ಶಿಕ್ಷಣವು ಲಾಭ ಗಳಿಸುವ ವ್ಯಾಪಾರವಲ್ಲ: ಸುಪ್ರೀಂ ಕೋರ್ಟ್

By Gowthami KFirst Published Nov 8, 2022, 9:31 PM IST
Highlights

ಶಿಕ್ಷಣವು ಲಾಭ ಗಳಿಸುವ ವ್ಯವಹಾರವಲ್ಲ ಮತ್ತು ಬೋಧನಾ ಶುಲ್ಕವು ಯಾವಾಗಲೂ ಕೈಗೆಟುಕುವಂತಿರಬೇಕು ಎಂದು  ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

ನವದೆಹಲಿ (ನ.8): ಆಂಧ್ರಪ್ರದೇಶ ಸರ್ಕಾರವು ವೈದ್ಯಕೀಯ ಕಾಲೇಜುಗಳಲ್ಲಿನ ಬೋಧನೆಯ ವಾರ್ಷಿಕ ಶುಲ್ಕವನ್ನು 24 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಿದರ ವಿರುದ್ಧ ತನ್ನ ಅಭಿಪ್ರಾಯ ವ್ಯಕ್ತಪಡಿಸಿರುವ  ಸುಪ್ರೀಂ ಕೋರ್ಟ್ , ಶಿಕ್ಷಣವು ಲಾಭ ಗಳಿಸುವ ವ್ಯವಹಾರವಲ್ಲ ಮತ್ತು ಬೋಧನಾ ಶುಲ್ಕವು ಯಾವಾಗಲೂ ಕೈಗೆಟುಕುವಂತಿರಬೇಕು ಎಂದು ಹೇಳುವ ಮೂಲಕ ರಾಜ್ಯ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿದ ಆಂಧ್ರಪ್ರದೇಶ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ. ಈ ಮೂಲಕ  ಆಂದ್ರಪ್ರದೇಶದ ಹೈಕೋರ್ಟ್ ನಿರ್ಧಾರವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ  ನಾರಾಯಣ ವೈದ್ಯಕೀಯ ಕಾಲೇಜು ಮತ್ತು ಆಂಧ್ರಪ್ರದೇಶ ಸರಕಾರಕ್ಕೆ ಹಿನ್ನಡೆಯಾಗಿದೆ. ಮಾತ್ರವಲ್ಲ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ ಆರ್ ಷಾ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಅರ್ಜಿದಾರರಿಗೆ ಆರು ವಾರಗಳ ಅವಧಿಯಲ್ಲಿ ನ್ಯಾಯಾಲಯದ ನೋಂದಾವಣೆಯಲ್ಲಿ ಪ್ರಕರಣದ ವೆಚ್ಚವಾಗಿ 5 ಲಕ್ಷ ರೂ ಠೇವಣಿ ಇಡುವಂತೆ ಆದೇಶ ಹೊರಡಿಸಿದೆ.

ಶುಲ್ಕವನ್ನು ವಾರ್ಷಿಕ 24 ಲಕ್ಷಕ್ಕೆ ಹೆಚ್ಚಿಸುವುದು ಅಂದರೆ, ಮೊದಲು ನಿಗದಿಪಡಿಸಿದ ಶುಲ್ಕಕ್ಕಿಂತ ಬರೋಬ್ಬರಿ ಏಳು ಪಟ್ಟು ಹೆಚ್ಚು, ಇದು ಸಮರ್ಥನೀಯವಲ್ಲ. ಶಿಕ್ಷಣವು ಲಾಭ ಗಳಿಸುವ ವ್ಯಾಪಾರವಲ್ಲ. ಬೋಧನಾ ಶುಲ್ಕ ಯಾವಾಗಲೂ ಕೈಗೆಟುಕುವಂತಿರಬೇಕು ಎಂದು ಪೀಠ ಅಭಿಪ್ರಾಯಟ್ಟಿದೆ.

