ಪಾಸಿಟಿವಿಟಿ ದರ ಶೇ.5ಕ್ಕಿಳಿದಾಗ ಶಾಲೆ ಆರಂಭ ಸೂಕ್ತ| ಈಗಲೇ ಶಾಲೆ ಆರಂಭಿಸಿದರೆ ಮಕ್ಕಳೇ ಕೊರೋನಾ ಸ್ಪ್ರೆಡರ್ಸ್| ಶಾಲೆ ಆರಂಭದ ಚರ್ಚೆಯಲ್ಲಿರುವ ಸರ್ಕಾರಕ್ಕೆ ತಜ್ಞರ ಎಚ್ಚರಿಕೆ| ರಾಜ್ಯದಲ್ಲಿ ಪ್ರಸ್ತುತ ಕೊರೋನಾ ಪಾಸಿಟಿವಿಟಿ ದರ ಶೇ.12, ಇದು ಶೇ.5ಕ್ಕೆ ಇದು ಇಳಿದರೆ ಸೋಂಕು ನಿಯಂತ್ರಣಕ್ಕೆ ಬಂದಂತೆ|
ಲಿಂಗರಾಜು ಕೋರಾ
ಬೆಂಗಳೂರು(ಅ.04): ರಾಜ್ಯದಲ್ಲಿ ಪ್ರಸ್ತುತ ಕೊರೋನಾ ಪಾಸಿಟಿವಿಟಿ ದರ ಶೇ.12ರಷ್ಟಿದೆ. ಇದು ಕನಿಷ್ಠ ಶೇ.5ಕ್ಕೆ ಬಂದರೆ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎಂದು ಪರಿಗಣಿಸಬಹುದು. ಆ ಹಂತ ಮುಟ್ಟುವವರೆಗೂ ಶಾಲೆ ಆರಂಭ ಬೇಡ. ಹಾಗೇನಾದರೂ ಶಾಲೆ ಆರಂಭಿಸಿದರೆ ಮಕ್ಕಳೇ ಸೂಪರ್ ಸ್ಪ್ರೆಡರ್‌ಗಳಾಗಿ ಮನೆ ಮನೆಗೂ ಕೊರೋನಾ ಹಬ್ಬುವ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾದೀತು! ಶಾಲೆ ಆರಂಭ ಚರ್ಚೆ ನಡೆದಿರುವ ಈ ಸಂದರ್ಭದಲ್ಲಿ ತಜ್ಞರು ಈ ಬಗ್ಗೆ ನೀಡುವ ಸ್ಪಷ್ಟ ಹಾಗೂ ನೇರ ಎಚ್ಚರಿಕೆಯಿದು.
undefined
ರಾಜ್ಯದಲ್ಲಿ ಮಾರ್ಚ್ ತಿಂಗಳಿಂದ ಇದುವರೆಗೂ ಮಕ್ಕಳು ಶಾಲೆ ಕಾಲೇಜಿಗೆ ಹೋಗದೆ ಮನೆಯಲ್ಲಿದ್ದರೂ 20 ವರ್ಷದೊಳಗಿನ ಸುಮಾರು 60 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಸುಮಾರು 60 ಮಕ್ಕಳು ಸಾವನ್ನಪ್ಪಿದ್ದಾರೆ. ಹಲವು ಶಿಕ್ಷಕರು ಕರೋನಾ ಸೋಂಕಿಗೆ ಸಾವನ್ನಪ್ಪಿದ್ದಾರೆ.
ಶಾಲಾ ಕಾಲೇಜು ಆರಂಭವಾಗದೇ ಈ ಪರಿಸ್ಥಿತಿಯಿದೆ. ರಾಜ್ಯದಲ್ಲಿ ಶಾಲಾ ಕಾಲೇಜುಗಳಲ್ಲಿ ಸುಮಾರು 90 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿದ್ದಾರೆ. ಅವರೆಲ್ಲ ಮನೆಯಿಂದ ಹೊರ ಬಂದರೇ ಸೋಂಕು ಮತ್ತಷ್ಟುವೇಗವಾಗಿ ಹೆಚ್ಚಾಗುವುದರಲ್ಲಿ ಸಂದೇಹ ಬೇಡ. ಈ ಮಕ್ಕಳೆ ಸೂಪರ್ ಸ್ಪ್ರೆಡರ್‌ಗಳಾಗಿ ಮನೆ ಮನೆಗೂ ಕೋವಿಡ್ ಕಾಲಿಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಸೋಂಕು ನಿಯಂತ್ರಣಕ್ಕೆ ಬರುವ ಮೊದಲೇ ಶಾಲಾ ಕಾಲೇಜು ಆರಂಭಿಸಿದರೆ ಅಪಾಯ ತಪ್ಪಿದ್ದಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ.
