ಪಠ್ಯ ಪರಿಷ್ಕರಣೆ ನೆಪದಲ್ಲಿ ಕನಕದಾಸರ ಪಠ್ಯಕ್ಕೆ ಕತ್ತರಿ: ಈಶ್ವರಾನಂದಪುರಿ ಶ್ರೀ ಅಸಮಾಧಾನ

By Girish GoudarFirst Published Jun 25, 2022, 12:30 PM IST
Highlights

*   ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಅಸಮಾಧಾನ ಹೊರಹಾಕಿದ ಈಶ್ವರಾನಂದಪುರಿ ಸ್ವಾಮೀಜಿ 
*  ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ಇರುವ ಪಠ್ಯವನ್ನೇ ಮುಂದುವರಿಸಿ
*  ಭಕ್ತರ ಮನಸ್ಸಿಗೆ ಆಗಿರುವ ನೋವನ್ನು ಸರಿಪಡಿಸಬೇಕಿದೆ 

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ(ಜೂ.25):  ನೂತನ ಪಠ್ಯ ಪರಿಷ್ಕರಣೆ ನೆಪದಲ್ಲಿ ಅನೇಕ ಸಾಹಿತಿಗಳು, ದಾಸ ಶ್ರೇಷ್ಠರ ಪಠ್ಯಗಳಿಗೆ ಕತ್ತರಿ ಹಾಕಲಾಗ್ತಿದೆ ಅದನ್ನು ಸರ್ಕಾರ ಕೂಡಲೇ ಸರಿಪಡಿಸಬೇಕು ಎಂದು ಅನೇಕ ಸ್ವಾಮೀಜಿಗಳ ಧ್ವನಿ ಎತ್ತಿದ್ದರು. ಅದರ ಸಾಲಿನಲ್ಲಿ ಇದೀಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಾಗಿನೆಲೆ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿಗಳು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

ಇಂದು(ಶನಿವಾರ) ಮಾಧ್ಯಮದರೊಂದಿಗೆ ಮಾತನಾಡಿದ ಶ್ರೀಗಳು, ಇತ್ತೀಚೆಗೆ ರೋಹಿತ್ ಚಕ್ರತೀರ್ಥ ಅವರ ಪಠ್ಯ ಪರಿಷ್ಕರಣೆ ಸಮಿತಿ ಜಾರಿಗೆ ಬಂದ ಮೇಲೆ ರಾಜ್ಯದಲ್ಲಿ ಅನೇಕ ಗೊಂದಲಗಳು ಶುರುವಾಗಿವೆ. ಅದ್ರಲ್ಲಂತೂ ಇತಿಹಾಸ ಪುರುಷರ ಸಮಗ್ರ ಮಾಹಿತಿಗಳಿಗೆ ಕತ್ತರಿ ಹಾಕುವ ಕೆಲಸವನ್ನು ಚಕ್ರತೀರ್ಥ ಅವರ ಸಮಿತಿ ಮಾಡಿಕೊಂಡು ಬಂದಿದೆ. ಅದರ ಸಾಲಿನಲ್ಲಿ ದಾಸ ಶ್ರೇಷ್ಠರಾಗಿರುವ ಕನಕದಾಸರ ಜೀವನ ಚರಿತ್ರೆಗೆ ಧಕ್ಕೆ ತರುವಂತಹ ಕೆಲಸವಾಗಿದೆ ಎಂದು ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು.

ಪಠ್ಯ ಪರಿಷ್ಕರಣೆ ವಿವಾದ: ಸಚಿವರ ಪ್ರತಿ ಆರೋಪಕ್ಕೂ ಬರಗೂರು ತಿರುಗೇಟು

2021-22 ನೇ ಸಾಲಿನಲ್ಲಿ ಬರುವ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಶ್ರೀ ಕನಕದಾಸರ ಭಕ್ತಿಪಂಥ ಹಾಗೂ ಜೀವನ ಚರಿತ್ರೆಯ ಕುರಿತು ಒಂದು ಪುಟದಷ್ಟು ಮಾಹಿತಿಯನ್ನು ನೀಡಲಾಗಿತ್ತು. ಆದ್ರೆ 2022-23 ನೇ ಸಾಲಿನಲ್ಲಿ ಆ ಪಠ್ಯಕ್ಕೆ ಕತ್ತರಿ ಹಾಕುವ ಮೂಲಕ ಒಂದು ಪುಟದಷ್ಟು ಇದ್ದ ಕನಕದಾಸರ ಜೀವನ ಚರಿತ್ರೆಯನ್ನು ಕೇವಲ ಒಂದು ಸಾಲಿಗೆ ಸೀಮಿತಗೊಳಿಸಿರೋದು ಖಂಡನೀಯ. ಪ್ರತಿಯೊಬ್ಬ ಕನಕದಾಸರ ಅಭಿಮಾನಿಗಳು ಹಾಗೂ ಭಕ್ತರ ಮನಸ್ಸಿನಲ್ಲಿ ಈ ವಿಷಯ ತುಂಬಾ ನೋವುಂಟು ಮಾಡಿದೆ ಅಂತ ಹೇಳಿದ್ದಾರೆ. 

