು ಮಕ್ಕಳಿಗೆ ವಿವರಿಸಬಹುದು.
ಶಿಕ್ಷಕರಿಗೆ ಸಲಹೆಗಳು
ಪೋಷಕರಿಗೆ ಸಲಹೆಗಳು
ವಿದ್ಯಾರ್ಥಿಗಳಿಗೆ ಸಲಹೆಗಳು
ಮಕ್ಕಳ ಸಹಾಯವಾಣಿಗಳು: