1ನೇ ಕ್ಲಾಸ್‌ ಆರಂಭದ ಕುರಿತು ಮಹತ್ವದ ಹೇಳಿಕೆ ಕೊಟ್ಟ ಸಚಿವ ನಾಗೇಶ್‌

By Kannadaprabha News  |  First Published Sep 3, 2021, 7:56 AM IST

*    ಸ್ಯಾನಿಟೈಸಿಂಗ್‌ ಮಾಡಿ, ಥರ್ಮಾಮೀಟರ್‌ ಖರೀದಿಸಿ
*   ಶಿಕ್ಷಣಾಧಿಕಾರಿಗಳಿಗೆ ಆಯುಕ್ತ ಅನ್ಬುಕುಮಾರ್‌ ತಾಕೀತು
*   ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ತರಗತಿಗಳು 
 


ಹಾವೇರಿ(ಸೆ.03): ಒಂದನೇ ತರಗತಿಯಿಂದ ಶಾಲೆಗಳ ಆರಂಭ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ. 

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿ, ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸುವಂತೆ ವಿದ್ಯಾರ್ಥಿಗಳು ಸೇರಿದಂತೆ ಪಾಲಕರ ಬೇಡಿಕೆ ಇದೆ. ಶಾಲೆಗಳಿಗೆ ಭೇಟಿ ಸಂದರ್ಭಗಳಲ್ಲಿ ಆನ್‌ಲೈನ್‌ ತರಗತಿಗಳಿಂದ ಏಕಾಗ್ರತೆ ಕಡಿಮೆಯಾಗಿದೆ. ಪೂರ್ಣ ಪ್ರಮಾಣದ ತರಗತಿ ಆರಂಭಿಸುವಂತೆ ಬೇಡಿಕೆ ಬಂದಿದೆ ಎಂದು ಹೇಳಿದ್ದಾರೆ. 

Tap to resize

Latest Videos

ಒಂದೂವರೆ ವರ್ಷದಿಂದ ಕೋವಿಡ್‌ ಕಾರಣ ಸ್ಥಗಿತಗೊಂಡಿದ್ದ ತರಗತಿಗಳ ಆರಂಭದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಸ್ಥಗಿತಗೊಂಡಿದ್ದ ಸೇತುಬಂಧ ಶೈಕ್ಷಣಿಕ ಕಾರ್ಯಕ್ರಮವನ್ನು ಪುನಃ ಆರಂಭಿಸಲಾಗುವುದು. ಖಾಸಗಿ ಶಾಲಾ ಶುಲ್ಕ ಸಮಸ್ಯೆಯನ್ನು ಶೀಘ್ರ ಸಭೆ ಕರೆದು ತೀರ್ಮಾನಿಸಲಾಗುವುದು. ಖಾಸಗಿ ಶಾಲಾ ಶುಲ್ಕ ನಿಗದಿ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ನುಡಿ​ದರು.

ಪಾಲಿಟೆಕ್ನಿಕ್ ಪ್ರವೇಶಾರ್ಥಿಗಳಿಗೆ ಗುಡ್ ನ್ಯೂಸ್, ದಿನಾಂಕ ವಿಸ್ತರಣೆ

6-8ನೇ ಕ್ಲಾಸ್‌ ಆರಂಭಕ್ಕೆ ಸಿದ್ಧತೆಗೆ ಸೂಚನೆ

ರಾಜ್ಯದಲ್ಲಿ ಸೆ. 6 ರಿಂದ 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಆರಂಭಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್‌ ಇಲಾಖೆಯ ಎಲ್ಲಾ ಜಿಲ್ಲಾ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

6ರಿಂದ 8ನೇ ತರಗತಿ ಮಕ್ಕಳಿಗೆ ಶಾಲಾರಂಭ ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ವಿಚಾರಗಳ ಬಗ್ಗೆ ಆಯುಕ್ತರು ಗುರುವಾರ ಎಲ್ಲಾ ಡಿಡಿಪಿಐ, ಬಿಇಒಗಳೊಂದಿಗೆ ವರ್ಚುವಲ್‌ ಸಭೆ ನಡೆಸಿದರು. ಎಲ್ಲ ಜಿಲ್ಲೆ ಮತ್ತು ತಾಲ್ಲೂಕು ಹಂತದ ಶಿಕ್ಷಣ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ನಿಗದಿತ ದಿನಾಂಕದಿಂದ 6ರಿಂದ 8ನೇ ತರಗತಿ ಆರಂಭಿಸಲು ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಕ್ರಮಗಳನ್ನು ಅನುಸರಿಸುವುದು ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚನೆ ನೀಡಿದರು.