ಪಠ್ಯ ವಿವಾದದಲ್ಲಿ ರಾಜಕೀಯಕ್ಕೆ ಯತ್ನ: ಸಿದ್ದು

ಯಾಕಂದ್ರೆ ಕನಕ ದಾಸರ ಬಗ್ಗೆ ಸ್ಪಷ್ಟ ಮಾಹಿತಿ ನೀಡದೇ ಕೇವಲ ಒಂದು ಸಾಲಿನಲ್ಲಿ ಮಾಹಿತಿ ಯಾವ ರೀತಿಯಲ್ಲಿ ಮಕ್ಕಳಿಗೆ ಶಿಕ್ಷಕರು ತಿಳಿಸಿತ್ತಾರೆ. ಯಾವ ಕಾರಣಕ್ಕೆ ಸರ್ಕಾರ ಈ ರೀತಿಯ ನಿರ್ಧಾರಗಳನ್ನು ಕೈಗೊಳ್ಳುವ ಸಮಿತಿಗೆ ಬಿಟ್ಟಿದೆ. ಮೇಲಾಗಿ ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯ ಪರಿಷ್ಕರಣೆಯಲ್ಲಿ ಸಾಕಷ್ಟು ಲೋಪದೋಷಗಳು ಆಗಿವೆ. ಕೂಡಲೇ ಶಿಕ್ಷಣ ಸಚಿವ ಬಿ‌.ಸಿ ನಾಗೇಶ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಲಂಕುಷವಾಗಿ ಚರ್ಚಿಸಿ ಸರಿಪಡಿಸುವ ಮೂಲಕ ಭಕ್ತರ ಮನಸ್ಸಿಗೆ ಆಗಿರುವ ನೋವನ್ನು ಸರಿಪಡಿಸಬೇಕಿದೆ ಅಂತ ಆಗ್ರಹಿಸಿದ್ದಾರೆ. 

16ನೇ ಶತಮಾನದಲ್ಲಿ ಸಾಮಾಜಿಕ ವೈರುದ್ಯಗಳ ವಿರುದ್ಧ, ಕಂದಾಚಾರಗಳ ವಿರುದ್ಧ, ಜಾತೀಯತೆಯನ್ನು ಹೋಗಲಾಡಿಸಲು ಬಹುದೊಡ್ಡ ಕೊಡುಗೆಯನ್ನು ನೀಡಿದವರು. ಕೀರ್ತನೆಗಳ ಮೂಲಕ ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕನಕದಾಸರ ಕುರಿತು ಮಾಹಿತಿಯಿಲ್ಲದೇ ಇರುವುದು ಎಷ್ಟು ಸರಿ. ಈ ಎಲ್ಲಾ ವಿಚಾರಗಳನ್ನು ತಾವು ಮನಗಂಡು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯವರಿಗೆ ಸೂಚನೆ ನೀಡಿ ಆಗಿರುವ ತಪ್ಪುಗಳನ್ನು ತಿದ್ದಿ ಕನಕದಾಸರನ್ನು ಕುರಿತು ಸರಿಯಾದ ಮಾಹಿತಿಯನ್ನು ಪಠ್ಯಪುಸ್ತಕದಲ್ಲಿ ನೀಡಬೇಕೆಂದು ಈ ಮೂಲಕ ತಿಳಿಯಬಯಸುತ್ತೇವೆ ಅಂತ ತಿಳಿಸಿದ್ದಾರೆ. 

ತಜ್ಞರಲ್ಲದ ರೋಹಿತ್ ಚಕ್ರತೀರ್ಥರ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ರದ್ದುಗೊಳಿಸಿ ಈಗಾಗಲೇ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಇರುವ ಪಠ್ಯವನ್ನೇ ಮುಂದುವರಿಸಲು ತಿಳಿಯ ಬಯಸುತ್ತೇವೆ ಎಂದು ಶ್ರೀಗಳು ಶಿಕ್ಷಣ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ. 
 

click me!