ಕಲಬುರಗಿ: ಸರ್ಕಾರಿ ಶಾಲೆಯಲ್ಲಿ ಮಕ್ಕಳ ಬಿಸಿಯೂಟಕ್ಕೆ ಕಂಟಕ..!

By Kannadaprabha NewsFirst Published Dec 2, 2023, 11:30 PM IST
Highlights

ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವುದನ್ನು ಬಿಟ್ಟು ನೆರೆಯ ಶಾಲೆಗಳ ಬಳಿ ಅಕ್ಕಿ, ಬೇಳೆ, ಎಣ್ಣೆ, ಗೋಧಿ ಮತ್ತು ಸಿಲಿಂಡರ್ ಸಾಲ ಪಡೆಯಲು ನಿತ್ಯ ಸಾಲುಗಟ್ಟಿ ಕಾಯುವ ದುಸ್ಥಿತಿ ಒದಗಿದೆ.

ಯಡ್ರಾಮಿ(ಡಿ.03): ಸರ್ಕಾರಿ ಶಾಲೆಗಳಲ್ಲಿ ಕಳೆದ ಎರಡು ತಿಂಗಳಿನಿಂದ ಆಹಾರ ಧಾನ್ಯ ಪೂರೈಕೆಯಾಗದ ಕಾರಣ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವುದನ್ನು ಬಿಟ್ಟು ನೆರೆಯ ಶಾಲೆಗಳ ಬಳಿ ಅಕ್ಕಿ, ಬೇಳೆ, ಎಣ್ಣೆ, ಗೋಧಿ ಮತ್ತು ಸಿಲಿಂಡರ್ ಸಾಲ ಪಡೆಯಲು ನಿತ್ಯ ಸಾಲುಗಟ್ಟಿ ಕಾಯುವ ದುಸ್ಥಿತಿ ಒದಗಿದೆ.

ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳಲ್ಲಿನ ಎಲ್ಲ ವಿದ್ಯಾರ್ಥಿಗಳಿಗೆ ಸರ್ಕಾರವು ನಿತ್ಯ ಬೆಳಗ್ಗೆ ಹಾಲು, ಮಧ್ಯಾಹ್ನ ಬಿಸಿಯೂಟ ಮತ್ತು ಕೋಳಿ ಮೊಟ್ಟೆ ವ್ಯವಸ್ಥೆ ಮಾಡಿದೆ. ಆದರೆ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಡಿಸೆಂಬರ್ ತಿಂಗಳ ಪ್ರಾರಂಭ ಆದರು ಇನ್ನೂ ಆಹಾರ ಧಾನ್ಯ ಮತ್ತು ಹಾಲಿನ ಪೌಡರ್‌ ಪೂರೈಕೆ ಮಾಡದ ಕಾರಣ ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದ ವ್ಯವಸ್ಥೆ ಮಾಡುವುದೆ ಶಿಕ್ಷಕರಿಗೆ ದೊಡ್ಡ ಸವಾಲಾಗಿದೆ.

 ಸಚಿವ ಪ್ರಿಯಾಂಕ್ ಖರ್ಗೆ ತವರಲ್ಲೇ ಬಿಸಿಯೂಟಕ್ಕೆ ಪುಟ್ಟ ಮಕ್ಕಳು 2 ಕಿಮೀ ಬಿಸಿಲಲ್ಲಿ ಅಲೆದಾಟ!

ಸರ್ಕಾರದಿಂದ ತಾಲೂಕು ಅಕ್ಷರ ದಾಸೋಹ ಇಲಾಖೆಗೆ ಸಮರ್ಪಕವಾದ ಆಹಾರ ಧಾನ್ಯಗಳು ನಿಯಮಿತ ಅವಧಿಯಲ್ಲಿ ಪೂರೈಕೆಯಾಗುತ್ತಿದ್ದರೂ ಅವುಗಳನ್ನು ಸಂಬಂಧಪಟ್ಟ ಶಾಲೆಗಳಿಗೆ ನಿಗದಿತ ವೇಳೆಯಲ್ಲಿ ಪೂರೈಕೆ ‌ಮಾಡಲು ಸಹಾಯಕ ‌ನಿರ್ದೇಶಕರ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಇದರಿಂದಾಗಿ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲು ಶಿಕ್ಷಕರು ಹರಸಾಹಸ ಪಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ನೆರೆಯ ಶಾಲೆಗಳಿಂದ ಸಾಲ ಪಡೆಯಿರಿ, ನಾವು ಪೂರೈಕೆ ಮಾಡಿದ ಬಳಿಕ ಪುನಃ ಅವರಿಗೆ ನೀಡಿ ಎಂಬ ಹಾರಿಕೆ ಉತ್ತರಗಳನ್ನು ಹೇಳುತ್ತಿದ್ದಾರೆ ಎಂಬ ಆರೋಪಗಳು ಶಿಕ್ಷಕರಿಂದ ಕೇಳಿ ಬರುತ್ತಿವೆ.

ನಿತ್ಯ ಅಕ್ಷರ ದಾಸೋಹ ನಿರ್ವಹಣೆಯ ಅಧಿಕಾರಿಗಳಿಗೆ ದುಂಬಾಲು‌ ಬಿದ್ದರೂ ಕೂಡ ನಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಕಿರಾಣಿ ಅಂಗಡಿಗಳಿಂದ ಅಕ್ಕಿ ಖರೀದಿ ಮಾಡಿ, ಆಹಾರ ನೀಡುವ ಮೂಲಕ ಮಕ್ಕಳ ಮಧ್ಯಾಹ್ನದ ಹಸಿವನ್ನು ನೀಗಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಸರ್ಕಾರಿ ಶಾಲೆಯ ಶಿಕ್ಷಕರು ಹೇಳುತ್ತಿದ್ದಾರೆ.

click me!