ಪ್ರತಿನಿತ್ಯ 4 ಕ್ಲಾಸ್, ಹಾಜರಿ ಕಡ್ಡಾಯವಲ್ಲ, ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ| ಪ್ರತಿ ತರಗತಿಯಲ್ಲಿ 15 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ| ಹಾಜರಾಗಲಿಚ್ಛಿಸದ ಮಕ್ಕಳಿಗೆ ಆನ್‌ಲೈನ್/ಆಫ್‌ಲೈನ್ ಶಿಕ್ಷಣ ಶಿಕ್ಷಣ| ಸರ್ಕಾರ ಸೂಚಿಸಿದರೆ ಜ.15ರಿಂದ ಪ್ರಥಮ ಪಿಯುಸಿಗೂ ತರಗತಿ|
ಬೆಂಗಳೂರು(ಡಿ.25): ಸರ್ಕಾರ ನಿಗದಿಪಡಿಸಿರುವಂತೆ ಜ.1ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಿತ್ಯ ನಾಲ್ಕು ತರಗತಿ ನಡೆಸಬೇಕು, ತರಗತಿ ಹಾಜರಾತಿ ಕಡ್ಡಾಯವಿಲ್ಲ, ವಿದ್ಯಾರ್ಥಿಗಳ ಹಾಜರಾತಿಗೆ ಪೋಷಕರಿಂದ ಲಿಖಿತ ಒಪ್ಪಿಗೆ ಕಡ್ಡಾಯ ಸೇರಿದಂತೆ ಹಲವು ಅಂಶಗಳಿರುವ ಮಾರ್ಗಸೂಚಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.
ಜ.1ರಿಂದ ಶಾಲೆ, ಪಿಯು ಕಾಲೇಜುಗಳನ್ನು ಆರಂಭಿಸುವ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬುಧವಾರ ಮುಖ್ಯಮಂತ್ರಿ ಸ್ಪಷ್ಟಪಡಿಸಿದ ಬಳಿಕ ಶಿಕ್ಷಣ ಇಲಾಖೆಯು 10 ನೇ ತರಗತಿ ವಿದ್ಯಾರ್ಥಿಗಳ ತರಗತಿ ಬೋಧನೆ ಮತ್ತು 6 ರಿಂದ 9ನೇ ತರಗತಿ ಮಕ್ಕಳಿಗೆ ವಿದ್ಯಾಗಮ ಆರಂಭಕ್ಕೆ ವೇಳಾಪಟ್ಟಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಪಿಯು ಇಲಾಖೆ ಕೂಡ ಮಾರ್ಗಸೂಚಿ ಹಾಗೂ ವೇಳಾಪಟ್ಟಿ ಪ್ರಕಟಿಸಿದೆ.
ಮಾರ್ಗಸೂಚಿಯಲ್ಲಿ ಕಾಲೇಜುಗಳ ಕಾರ್ಯಾವಧಿಯಲ್ಲಿ ದ್ವಿತೀಯ ಪಿಯು ತರಗತಿಗಳಿಗೆ ಪ್ರತಿದಿನ ತಲಾ 45 ನಿಮಿಷಗಳ ನಾಲ್ಕು ತರಗತಿಗಳನ್ನು ನಡೆಸಬೇಕು. ವಿದ್ಯಾರ್ಥಿಗಳಿಗೆ ತರಗತಿ ಹಾಜರಾತಿ ಕಡ್ಡಾಯಗೊಳಿಸಬಾರದು. ತರಗತಿಗೆ ಹಾಜರಾಗಲಿಚ್ಛಿಸದ ಮಕ್ಕಳಿಗೆ ಆನ್‌ಲೈನ್/ಆಫ್‌ಲೈನ್ ಶಿಕ್ಷಣ ಶಿಕ್ಷಣ ನೀಡಬೇಕು. ವಿದ್ಯಾರ್ಥಿಗಳ ಹಾಜರಾತಿಗೆ ಪೋಷಕರ ಪೋಷಕರಿಂದ ಲಿಖಿತ ಒಪ್ಪಿಗೆ ಕಡ್ಡಾಯ. ಪ್ರತಿ ತರಗತಿಯಲ್ಲಿ 15 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಬಹುದು. ಕೊಠಡಿ ವಿಸ್ತೀರ್ಣಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳ ಸಂಖ್ಯೆಯನ್ನು ನಿಗದಿಪಡಿಸಬೇಕು. ಪ್ರತಿ ವಿದ್ಯಾರ್ಥಿ, ಉಪನ್ಯಾಸಕರು ಹಾಗೂ ಇತರೆ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್ ನಿಯಂತ್ರಣ ಕ್ರಮಗಳನ್ನು ಅನುಸರಿಸಲು ಕ್ರಮಕೈಗೊಳ್ಳಬೇಕೆಂದು ಜಿಲ್ಲಾ ಉಪನಿರ್ದೇಶಕರು ಮತ್ತು ಕಾಲೇಜಿನ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ.
ಶಾಲೆ ಆರಂಭದ ಬಗ್ಗೆ ಸುರೇಶ್ ಕುಮಾರ್ ಸ್ಪಷ್ಟನೆ...!
