ವಿದ್ಯಾರ್ಥಿಗಳಲ್ಲಿ ಶಿಸ್ತು, ಬದ್ಧತೆ, ನಾಯಕತ್ವ ಗುಣ ಬೆಳೆಸಲು ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ ನವೆಂಬರ್ ಮೊದಲ ವಾರದಿಂದ ಆರಂಭವಾಗಿರುವ ‘ವಿದ್ಯಾರ್ಥಿ ಪೊಲೀಸ್ ಕೆಡೆಟ್ ಯೋಜನೆ’ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಬಾಲಕೃಷ್ಣ ಜಾಡಬಂಡಿ
ಹುಬ್ಬಳ್ಳಿ (ಡಿ.10) : ವಿದ್ಯಾರ್ಥಿಗಳಲ್ಲಿ ಶಿಸ್ತು, ಬದ್ಧತೆ, ನಾಯಕತ್ವ ಗುಣ ಬೆಳೆಸಲು ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ ನವೆಂಬರ್ ಮೊದಲ ವಾರದಿಂದ ಆರಂಭವಾಗಿರುವ ‘ವಿದ್ಯಾರ್ಥಿ ಪೊಲೀಸ್ ಕೆಡೆಟ್ ಯೋಜನೆ’ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪ್ತಿಯ 522 ಹಾಗೂ ಕಮಿಷನರೇಟ್ ವ್ಯಾಪ್ತಿಯ 880 ವಿದ್ಯಾರ್ಥಿಗಳು ಈ ಯೋಜನೆಯಡಿ ತರಬೇತಿಗೆ ಆಯ್ಕೆಯಾಗಿದ್ದಾರೆ.
ಈ ಹಿಂದೆ ಕರ್ನಾಟಕ ರಾಜ್ಯ ಮೀಸಲು ಪಡೆಯಿಂದ ಮಾತ್ರ ಯೋಜನೆ ಜಾರಿಗೊಳಿಸಲಾಗುತ್ತಿತ್ತು. ಈಗ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಎಸ್‌ಪಿಸಿ ಯೋಜನೆಯನ್ನು ರಾಜ್ಯ ಸರ್ಕಾರ, ಪೊಲೀಸ್ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಅನುಷ್ಠಾನ ಮಾಡಲಾಗಿದೆ.
ಪದವಿ ಓದುತ್ತಿರುವ ಎನ್‌ಸಿಸಿ ಕೆಡೆಟ್ಸ್‌ಗೆ ಸೇನೆಯಲ್ಲಿ ಭರ್ಜರಿ ಉದ್ಯೋಗಾವಕಾಶ
ಸರ್ಕಾರಿ ಪ್ರೌಢಶಾಲೆಯ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಯೋಜನೆಯಡಿ ವರ್ಷಪೂರ್ತಿ ತರಬೇತಿ ನೀಡಲಾಗುತ್ತಿದೆ. ಮಾನಸಿಕ, ದೈಹಿಕ ಸದೃಢವಾಗಿರುವ ವಿದ್ಯಾರ್ಥಿಗಳನ್ನು ಪೊಲೀಸ್ ಸಿಬ್ಬಂದಿ, ಶಿಕ್ಷಕರು ತರಬೇತಿಗೆ ಆಯ್ಕೆ ಮಾಡುತ್ತಾರೆ. ಪ್ರತಿ ಶಾಲೆಯಿಂದ 20ರಿಂದ 22 ಬಾಲಕರು-ಬಾಲಕಿಯರನ್ನು (ತಲಾ) ಆಯ್ಕೆ ಮಾಡಲಾಗಿದೆ.
ಶಿಸ್ತು, ಬದ್ಧತೆ, ಸಂಯಮ, ನೈತಿಕ ಮೌಲ್ಯ, ಸಮುದಾಯ ಸಹಭಾಗಿತ್ವ, ಸಾಮಾಜಿಕ ಪಿಡುಗು, ಪರಿಸರ ಜಾಗೃತಿ, ಸಾಮಾಜಿಕ ಕಳಕಳಿ, ಕಾನೂನು ಅರಿವು ಮೂಡಿಸಲಾಗುತ್ತಿದೆ. ಕವಾಯತು, ಯೋಗ, ಆತ್ಮರಕ್ಷಣೆಗಾಗಿ ಕರಾಟೆ ಹೇಳಿಕೊಡಲಾಗುತ್ತಿದೆ. ವಾರದ ಪ್ರತಿ ಶನಿವಾರ ತಜ್ಞ ಪೊಲೀಸರು ಶಾಲೆಗೆ ತೆರಳಿ 2ರಿಂದ 3 ಗಂಟೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ.
ಒಳಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಕಾನೂನು ಅರಿವು, ಸಾಮಾಜಿಕ ಜಾಲತಾಣ, ಸೈಬರ್ ಕ್ರೈಂ, ನಾರ್ಕೋಟಿಕ್ ಡ್ರಗ್‌್ಸ, ಫೋಕ್ಸೋ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಹೊರಾಂಗಣದಲ್ಲಿ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಪೊಲೀಸ್ ಕಚೇರಿ, ನ್ಯಾಯಾಲಯ, ತಹಸೀಲ್ದಾರ್ ಕಚೇರಿ, ವೃದ್ಧಾಶ್ರಮ, ಅನಾಥಾಶ್ರಮ ಹಾಗೂ ಕಾರಾಗೃಹಕ್ಕೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಅಲ್ಲಿನ ಕಾರ್ಯ ಪರಿಚಯಿಸಲಾಗುತ್ತಿದೆ.
ಧಾರವಾಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಕುಸುಗಲ್, ಕರಡಿಗುಡ್ಡ, ಅದರಗುಂಚಿ, ಮುಮ್ಮಿಗಟ್ಟಿ, ಧಾರವಾಡ, ಅಂಚಟಗೇರಿ, ಕುರುವಿನಕೊಪ್ಪ, ಅಳ್ನಾವರ, ಗುಡಿಸಾಗರ, ಅಣ್ಣಿಗೇರಿ, ಸಂಶಿ, ಗುಡಗೇರಿಯ ಸರ್ಕಾರಿ ಪ್ರೌಢಶಾಲೆ, ಕ್ಯಾರಕೊಪ್ಪದ ನವೋದಯ ಪ್ರೌಢಶಾಲೆ, ಧಾರವಾಡದ ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆ ಸೇರಿ ಒಟ್ಟು 522 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ.
ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹುಬ್ಬಳ್ಳಿಯ ಆನಂದ ನಗರದ ಸರ್ಕಾರಿ ಪ್ರೌಢಶಾಲೆ ಮತ್ತು ಉರ್ದು ಮಾಧ್ಯಮ ಪ್ರೌಢಶಾಲೆ, ಬಿಡ್ನಾಳ, ವಿಶ್ವೇಶ್ವರ ನಗರ, ಹೊಸೂರ, ನೇಕಾರ ನಗರ, ನಾಗಶೆಟ್ಟಿಕೊಪ್ಪ, ಪೆಂಡಾರ ಗಲ್ಲಿ, ಸದಾಶಿವ ನಗರ, ಕೇಂದ್ರಿಯ ವಿದ್ಯಾಲಯದ ನಂ. 1 ಮತ್ತು 2 ಹಾಗೂ ಧಾರವಾಡದ ಆರ್.ಎನ್. ಶೆಟ್ಟಿ, ಕಮಲಾಪುರ, ನವಲೂರು, ನವಲೂರು (ಉರ್ದು ಮಾಧ್ಯಮ) ಮದಾರಮಡ್ಡಿ, ಗುಲಗಂಜಿಕೊಪ್ಪ, ಗಾಂಧಿ ನಗರ, ಆದರ್ಶ ವಿದ್ಯಾಲಯ, ಕೇಂದ್ರಿಯ ವಿದ್ಯಾಲಯದ ಒಟ್ಟು 880 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ.
ಒಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಪ್ರಜ್ಞಾವಂತ ನಾಗರಿಕರನ್ನಾಗಿ ರೂಪಿಸುವ ಯೋಜನೆ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನವಾಗುವ ಜತೆಗೆ ಅಪರಾಧ ಮುಕ್ತ ಸಮಾಜ ಹಾಗೂ ಸದೃಢ ರಾಷ್ಟ್ರ ನಿರ್ಮಾಣವಾಗಲಿ ಎನ್ನುವುದು ಸಾರ್ವಜನಿಕರ ಆಶಯವಾಗಿದೆ.
ಸ್ಕೌಟ್ಸ್-ಗೈಡ್ಸ್ ರಾಷ್ಟ್ರಪತಿ ಪುರಸ್ಕಾರ: ಪರೀಕ್ಷೆ ನಡೆಸಿ 5 ವರ್ಷವಾದರೂ ರಿಸಲ್ಟ್ ಇಲ್ಲ!
ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವ ನಿಟ್ಟಿನಲ್ಲಿ ಹಾಗೂ ಸಮಾಜ ಸುಧಾರಣೆಗೆ ವಿದ್ಯಾರ್ಥಿಗಳ ಸಹಭಾಗಿತ್ವಕ್ಕೆ ವಿದ್ಯಾರ್ಥಿ ಪೊಲೀಸ್ ಕೆಡೆಟ್ ಯೋಜನೆ ಸಹಕಾರಿಯಾಗಿದೆ.
ಲೋಕೇಶ್ ಜಗಲಾಸರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಆಯ್ಕೆಯಾದ ಪ್ರತಿ ಶಾಲೆಗೆ ಪೊಲೀಸ್ ಇಲಾಖೆಯಿಂದ . 50 ಸಾವಿರ ನೀಡಲಾಗುತ್ತದೆ. ಹೊರಾಂಗಣದ ತರಬೇತಿ ನೀಡುವಾಗ ತಗಲುವ ಪ್ರಯಾಣ, ಉಪಾಹಾರದ ಖರ್ಚನ್ನು ನಿಭಾಯಿಸಬಹುದು. ಪಿಎಸ್‌ಐ, ಸಿಪಿಐಗಳು, ತಜ್ಞ ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ವಿವಿಧ ವಿಷಯಗಳ ಕುರಿತು ಪಾಠ ಮಾಡುತ್ತಾರೆ.
ಮಲ್ಲಿಕಾರ್ಜುನ ಮರೋಳಿ, ಸಶಸ್ತ್ರ ಮೀಸಲು ನಿರೀಕ್ಷಕ, ಯೋಜನೆಯ ಹು-ಧಾ ನೋಡಲ್ ಅಧಿಕಾರಿ
ಶಾಲಾ ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ ಗುಣ ಬೆಳೆಸಲು ಎಸ್‌ಪಿಸಿ ತರಬೇತಿ ಸಹಕಾರಿಯಾಗಿದೆ. ಪೊಲೀಸ್ ಆಗುವ ಕನಸು ಹೊತ್ತವರಿಗೆ ಹೆಚ್ಚಿನ ಅನುಕೂಲವಾಗಿದೆ.
ರವೀಂದ್ರ ಕುಂದಣಗಾರ, ಮುಖ್ಯೋಪಾಧ್ಯಾಯರು.