ಕೊರೋನಾದಿಂದಾಗಿ ಜನರು ಮೊದಲೇ ಆರ್ಥಿಕ ಸಮಸ್ಯೆಯಿಂದ ತತ್ತರಿಸಿ ಹೋಗಿದ್ದಾರೆ. ಇದರ ಮಧ್ಯೆ ಶುಲ್ಕ ವಸೂಲಿಗಿಳಿದ ಖಾಸಗಿ ಶಾಲೆಗಳಿಗೆ ಸಚಿವ ಸುರೇಶ್ ಕುಮಾರ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಚಾಮರಾಜನಗರ, (ಸೆ.07): ಒಂದು ಅವಧಿಯ (ಟರ್ಮ್) ಪ್ರವೇಶ ಶುಲ್ಕವನ್ನು ಮಾತ್ರ ವಿದ್ಯಾರ್ಥಿಗಳಿಂದ ಪಡೆಯಬೇಕು ಎಂದು ಖಾಸಗಿ ಶಾಲೆಗಳಿಗೆ ಸೂಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದರು.
ಇಂದು (ಸೋಮವಾರ) ಚಾಮರಾಜನಗರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್‌ನಿಂದ ಶಾಲೆಗಳು ಆರಂಭವಾಗಿಲ್ಲ. ಅನೇಕ ಖಾಸಗಿ ಶಾಲೆಗಳ ಶಿಕ್ಷಕರು ಕಷ್ಟದಲ್ಲಿದ್ದಾರೆ. ಹೀಗಾಗಿ, ಮಕ್ಕಳ ದಾಖಲಾತಿಗೆ ಅನುಮತಿ ನೀಡಿ, ಒಂದು ಅವಧಿಯ ಅಧಿಕೃತ ಶುಲ್ಕವನ್ನು ಮಾತ್ರ ಪಡೆಯುವಂತೆ ಸೂಚಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
undefined
ಶಾಲಾ-ಕಾಲೇಜು ಪ್ರಾರಂಭ ಯಾವಾಗ? ಸ್ಪಷ್ಟನೆ ಕೊಟ್ಟ ಸಚಿವ ಸುರೇಶ್ ಕುಮಾರ್
ಸಂಗ್ರಹಿಸಿದ ಶುಲ್ಕವನ್ನು ಶಿಕ್ಷಕರ ವೇತನಕ್ಕೆ ಪಾವತಿಸಲು ಬಳಸುವಂತೆ ತಿಳಿಸಲಾಗಿದೆ. ಹೆಚ್ಚಿನ ಶುಲ್ಕ ಪಡೆದರೆ, ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಖಾಸಗಿ ಶಾಲೆಗಳಿಗೆ ಖಡಕ್ ಎಚ್ಚರಿಕೆ ಕೊಟ್ಟರು.
ಇನ್ನು ವಿದ್ಯಾರ್ಥಿಗಳ ಅಡ್ಮೀಶನ್ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಸೆಪ್ಟೆಂಬರ್ 30ರೊಳಗೆ ದಾಖಲಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.