ರಾಜ್ಯ ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ ನಡೆಸಲಾಗಿದ್ದ ಪದವೀಧರ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಉನ್ನತಯ ಅಂಕಗಳಿಸಿದ ಅಭ್ಯರ್ಥಿಗಳ 1:1 ಪಟ್ಟಿಯನ್ನು ನ.18ರಂದು ಬಿಡುಗಡೆ ಮಾಡಿದೆ. ಈ ಪಟ್ಟಿಯ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಲು ನ.23ರವರೆಗೆ ಅವಕಾಶ ನೀಡಲಾಗಿದ್ದ ಅವಧಿಯನ್ನು ನ.30ರವರೆಗೆ ವಿಸ್ತರಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಬೆಂಗಳೂರು (ನ.22) : ರಾಜ್ಯ ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ ನಡೆಸಲಾಗಿದ್ದ ಪದವೀಧರ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಉನ್ನತಯ ಅಂಕಗಳಿಸಿದ ಅಭ್ಯರ್ಥಿಗಳ 1:1 ಪಟ್ಟಿಯನ್ನು ನ.18ರಂದು ಬಿಡುಗಡೆ ಮಾಡಿ, ಇದರ ಬಗ್ಗೆ ಆಕ್ಷೇಪಣೆಗಳೇನಾದರೂ ಇದ್ದರೆ ಸಲ್ಲಿಸುವಂತೆ ನ.23ರವರೆಗೆ ಅವಕಾಶ ನೀಡಲಾಗಿತ್ತು. ಆದರೆ, ಇದ್ದಕ್ಕಿದ್ದಂತೆ ಈ ಆಕ್ಷೇಪಣಾ ಅವಧಿಯನ್ನು ಏಕಾಏಕಿ ನ.30ರವರೆಗೆ ವಿಸ್ತರಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ 15 ಸಾವಿರ ಪದವೀಧರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಹಿನ್ನೆಲೆಯಲ್ಲಿ ಮೇ ತಿಂಗಳು ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ 1.05 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳ 1:2 ಪಟ್ಟಿಯನ್ನು ಅ.೩ರಂದು ಪ್ರಕಟಿಸಿ ಅ.6ರಿಂದ ದಾಖಲೆ ಪರಿಶೀಲನೆಯನ್ನೂ ಮಾಡಲಾಗಿತ್ತು. ಈಗ ನೇಮಕಾತಿ ಪ್ರಕ್ರಿಯೆ ಸಂಬಂಧಿಸಿದ ಬಹುತೇಕ ಕಾರ್ಯಗಳು ಪೂರ್ಣಗೊಂಡಿದ್ದು, ನ.18ರಂದು 1:1 ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿತ್ತು. ಈ ತಾತ್ಕಾಲಿಕ ಆಯ್ಕೆ ಪಟ್ಟಿಗೆ ನ.19 ರಿಂದ ನ.23ರವರೆಗೆ (5 ದಿನ) ಮಾತ್ರ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿತ್ತು. ಈಗ ದಿಢೀರನೆ ಆಕ್ಷೇಪಣೆ ಸಲ್ಲಿಕೆ ಅವಧಿಯನ್ನು ನ.30ರವರೆಗೆ ವಿಸ್ತರಣೆ ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
Karnataka Teacher Recruitment: 13363 ಶಿಕ್ಷಕರ ನೇಮಕ: ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
ಸರ್ಕಾರದ ಯಾವುದೇ ಒಂದು ಆದೇಶ, ಆಯ್ಕೆ ಪಟ್ಟಿ, ತಿದ್ದುಪಡಿ ಆದೇಶಗಳಿಗೆ ಸಾಮಾನ್ಯವಾಗಿ ಕನಿಷ್ಠ 7 ದಿನದಿಂದ 15 ದಿನಗಳವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ. ಆದರೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಪದವೀಧರ ಶಿಕ್ಷಕರ ನೇಮಕಾತಿ ವಿಚಾರದಲ್ಲಿ ಈ ನಿಯಮ ಉಲ್ಲಂಘಿಸಿ ಕೇವಲ 5 ದಿನ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಸರ್ಕಾರದ ನಿಯಮದಂತೆ ಒಂದು ವಾರಕ್ಕಿಂತ ಹೆಚ್ಚಿನ ಅವಧಿಯ ಗಡುವು ನೀಡಲು ನಿರ್ಧರಿಸಿ, ಆಕ್ಷೇಪಣೆ ಸಲ್ಲಿಕೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಒಟ್ಟಾರೆ, ಅಭ್ಯರ್ಥಿಗಳಿಗೆ ಅಥವಾ ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು 12 ದಿನ ಸಮಯ ಸಿಕ್ಕಂತಾಗಿದೆ.
13,363 ಅಭ್ಯರ್ಥಿಗಳು ಮಾತ್ರ ಆಯ್ಕೆ: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇದ್ದ 15 ಸಾವಿರ ಹುದ್ದೆಗಳಿಗೆ ನಡೆದ ನೇಮಕಾತಿ ನಡೆದಿದ್ದರೂ, ಈ ಪೈಕಿ 13,363 ಹುದ್ದೆಗಳಿಗೆ ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿದ್ದಾರೆ. ಉಳಿದ 1,624 ಹುದ್ದೆಗಳಿಗೆ ಯಾವುದೇ ಅರ್ಹ ಅಭ್ಯರ್ಥಿಗಳು ಆಯ್ಕೆಯಾಗದ ಕಾರಣ ಆ ಹುದ್ದೆಗಳು ಖಾಲಿ ಉಳಿದಂತಾಗಿದೆ. ಇಂಗ್ಲೀಷ್ ಭಾಷೆಯಲ್ಲಿ ಖಾಲಿ ಇದ್ದ 1807 ಹುದ್ದೆಗಳಿಗೆ 1768 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಖಾಲಿ ಇದ್ದ 6,500 ಹುದ್ದೆಗಳಿಗೆ 5,550, ಸಮಾಜ ಪಾಠಗಳ 4,693 ಹುದ್ದೆಗಳಿಗೆ 4,521 ಜನ, ಜೀವ ವಿಜ್ಞಾನದ 2,000 ಹುದ್ದೆಗಳಿಗೆ 1,624 ಮಂದಿ ಆಯ್ಕೆಯಾಗಿದ್ದಾರೆ. ಈ ಬಾರಿ ಸಿಇಟಿ ಬರೆದಿದ್ದ 10 ಮಂದಿ ಲಿಂಗತ್ವ ಅಲ್ಪಸಂಖ್ಯಾತರಲ್ಲಿ ಮೂವರು ಆಯ್ಕೆಯಾಗಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ನೇಮಕಾತಿಯಲ್ಲಿ ಶೇ.1ರಷ್ಟುಮೀಸಲಾತಿ ನೀಡಲಾಗಿತ್ತು. ಅಭ್ಯರ್ಥಿಗಳ ಮಾಹಿತಿಗಾಗಿ 1:1 ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಇಲಾಖಾ ವೆಬ್‌ಸೈಟ್‌ನಲ್ಲಿ schooleducation.kar.nic.inನಲ್ಲಿ ಪ್ರಕಟಿಸಲಾಗಿದ್ದು, ಇದರ ಆಧಾರದಲ್ಲಿ ಆಕ್ಷೇಪಣೆ ಸಲ್ಲಿಸಬಹುದು.