* ಹಿಜಾಬ್ ಎದ್ದಿದ್ದ ಉಡುಪಿ ಕಾಲೇಜಿನ ವಿದ್ಯಾರ್ಥಿನಿಯ ಅಮೋಘ ಸಾಧನೆ
* ಹಿಜಾಬ್ ಗಲಾಟೆ ಮಧ್ಯೆ 625 ಅಂಕ ಪಡೆದ ವಿದ್ಯಾರ್ಥಿನಿ
* ಬೂಸ್ಟರ್ ಡೋಸ್ ಡೋಸ್ ಕೊಟ್ಟ ಗಾಯತ್ರಿ
ವರದಿ- ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ, (ಮೇ.21): ಬಡಮಕ್ಕಳ ಕಾಲೇಜಿನ ಹುಡುಗಿಯೊಬ್ಬಳು ಅತಿ ದೊಡ್ಡ ಸಾಧನೆ ಮಾಡಿದ್ದಾಳೆ. ಹಿಜಾಬ್ ವಿವಾದ ಆರಂಭವಾದ ಉಡುಪಿಯ ಸರಕಾರಿ ಪದವಿಪೂರ್ವ ಹೆಣ್ಮಕ್ಕಳ ಕಾಲೇಜಿನ, 10ನೇ ತರಗತಿಯ ವಿದ್ಯಾರ್ಥಿ 625 ಅಂಕ ಪಡೆದು ಹೊಸ ಸಾಧನೆ ಮೆರೆದಿದ್ದಾಳೆ. ಧರ್ಮ ಮುಖ್ಯವೋ ಶಿಕ್ಷಣ ಮುಖ್ಯವೋ? ಎಂಬ ಚರ್ಚೆಯನ್ನು ರಾಜ್ಯಾದ್ಯಂತ ಹುಟ್ಟುಹಾಕಿದ್ದ ಕಾಲೇಜು, ಶಿಕ್ಷಣವೇ ಮುಖ್ಯ ಅನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.
ಉಡುಪಿಯಲ್ಲಿ ಹಿಜಾಬ್ ವಿವಾದ ಆರಂಭವಾದಾಗ ಈ ಪಿಯು ಕಾಲೇಜಿನ ಬಗ್ಗೆ ಮೂಗು ಮುರಿದವರೇ ಹೆಚ್ಚು . ಇದೇ ಕಾಲೇಜಿನ ಪಿಯುಸಿ ವಿಭಾಗದ ಆರು ವಿದ್ಯಾರ್ಥಿನಿಯರು ಹೈ ಕೋರ್ಟ್ ಮೆಟ್ಟಿಲೇರಿದಾಗ, ಅದೇ ಸಮುದಾಯದ ಇತರ ವಿದ್ಯಾರ್ಥಿನಿಯರು ಅನೇಕರು ಶಿಕ್ಷಣ ವಂಚಿತರಾಗಬೇಕಾಯಿತು. ರಾಜ್ಯದಲ್ಲಿ ಶಿಕ್ಷಣ ಮುಖ್ಯವೋ ಧರ್ಮ ಮುಖ್ಯವೋ ಎಂಬ ಮಹತ್ವದ ಚರ್ಚೆ ಕೂಡ ನಡೆಯಿತು. ಇದೀಗ ಜೀವನದ ಸುಧಾರಣೆಗೆ ಬದಲಾವಣೆಗೆ ಶಿಕ್ಷಣವೇ ಮುಖ್ಯ ಅನ್ನುವುದನ್ನು ಅದೇ ಕಾಲೇಜು ಸಾಬೀತು ಮಾಡಿದೆ. ಹೆಣ್ಣುಮಕ್ಕಳ ಪದವಿಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿನಿಯೊಬ್ಬಳು, ಹಿಜಾಬ್ ವಿವಾದದ ಗದ್ದಲಗಳ ನಡುವೆ 625 ಅಂಕ ಪಡೆದು ಶಾಲೆಯ ಕೀರ್ತಿ ಪತಾಕೆ ಹಾರಿಸಿದ್ದಾಳೆ.