ರಾಜ್ಯದಲ್ಲಿ ಶಾಲಾ-ಕಾಲೇಜು ಪ್ರಾರಂಭ ಯಾವಾಗ? ಮಹತ್ವದ ಮಾಹಿತಿ ನೀಡಿದ ಸಚಿವರು
ಶಾಲೆ ತೆರೆದ ದೇಶ-ರಾಜ್ಯಗಳ ಉದಾಹರಣೆ ನೋಡಿ:
ಈಗಾಗಲೇ ಕೋವಿಡ್ ನಿಯಂತ್ರಣಕ್ಕೆ ಬರದಿದ್ದರೂ ಶಾಲೆಗಳನ್ನು ತೆರೆದು ಅಮೇರಿಕಾ ಸೇರಿದಂತೆ ವಿವಿಧ ದೇಶಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗಿದ್ದಾರೆ. ಅಮೆರಿಕದಲ್ಲೇ 5 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ತಗುಲಿದೆ. ಇನ್ನು, ನಮ್ಮ ರಾಜ್ಯದಲ್ಲೇ ನೋಡುವುದಾದರೆ ತೆಲಂಗಾಣದಲ್ಲಿ ಶಾಲೆಗಳನ್ನು ಆರಂಭಿಸಿದ ಕೆಲವೇ ದಿನಗಳಲ್ಲಿ 30ಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ತುಗಲಿ ಮತ್ತೆ ಬಾಗಿಲು ಹಾಕಲಾಗಿದೆ. ಇಷ್ಟೆಲ್ಲ ನಿದರ್ಶನಗಳು ನಮ್ಮ ಮುಂದೆ ಇರುವುದರಿಂದ ಸರ್ಕಾರ ಜನಾಭಿಪ್ರಾಯ ಪಡೆಯುವ ಜೊತೆಗೆ ಶಾಲೆ ಆರಂಭಿಸಿರುವೆಡೆ ಏನೇನಾಗುತ್ತಿದೆ ಎಂಬುದನ್ನು ಪರಿಶೀಲಿಸಬೇಕು ಎಂದು ತಜ್ಞರು ಒತ್ತಾಯಿಸುತ್ತಾರೆ.
ರಾಜ್ಯದಲ್ಲಿದ್ದಾರೆ 90 ಲಕ್ಷಕ್ಕೂ ಹೆಚ್ಚು ಮಕ್ಕಳು
ಸಾರ್ವಜನಿಕ ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ 1ರಿಂದ 12 ನೇತರಗತಿ ವರೆಗೆ ರಾಜ್ಯದಲ್ಲಿ ಸುಮಾರು 85ರಿಂದ 90 ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇನ್ನು ಪದವಿ, ಸ್ನಾತಕೋತ್ತರ ಪದವಿ ಎಲ್ಲವೂ ಸೇರಿದಂತೆ ಕೋಟ್ಯಾಂತರ ಸಂಖ್ಯೆಯಲ್ಲಿ ಮಕ್ಕಳಿದ್ದಾರೆ. ಇವರೆಲ್ಲರೂ ಇದುವರೆಗೂ ಮನೆಯಲ್ಲಿದ್ದಾರೆ. ಇದರ ನಡುವೆಯೂ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಸೆ.28ರ ವರೆಗೆ 10 ವರ್ಷದೊಳಗಿನ 19,652 ಮಕ್ಕಳು, 11ರಿಂದ 20 ವರ್ಷದೊಳಗಿನ 42,316 ಮಕ್ಕಳಿಗೆ ಸೋಂಕು ದೃಢಪಟ್ಟಿದೆ. ಇನ್ನು 10 ವರ್ಷದೊಳಗಿನ 20ಕ್ಕೂ ಹೆಚ್ಚು ಮಕ್ಕಳು, 11ರಿಂದ 20 ವರ್ಷದೊಳಗಿನ 38 ಮಕ್ಕಳು ಇದೇ ಅವಧಿಯಲ್ಲಿ ಮೃತಪಟ್ಟಿದ್ದಾರೆ.
