
ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಗುರ್ಜಾನಹಳ್ಳಿ ಗ್ರಾಮದ ರೈತ ಕುಟುಂಬದ ಯುವಕ ಜಿ.ಎಸ್. ಮನೋಜ್ ಅವರು ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 389ನೇ ರ್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಮನೋಜ್ ಅವರು ಗ್ರಾಮೀಣ ಹಿನ್ನೆಲೆಯಿಂದ ಬಂದಿದ್ದರೂ ದೃಢ ಸಂಕಲ್ಪ ಮತ್ತು ಪರಿಶ್ರಮದ ಮೂಲಕ ಈ ಸಾಧನೆ ಮಾಡಿದ್ದಾರೆ.
ರೈತ ಜಿ.ಕೆ.ಸೋಮಶೇಖರ್ ಹಾಗೂ ತಾಯಿ ತೀರ್ಥಾವತಿ ಪುತ್ರರಾದ ಮನೋಜ್ ಅವರು ಹಾಸನದ ಮಾವಿನಕೆರೆ ನವೋದಯ ಶಾಲೆಯಲ್ಲಿ ಆರನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ನಂತರ ಸೂರತ್ಕಲ್‌ನ ಎನ್‌ಐಟಿಕೆ ಕಾಲೇಜಿನಲ್ಲಿ ಬಿ.ಟೆಕ್. ಪದವಿ ಪಡೆದಿದ್ದಾರೆ. ಪದವಿ ನಂತರ ಕ್ಯಾಂಪಸ್ ಆಯ್ಕೆಯಾದರೂ ಯುಪಿಎಸ್‌ಸಿ ಪರೀಕ್ಷೆ ಬರೆಯುವ ಉದ್ದೇಶದಿಂದ ಉದ್ಯೋಗಕ್ಕೆ ಸೇರದೆ, ಪರೀಕ್ಷಾ ತಯಾರಿಯಲ್ಲಿ ತೊಡಗಿಸಿಕೊಂಡಿದ್ದರು.
ಯಾವುದೇ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆಯದೇ, ಬಾಡಿಗೆ ಕೊಠಡಿ ಮಾಡಿಕೊಂಡು ಗ್ರಂಥಾಲಯದ ಪುಸ್ತಕಗಳನ್ನು ಓದುತ್ತಲೇ ಸ್ವಯಂ ಅಧ್ಯಯನದ ಮೂಲಕ ಯುಪಿಎಸ್‌ಸಿ ಪರೀಕ್ಷೆಯಲ್ಲಿ 389 ನೇ ರ್ಯಾಂಕ್ ಗಳಿಸಿರುವುದು ವಿಶೇಷವಾಗಿದೆ.
ಇದನ್ನೂ ಓದಿ: ಯುಪಿಎಸ್‌ಸಿಯಲ್ಲಿ ರಾಜ್ಯ ಗೆದ್ದ PWD ಇಂಜಿನಿಯರ್ ಕಿರಣ್ ಕಮತೆ! ಫಸ್ಟ್ ರ‍್ಯಾಂಕ್ ಪಡೆದ ಉತ್ತರ ಕರ್ನಾಟಕದ ಹಮ್ಮೀರ
ಮನೋಜ್ ಅವರ ಈ ಸಾಧನೆಗೆ ಕುಟುಂಬದವರು, ಸ್ನೇಹಿತರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಪ್ರದೇಶದ ಯುವಕರಿಗೆ ಮನೋಜ್ ಸಾಧನೆ ಪ್ರೇರಣೆಯಾಗಿದೆ ಎಂದು ಮನೋಜ್ ಅವರ ತಂದೆ ಸೋಮಶೇಖರ್ ಹಮ್ಮೆಯಿಂದ ತಿಳಿಸಿದ್ದಾರೆ.
ಇದನ್ನೂ ಓದಿ: ಐಎಎಸ್, ಐಎಫ್ಎಸ್‌ಗಳಿಗೆ ಯುಪಿಎಸ್ಸಿ 2ನೇ ಚಾನ್ಸ್ ಇಲ್ಲ- ಯುಪಿಎಸ್ಸಿ ನಿಯಮ ಬದಲು