undefined
ಮೀನು ಹೆಕ್ಕುವ ಹುಡುಗನಿಗೆ DCಯಾಗೋ ಆಸೆ, ಗಾರೆ ಕೆಲಸದವನ ಮಗಳಿಗೆ ವೈದ್ಯೆಯಾಗೋ ಕನಸು
ಪ್ರೌಢಶಾಲಾ ವಿಭಾಗದ 10ನೇ ತರಗತಿ ವಿದ್ಯಾರ್ಥಿನಿ ಗಾಯತ್ರಿ ಈ ಸಾಧನೆ ಮಾಡಿದ ಹುಡುಗಿ. ನಿಜಕ್ಕೂ ಈ ಸಾಧನೆಗೊಂದು ಅರ್ಥ ಇದೆ. ಜೀವನದಲ್ಲಿ ಶಿಕ್ಷಣಕ್ಕೆ ಮಾತ್ರ ಕೊಟ್ಟರೆ ಯಾವುದೇ ಸಮಸ್ಯೆಗಳು ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಈ ಈಕೇನೇ ಸಾಕ್ಷಿ. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇದ್ದರೂ , ಪೋಷಕರು ಶೈಕ್ಷಣಿಕವಾಗಿ ಸದೃಢರಲ್ಲದೇ ಹೋದರೂ ಬಡವರ ಕಾಲೇಜಿನ ಬಡವರ ಹುಡುಗಿ ಈ ಹೊಸ ದಾಖಲೆ ಬರೆದಿದ್ದಾಳೆ. ತಂದೆ ಮೇಸ್ತ್ರಿ ಕೆಲಸ ಮಾಡುತ್ತಾರೆ ತಾಯಿ ಬೀಡಿ ಕಟ್ಟುತ್ತಾರೆ, ಮಗಳು 625 ಅಂಕ ಗಳಿಸುತ್ತಾಳೆ.... ಇದೆಲ್ಲಾ ಹೇಗಮ್ಮಾ ಸಾಧ್ಯವಾಯಿತು ಎಂದು ಕೇಳಿದರೆ... ಓದು, ಶಿಕ್ಷಕರ ಸಹಾಯ , ಮನೆಯವರ ಪ್ರೋತ್ಸಾಹ ಕಾರಣ ಎನ್ನುತ್ತಾಳೆ ಗಾಯತ್ರಿ...
ಬೂಸ್ಟರ್ ಡೋಸ್ ಡೋಸ್ ಕೊಟ್ಟ ಗಾಯತ್ರಿ
ತಮ್ಮ ಶಾಲೆಯ ಕೀರ್ತಿಪತಾಕೆ ಹಾರಿಸಿದ ಹುಡುಗಿಯ ಬಗ್ಗೆ ಆಡಳಿತ ಮಂಡಳಿಗೂ ಹೆಮ್ಮೆ. ಉಡುಪಿಯ ಈ ಕಾಲೇಜಿಗೆ ವಿಶೇಷ ಮಾನ್ಯತೆ ಇದೆ. ಬಡವರ ಮನೆ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುವುದರ ಜೊತೆಗೆ ಸರಕಾರೇತರ ಸಹಾಯಗಳನ್ನು ಕೂಡ ಇಲ್ಲಿ ನೀಡಲಾಗುತ್ತದೆ. ಆದರೆ ಎಲ್ಲಾ ಬಣ್ಣ ಮಸಿ ನುಂಗಿತು ಎಂಬ ಗಾದೆ ಮಾತಿನಂತೆ ಹಿಜಾಬ್ ವಿವಾದದ ನಂತರ ಆಡಳಿತ ಮಂಡಳಿ ಮತ್ತು ಶಿಕ್ಷಕರು ಕುಸಿದು ಹೋಗಿದ್ದರು. ಈಗ ಈ ಶಾಲೆಯ ಆಡಳಿತ ಮಂಡಳಿಗೆ ಗಾಯತ್ರಿ ಬೂಸ್ಟರ್ ಡೋಸ್ ಕೊಟ್ಟಿದ್ದಾಳೆ...
ಗಾಯತ್ರಿಯ ಸಂಪೂರ್ಣ ಶೈಕ್ಷಣಿಕ ವೆಚ್ಚ ನಾನೇ ಭರಿಸುವೆ
ಹೃದ್ರೋಗ ತಜ್ಞ ಯಾಗಬೇಕು ಅನ್ನೋದು ಗಾಯತ್ರಿಯ ಆಸೆ, ಈ ಹುಡುಗಿಯ ಆಸೆಗೆ ಆಡಳಿತ ಮಂಡಳಿ ಬೆಂಗಾವಲಾಗಿ ನಿಂತಿದೆ. ಮಂಡಳಿಯ ಉಪಾಧ್ಯಕ್ಷ ಯಶಪಾಲ ಸುವರ್ಣ , ಭವಿಷ್ಯದಲ್ಲಿ ಗಾಯತ್ರಿಯ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಭರಿಸುವ ಭರವಸೆ ಕೊಟ್ಟಿದ್ದಾರೆ. ವಿವಾದಗಳಿಗೆ ಸಿಲುಕದೆ ವಯೋಸಹಜವಾದ ಶಿಕ್ಷಣಕ್ಕೆ ಆದ್ಯತೆ ಕೊಟ್ಟರೆ ಯಾವುದೇ ಸಾಧನೆ ಮಾಡಬಹುದು ಅನ್ನೋದಕ್ಕೆ ಗಾಯತ್ರಿಯೆ ಸಾಕ್ಷಿ! ಹೃದಯದ ಡಾಕ್ಟರ್ ಕನಸು ಕಾಣುತ್ತಿರುವ ಗಾಯತ್ರಿ ಶೈಕ್ಷಣಿಕ ಜಿಲ್ಲೆ ಉಡುಪಿಯ ಹೃದಯ ಗೆದ್ದಿದ್ದಾಳೆ.