ಪುತ್ತೂರು ವಿದ್ಯಾರ್ಥಿಯ ಬಿಇ ಕಾಲೇಜು ಶುಲ್ಕ ಕಟ್ಟಿದ ಪರಮೇಶ್ವರ್‌

By Kannadaprabha News  |  First Published Oct 4, 2021, 7:53 AM IST

*   ಶಿಕ್ಷಕರ ಅವೈಜ್ಞಾನಿಕ ವರ್ಗಾವಣೆ ತಡೆದಿದ್ದ ದಿವಿತ್‌ ರೈ
*   ಈತ ಓದಿದ್ದ ಶಾಲೆಗೆ 10 ಲಕ್ಷ ರು. ಕೊಟ್ಟಿದ್ದ ಪರಂ
*   ದಿವಿತ್‌ ರೈಯನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸುವುದಾಗಿಯೂ ತಿಳಿಸಿದ ಪರಂ 
 


ಪುತ್ತೂರು(ಅ.04):  ಸರ್ಕಾರಿ ಶಾಲೆಗಳ ಶಿಕ್ಷಕರ ಅವೈಜ್ಞಾನಿಕ ವರ್ಗಾವಣೆ ತಡೆಯುವಂತೆ ಗಮನ ಸೆಳೆದು ಸುದ್ದಿಯಾಗಿದ್ದ ಪುತ್ತೂರಿನ ಬನ್ನೂರು ನಿವಾಸಿ, ವಿದ್ಯಾರ್ಥಿ ದಿವಿತ್‌ ರೈ ಎಂಜಿನಿಯರಿಂಗ್‌ ಕಲಿಕೆಗೆ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌(G Parameshwara) ಪ್ರೋತ್ಸಾಹ ನೀಡಿದ್ದು, ಕಾಲೇಜ್‌ನ ಶುಲ್ಕವನ್ನು ಭರಿಸಿ ಆದರ್ಶ ಮೆರೆದಿದ್ದಾರೆ.

ದಿವಿತ್‌ ರೈ ಪುತ್ತೂರಿನ(Putturu) ಸರ್ಕಾರಿ ಹಾರಾಡಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಸರ್ಕಾರವು ಸರ್ಕಾರಿ ಶಾಲೆಗಳ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ನಡೆಸಲು ಸುತ್ತೋಲೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಆ ಸಂದರ್ಭದಲ್ಲಿ ಶಾಲಾ ಮಂತ್ರಿ ಮಂಡಲದಲ್ಲಿದ್ದ ದಿವಿತ್‌ ರೈ ಅವರು ಆಗ ಗೃಹ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ್‌ಗೆ ದೂರು ನೀಡಿ ತನ್ನ ಶಾಲೆಯ ಶಿಕ್ಷಕರ ವರ್ಗಾವಣೆ ತಡೆದಿದ್ದ. ಈತನ ದೂರಿನಿಂದಾಗಿ ಜಿಲ್ಲೆಯ ಬಹುತೇಕ ಶಿಕ್ಷಕರ ಅವೈಜ್ಞಾನಿಕ ವರ್ಗಾವಣೆ ರದ್ದಾಗಿತ್ತು.

Tap to resize

Latest Videos

ದಸರಾ ರಜೆ ಬಳಿಕ ಶಾಲೆಗಳಲ್ಲಿ ಬಿಸಿಯೂಟ

ಬಾಲಕ ದಿವಿತ್‌ನ ಕಾರ್ಯವನ್ನು ಮೆಚ್ಚಿದ ಗೃಹ ಸಚಿವರು ಆತ ಹಾಗೂ ಆತನ ಕುಟುಂಬವನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು. ದಿವಿತ್‌ ವಿನಂತಿ ಮೇರೆಗೆ ಆತನ ಹಾರಾಡಿ ಶಾಲೆಗೆ 10 ಲಕ್ಷ ಅನುದಾನವನ್ನೂ ನೀಡಿದ್ದರು. ಈ ವೇಳೆ ದಿವಿತ್‌ ರೈಯನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸುವುದಾಗಿಯೂ ಪರಮೇಶ್ವರ್‌ ತಿಳಿಸಿದ್ದರು.

ಬಳಿಕ ದಿವಿತ್‌ ರೈ ಕಲಿಕಾ ಹಂತದಲ್ಲಿ ಡಾ.ಪರಮೇಶ್ವರ್‌ ಅವರು ಸಲಹೆ, ಸಹಕಾರ ನೀಡುತ್ತಾ ಬಂದಿದ್ದು, ಸ್ಕೌಟ್‌ ಗೈಡ್ಸ್‌ನಲ್ಲಿ ಪಂಜಾಬ್‌ಗೆ ಹೋಗುವ ಸಂದರ್ಭದಲ್ಲೂ ಪ್ರಾಯೋಜಕತ್ವ ನೀಡಿದ್ದರು. ಇದೀಗ ದಿವಿತ್‌ ರೈ ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್‌ ಕಾಲೇಜ್‌ನಲ್ಲಿ ದಾಖಲಾಗಿದ್ದು, ಆತನ ಶುಲ್ಕವನ್ನು ಸಂಪೂರ್ಣವಾಗಿ ಡಾ. ಜಿ. ಪರಮೇಶ್ವರ್‌ ಭರಿಸಿದ್ದಾರೆ.
 

click me!