ಸರ್ಕಾರವೇನೋ ತರಾತುರಿಯಲ್ಲಿ ಶಾಲೆಗಳನ್ನು ಆರಂಭಿಸುವ ನಿರ್ಧಾರ ಕೈಗೊಳ್ಳುವುದಿಲ್ಲ ಶಿಕ್ಷಕರು, ಶಿಕ್ಷಣ ಸಂಸ್ಥೆಗಳು, ಪೋಷಕರು, ತಜ್ಞರು ಎಲ್ಲರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳುವುದಾಗಿ ಹೇಳುತ್ತಿದೆ. ಆದರೆ, ಶಿಕ್ಷಣ ಇಲಾಖೆ ಮೂಲಗಳು ಹೇಳುವ ಪ್ರಕಾರ ಕೇಂದ್ರದ ಮಾರ್ಗಸೂಚಿಗಳನ್ನು ಚಾಚೂತಪ್ಪದೆ ಅನುಸರಿಸಿಕೊಂಡು ಬಂದಿರುವ ರಾಜ್ಯ ಸರ್ಕಾರ ಅ.15ರ ನಂತರ ರಾಜ್ಯದಲ್ಲೂ ಮೊದಲ ಹಂತದಲ್ಲಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ತೆರೆಯುವ ಗಂಭೀರ ಚಿಂತನೆಯಲ್ಲಿದೆ. ಒಂದೆಡೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಭಿಪ್ರಾಯ ಸಂಗ್ರಹ ಶುರು ಮಾಡಿದ್ದಾರೆ. ಮತ್ತೊಂದೆಡೆ ಈ ಹಿಂದೆ ನಿತ್ಯ ನೂರಿನ್ನೂರು ಕೋವಿಡ್ ಪ್ರಕರಣಗಳು ವರದಿಯಾಗುವಾಗ ಶಾಲೆ ಆರಂಭಿಸಬಾರದೆಂದು ಆಗ್ರಹಿಸುತ್ತಿದ್ದ ಕೆಲ ಶಿಕ್ಷಣ ತಜ್ಞರು ಈಗ ಇದ್ದಕ್ಕಿದ್ದಂತೆ ಶಾಲೆ ಆರಂಭಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಎಜುಕೇಷನ್ ಲಾಬಿಯ ಒತ್ತಡ ಹಾಗೂ ಪ್ರಭಾವವಿದೆ ಎಂದು ಹೇಳಲಾಗುತ್ತಿದೆ.
ಮಕ್ಕಳಿಗೆ ಅಪಾಯ
ರಾಜ್ಯದಲ್ಲಿ ಪ್ರಸ್ತುತ ಕೋವಿಡ್ 19 ಪಾಸಿಟಿವಿ ದರ ಶೇ.12ರಷ್ಟಿದೆ. ಅಂದರೆ ಕೋವಿಡ್ ಪರೀಕ್ಷೆ ನಡೆಸಿದ ಪ್ರತಿ 100 ಜನರಲ್ಲಿ 12 ಜನರಿಗೆ ಸೋಂಕು ದೃಢಪಡುತ್ತಿದೆ. ಈ ದರ ಶೇ.5ಕ್ಕಿಂತ ಕಡಿಮೆಯಾದಾಗ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎಂದು ಹೇಳಬಹುದು ಎಂದು ಜಯದೇವ ನಿರ್ದೇಶಕ ಹಾಗೂ ಟಾಸ್ಕ್ ಫೋರ್ಸ್ ಸದಸ್ಯ ಡಾ.ಸಿ.ಎನ್.ಮಂಜುನಾಥ್ ಅವರು ತಿಳಿಸಿದ್ದಾರೆ.
ಆರಂಭ ಸರಿ ಅಲ್ಲ
ಬೆಂಗಳೂರಷ್ಟೇ ಅಲ್ಲ ಈಗ ಬೇರೆ ಜಿಲ್ಲೆಗಳಲ್ಲೂ ಸೋಂಕು ಹೆಚ್ಚಾಗುತ್ತಿರುವ ಈ ಹಂತದಲ್ಲಿ ಶಾಲಾ ಕಾಲೇಜುಗಳನ್ನು ಆರಂಭಿಸುವುದು ಸರಿಯಲ್ಲ. ಅಕ್ಟೋಬರ್ ಕೊನೆಯಲ್ಲಿ ಸೋಂಕು ಮತ್ತು ಸೋಂಕಿತರ ಸಾವಿನ ಪ್ರಮಾಣ ಕಡಿಮೆಯಾಗುತ್ತಿದೆಯಾ ಎಂಬುದನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಸರ್ಕಾರದ ಟಾಸ್ಕ್ ಫೋರ್ಸ್ ಸದಸ್ಯ ಡಾ.ಗಿರಿಧರ ಬಾಬು ಅವರು ಹೇಳಿದ್ದಾರೆ.
ಶಾಲಾಮಕ್ಕಳಿಗೆ ಟ್ಯೂಶನ್ ಶಿಕ್ಷಕನಿಂದ ಕೊರೋನಾ!