ಆಂಧ್ರಪ್ರದೇಶ ಪ್ರವೇಶ ಮತ್ತು ಶುಲ್ಕ ನಿಯಂತ್ರಣ ಸಮಿತಿಯ (ಖಾಸಗಿ ಅನುದಾನರಹಿತ ವೃತ್ತಿಪರ ಸಂಸ್ಥೆಗಳಲ್ಲಿ ನೀಡಲಾಗುವ ವೃತ್ತಿಪರ ಕೋರ್ಸ್‌ಗಳಿಗೆ) ನಿಯಮಗಳು, 2006ರ ನಿಬಂಧನೆಗಳನ್ನು ಪರಿಗಣಿಸಿ, ಸಮಿತಿಯ ಶಿಫಾರಸುಗಳು/ವರದಿಯಿಲ್ಲದೆ ಶುಲ್ಕವನ್ನು ಹೆಚ್ಚಿಸಲು/ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಆಂದ್ರ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. 

2017 ರ ಸೆಪ್ಟೆಂಬರ್ 6ರಂದು  ಸರ್ಕಾರಿ ಆದೇಶದ ಅಡಿಯಲ್ಲಿ ಸಂಗ್ರಹಿಸಲಾದ ಬೋಧನಾ ಶುಲ್ಕದ ಮೊತ್ತವನ್ನು ಮರುಪಾವತಿಸಲು ಆಂಧ್ರಪ್ರದೇಶ ಹೈಕೋರ್ಟ್ ಹೇಳಿರುವುದರದಲ್ಲಿ ಯಾವುದೇ ತಪ್ಪಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹೀಗಾಗಿ 2017 ರ ಸೆಪ್ಟೆಂಬರ್ 6,  ಸರ್ಕಾರಿ ಆದೇಶವನ್ನು ರದ್ದುಗೊಳಿಸಿರುವ ಮೂಲಕ ಹೈಕೋರ್ಟ್ ಸಂಪೂರ್ಣವಾಗಿ ಸಮರ್ಥನೆ ಒದಗಿಸಿದೆ ಎಂದು ನ್ಯಾಯಾಲಯದ ಪೀಠ ಸ್ಪಷ್ಟಪಡಿಸಿದೆ.

ಕರ್ನಾಟಕದಲ್ಲಿ ಸರ್ಕಾರಿ ಶಾಲಾ ದಾಖಲಾತಿ ಏರಿಕೆ, ಖಾಸಗಿ ಇಳಿಕೆ..!

ಬೋಧನಾ ಶುಲ್ಕವನ್ನು ನಿರ್ಧರಿಸುವಾಗ ಅಥವಾ ಪರಿಶೀಲಿಸುವಾಗ ವೃತ್ತಿಪರ ಸಂಸ್ಥೆಯ ಸ್ಥಳ, ವೃತ್ತಿಪರ ಕೋರ್ಸ್‌ನ ಸ್ವರೂಪ, ಲಭ್ಯವಿರುವ ಮೂಲಸೌಕರ್ಯಗಳು ಮತ್ತು ಅವುಗಳ ವೆಚ್ಚದಂತಹ ಹಲವಾರು ಅಂಶಗಳನ್ನು ಪ್ರವೇಶ ಮತ್ತು ಶುಲ್ಕ ನಿಯಂತ್ರಣ ಸಮಿತಿಯು ಪರಿಗಣಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಜೊತೆಗೆ ಕಾನೂನುಬಾಹಿರ ಸರ್ಕಾರಿ ಆದೇಶದ ಪ್ರಕಾರ  ಸಂಗ್ರಹಿಸಿದ ಮೊತ್ತವನ್ನು ಉಳಿಸಿಕೊಳ್ಳಲು ಕಾಲೇಜು ಆಡಳಿತ ಮಂಡಳಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಪೀಠ ಹೇಳಿದೆ.

CHITRADURGA: ವಸತಿ ಶಾಲಾ ಮಕ್ಕಳಿಗೆ ಸಿಎಂ ಕಿವಿಮಾತು, ಉನ್ನತ ಅಧಿಕಾರಿಗಳಾಗಿ ಎಂದು ಹಾರೈಕೆ

ಹೈಕೋರ್ಟ್ ಹೊರಡಿಸಿದ ನಿರ್ದೇಶನಗಳಿಗೆ ಸುಪ್ರೀಂ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಪೀಠ ಹೇಳಿದ್ದು. ಈ ಅವಲೋಕನಗಳೊಂದಿಗೆ, ಆಂಧ್ರಪ್ರದೇಶ ಹೈಕೋರ್ಟ್ ಆದೇಶದ ವಿರುದ್ಧ ವೈದ್ಯಕೀಯ ಕಾಲೇಜು ಸಲ್ಲಿಸಿದ ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

click me!