* 1ರಿಂದ 5ನೇ ತರಗತಿ ಬೋಧನೆ, ಬಿಸಿಯೂಟ ಒಟ್ಟಿಗೇ ಪುನಾರಂಭಿಸಲು ಶಿಕ್ಷಣ ಇಲಾಖೆ ಚಿಂತನೆ
* ಬಿಸಿಯೂಟ ಆರಂಭಿಸಲು ಸಿಎಂ ಭರವಸೆ
* 60 ಲಕ್ಷ ಮಕ್ಕಳಿಗೆ ಬಿಸಿಯೂಟ
ಲಿಂಗರಾಜು ಕೋರಾ
ಬೆಂಗಳೂರು(ಅ.04): ದಸರಾ(Dasara) ರಜೆ ಮುಗಿದ ಬಳಿಕ 1ರಿಂದ 5ನೇ ತರಗತಿ ಮಕ್ಕಳಿಗೂ ಭೌತಿಕ ತರಗತಿ ಆರಂಭಿಸಲು ಆಲೋಚಿಸಿರುವ ರಾಜ್ಯ ಸರ್ಕಾರ ಇದೇ ವೇಳೆಗೆ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ(Midday Meal) ಯೋಜನೆಯನ್ನೂ ಪುನಾರಂಭಿಸಲು ಗಂಭೀರ ಚಿಂತನೆ ನಡೆಸಿದೆ.
undefined
ಅಂದುಕೊಂಡಂತೆ ಎಲ್ಲ ನಡೆದರೆ ಒಂದೂವರೆ ವರ್ಷದ ಬಳಿಕ ಶಾಲಾ ಮಕ್ಕಳ ಅಪೌಷ್ಟಿಕತೆ ನೀಗಿಸುವ ಬಿಸಿಯೂಟ ಯೋಜನೆ ಮತ್ತೆ ಆರಂಭವಾಗಲಿದೆ. ಅ.10ರಿಂದ 20ರವರೆಗೆ ಇರುವ ದಸರಾ ರಜೆ ಮುಗಿದ ಬೆನ್ನಲ್ಲೇ ಅ.21ರಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ(Schools) 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೂ ಬಿಸಿಯೂಟ ಪುನಾರಂಭಿಸುವ ಚಿಂತನೆಯಲ್ಲಿರುವ ಸರ್ಕಾರ ಒಂದು ವೇಳೆ ಕಾರಣಾಂತರಗಳಿಂದ ಸಾಧ್ಯವಾಗದಿದ್ದರೆ ನವೆಂಬರ್ ತಿಂಗಳಿಂದ ಶುರುಮಾಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಅಕ್ಟೋಬರ್ ಮಾಸಾಂತ್ಯ ಇಲ್ಲವೇ ನವೆಂಬರ್‌ನಲ್ಲಿ ಬಿಸಿಯೂಟ ಯೋಜನೆ ಪುನಾರಂಭವಾಗುವುದು ಖಚಿತ ಎನ್ನುತ್ತವೆ ಶಿಕ್ಷಣ ಇಲಾಖೆ ಮೂಲಗಳು.
ರಾಜ್ಯದಲ್ಲಿ 2020ರ ಮಾಚ್‌ರ್‍ನಲ್ಲಿ ಕೋವಿಡ್(Covid19) ಸೋಂಕಿನ ಹಾವಳಿ ಆರಂಭವಾಗುತ್ತಿದ್ದಂತೆ ಸರ್ಕಾರ ಶಾಲೆ, ಕಾಲೇಜುಗಳನ್ನು ಬಂದ್ ಮಾಡಿದ್ದರಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಯೂ ಸ್ಥಗಿತಗೊಂಡಿತ್ತು. ಆದರೆ, ಬಿಸಿಯೂಟ ಸ್ಥಗತದಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಲಿದೆ ಎಂಬ ಕಾರಣಕ್ಕೆ ಸರ್ಕಾರ ಬಿಸಿಯೂಟದಲ್ಲಿ ಪ್ರತಿ ಮಗುವಿಗೆ ನೀಡುವ ಆಹಾರದ ಪ್ರಮಾಣಕ್ಕೆ ಸಮನಾಗಿ ದಿನಸಿ ಪದಾರ್ಥಗಳನ್ನು ಶಾಲೆಗಳ ಮೂಲಕ ಮಕ್ಕಳ ಮನೆಗಳಿಗೆ ತಲುಪಿಸುವ ಕೆಲಸ ಮಾಡುತ್ತಾ ಬರುತ್ತಿದೆ.
ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಶೀಘ್ರದಲ್ಲೇ ಶುರು.?
ಸಿದ್ಧತೆಗೆ ಮೌಖಿಕ ಆದೇಶ:
ಬಿಸಿಯೂಟ ಪುನಾರಂಭಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್(BC Nagesh) ಅವರು ಆಸಕ್ತಿ ತೋರಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಇದರ ಬೆನ್ನಲ್ಲೇ ಇಲಾಖೆಯಿಂದ ಶಾಲೆಗಳಲ್ಲಿ ಅಡುಗೆ ಕೋಣೆ, ಪಾತ್ರೆಗಳನ್ನು ಸ್ವಚ್ಛಪಡಿಸಿಕೊಳ್ಳಲು, ಅಡುಗೆ ಅನಿಲ ಸಿದ್ಧತೆ, ಬಿಸಿಯೂಟಕ್ಕೆ ಅಗತ್ಯ ಆಹಾರ ಧಾನ್ಯ ದಾಸ್ತಾನು ಹಾಗೂ ಅಡುಗೆ ತಯಾರಕರು ಮತ್ತು ಸಹಾಯಕರಿಗೆ ಮಾಹಿತಿ ನೀಡಿ ಆದೇಶ ಮಾಡಿದ ದಿನದಿಂದಲೇ ಶಾಲೆಗೆ ಹಾಜರಾಗಲು ಸಿದ್ಧರಿರುವಂತೆ ಸೂಚಿಸಲು ಈಗಾಗಲೇ ಶಾಲೆಗಳಿಗೆ ಶಿಕ್ಷಣ ಇಲಾಖೆಯು ಜಿಲ್ಲಾ ಉಪನಿರ್ದೇಶಕರು ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳ ಮೂಲಕ ಮೌಖಿಕ ಸೂಚನೆ ರವಾನೆಯಾಗಿದೆ.
60 ಲಕ್ಷ ಮಕ್ಕಳಿಗೆ ಬಿಸಿಯೂಟ
ರಾಜ್ಯದಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿನ ಸುಮಾರು 60 ಲಕ್ಷ ಮಕ್ಕಳು ಬಿಸಿಯೂಟ ಫಲಾನುಭವಿಗಳಾಗಿದ್ದಾರೆ. ಪ್ರಸ್ತುತ ಆರಂಭವಾಗಿರುವ 6ರಿಂದ 10ನೇ ತರಗತಿಗಳಿಗೆ ಶೇ.55ರಿಂದ 65ರಷ್ಟುಮಕ್ಕಳು ಹಾಜರಾತಿಯೊಂದಿಗೆ 25ರಿಂದ 30 ಲಕ್ಷ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಮುಂದೆ 1ರಿಂದ 5ನೇ ತರಗತಿಯನ್ನೂ ಆರಂಭಿಸಿ ಎಲ್ಲರಿಗೂ ಬಿಸಿಯೂಟ ಪುನಾರಂಭಿಸಿದರೆ ಹಾಜರಾತಿ ಇನ್ನಷ್ಟುಹೆಚ್ಚುವ ಸಾಧ್ಯತೆ ಇದೆ.
ಬಿಸಿಯೂಟ ಆರಂಭಿಸಲು ಸಿಎಂ ಭರವಸೆ
ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಇತ್ತೀಚಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಧ್ಯಾಹ್ನ ಬಿಸಿಯೂಟ ಆರಂಭಿಸುವ ಅವಶ್ಯಕತೆಯನ್ನು ವಿವರಿಸಿದ್ದರು. ಇದಕ್ಕೆ ಸ್ಪಂದಿಸಿದ್ದ ಮುಖ್ಯಮಂತ್ರಿ ಅವರು ಶೀಘ್ರದಲ್ಲೇ ಈ ಸಂಬಂಧ ಆದೇಶ ಮಾಡುವ ಭರವಸೆಯನ್ನೂ ನೀಡಿದ್ದರು.