ಸರ್ಕಾರ ಸೂಚನೆ ನೀಡಿದರೆ ಜ.15ರಿಂದ ಪ್ರಥಮ ಪಿಯುಸಿಗೂ ತರಗತಿಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪಿಯು ಇಲಾಖೆ ನಿರ್ದೇಶಕಿ ಸ್ನೇಹಲ್ ತಿಳಿಸಿದ್ದಾರೆ.
ಕಾಲೇಜು ಆರಂಭಕ್ಕೆ ಮುನ್ನ ಅನುಸರಿಸಬೇಕಾದ ಕ್ರಮಗಳೇನು?
* ಕಾಲೇಜುಗಳನ್ನು ಸ್ವಚ್ಛಗೊಳಿಸಿ ಸಂಪೂರ್ಣ ಸ್ಯಾನಿಟೈಸ್ ಮಾಡಬೇಕು
* ಸಿಬ್ಬಂದಿ ಹಾಜರಾತಿಗೆ ಬಯೋಮೆಟ್ರಿಕ್ ಬದಲು ಬೇರೆ ವ್ಯವಸ್ಥೆ ಮಾಡಬೇಕು
* ಶಾಲಾವರಣದಲ್ಲಿ ಮುಕ್ತ ಗಾಳಿ-ಬೆಳಕು ಬರುವಂತಿರಬೇಕು.
* ಸಾಮೂಹಿಕ ಪ್ರಾರ್ಥನೆ, ಕ್ರೀಡೆ ಮತ್ತಿತರ ಗುಂಪು ಚಟುವಟಿಕೆಗಳನ್ನು ನಿಷೇಧಿಸಬೇಕು
* ಕಾಲೇಜು ಆವರಣದಲ್ಲಿ ಆರೋಗ್ಯ ಕೇಂದ್ರಗಳ ಸಹಾಯವಾಣಿ ಸಂಖ್ಯೆ ಪ್ರಕಟಿಸಬೇಕು
* ಕಾಲೇಜು ಆವರಣದಲ್ಲಿ ಈಜುಕೊಳಗಳಿದ್ದರೆ ಮುಚ್ಚಬೇಕು
* ನೀರಿನ ಸಂಪು, ಓವರ್ ಹೆಡ್ ಟ್ಯಾಂಕ್‌ಗಳನ್ನು ಕ್ಲೋರಿನ್ ಆಧಾರಿತ ಪೌಡರ್‌ನಿಂದ ತೊಳೆಯಬೇಕು
* ಡಿಜಿಟಲ್ ಥರ್ಮೋಮೀಟರ್, ಕೈ ತೊಳೆಯಲು ಸೋಪು, ಸ್ಯಾನಿಸೈಸರ್ ವ್ಯವಸ್ಥೆ ಕಡ್ಡಾಯ
ಕಾಲೇಜು ಆರಂಭದ ಬಳಿಕ ಅನುಸರಿಸಬೇಕಾದ ಕ್ರಮಗಳೇನು?
* ಪ್ರತಿ ವಿದ್ಯಾರ್ಥಿ, ಶಿಕ್ಷಕರು, ಸಿಬ್ಬಂದಿಗಳು ದೈಹಿಕ ಅಂತರ ಕಾಯ್ದುಕೊಳ್ಳಬೇಕು
* ಹಾಜರಾಗುವ ಮಕ್ಕಳಿಂದ ಕಡ್ಡಾಯವಾಗಿ ಪೋಷಕರ ಲಿಖಿತ ಪತ್ರ ಪಡೆಯಬೇಕು
* ಕಾಲೇಜು ಬಸ್ಸುಗಳನ್ನೂ ನಿತ್ಯ ಸ್ಯಾನಿಟೈಸ್ ಮಾಡಬೇಕು
* ನಿತ್ಯ ಪ್ರತಿ ವಿದ್ಯಾರ್ಥಿಯ ಆರೋಗ್ಯ ಸ್ಥಿತಿ ಪರಿಶೀಲಿಸಬೇಕು
* ಕೋವಿಡ್ ಲಕ್ಷಣಗಳಿರುವ ಮಕ್ಕಳನ್ನು ಮನೆಗೆ ಕಳಿಸಿ ಚಿಕಿತ್ಸೆಗೆ ಕ್ರಮ ವಹಿಸಬೇಕು
* ಶಿಕ್ಷಕರು, ಸಿಬ್ಬಂದಿಗಳಲ್ಲಿ ಯಾರಿಗಾದರೂ ಕೋವಿಡ್ ಲಕ್ಷಣಗಳಿದ್ದರೆ ರಜೆ ನೀಡಬೇಕು
* ಅನಾರೋಗ್ಯ ಪೀಡಿತರಿಗಾಗಿ ಪ್ರತ್ಯೇಕ ಕೊಠಡಿ ಗುರುತಿಸಬೇಕು
* ಸಂದರ್ಶಕರ ಪ್ರವೇಶ ಸಂಪೂರ್ಣ ನಿಷೇಧಿಸಬೇಕು