ಶಾಲಾ ಸ್ವಚ್ಛತೆ, ಸ್ಯಾನಿಟೈಸಿಂಗ್‌ ಮಾಡಲು, ಶಾಲೆಗೆ ಹಾಜರಾಗುವ ಮಕ್ಕಳ ದೇಹದ ಉಷ್ಣತೆ ಪರಿಶೀಲನೆಗೆ ಥರ್ಮಾಮೀಟರ್‌ ಖರೀದಿ ಸೇರಿದಂತೆ ಅಗತ್ಯ ಸಿದ್ಧತೆಗೆ ಆಯಾ ಜಿಲ್ಲಾಡಳಿತ ದಿಂದ ಹಿಡಿದು ಗ್ರಾಮ ಪಂಚಾಯಿತಿ ವರೆಗೆ ಸ್ಥಳೀಯ ಸಂಸ್ಥೆಗಳ ಸಹಯೋಗ ಪಡೆದುಕೊಳ್ಳಬೇಕು. ಈಗಾಗಲೇ ಆ.23 ರಿಂದ ಆರಂಭವಾಗಿ ಸುಸೂತ್ರವಾಗಿ ನಡೆಯುತ್ತಿರುವ 9 ಮತ್ತು 10ನೇ ತರಗತಿ ರೀತಿಯಲ್ಲೇ 6ರಿಂದ 8ನೇ ತರಗತಿ ಮಕ್ಕಳಿಗೂ ಎಲ್ಲ ಸುರಕ್ಷಾ ಕ್ರಮಗಳೊಂದಿಗೆ ತರಗತಿ ಆರಂಭಿಸಲು ಕ್ರಮ ವಹಿಸುವಂತೆ ಸೂಚನೆ ನೀಡಿದ್ದಾರೆ.

ಸೆ.15 ವರ್ಗಾವಣೆ ಕೌನ್ಸೆಲಿಂಗ್‌:

ಶಿಕ್ಷಕರ ವರ್ಗಾವಣೆ ಸಮಸ್ಯೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದ್ದು, ವರ್ಗಾವಣೆ ಕೌನ್ಸೆಲಿಂಗ್‌ ಸೆ.15ರಂದು ಜಿಲ್ಲಾ ಮಟ್ಟದಲ್ಲಿ ನಡೆಯಲಿದೆ. 2019-2020ರಲ್ಲಿ ಕಡ್ಡಾಯ, ಹೆಚ್ಚುವರಿ ವರ್ಗಾವಣೆಗೊಂಡ ಶಿಕ್ಷಕರಿಗೆ ಮೊದಲ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಅಲ್ಲದೆ, ವರ್ಗಾವಣೆ ಬಯಸಿ ಹೊಸದಾಗಿ ಅರ್ಜಿ ಸಲ್ಲಿಸುವ ದಿನಾಂಕವನ್ನು ಸೆ.8ರ ವರೆಗೆ ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅದೇ ರೀತಿ, ಖಾಸಗಿ ಶಾಲೆಗಳಿಗೆ ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಅಡಿ ಶುಲ್ಕ ಮರುಪಾವತಿಯನ್ನು ಶೇ.93 ಪಾವತಿಸಿದೆ. ಜತೆಗೆ ಶಿಕ್ಷಕರಿಗೆ ನೀಡುವ ಆರ್ಥಿಕ ಪ್ಯಾಕೇಜ್‌ ಹಣ ಕೂಡ ಸಂದಾಯವಾಗಿದ್ದು, 15 ಸಾವಿರ ಶಿಕ್ಷಕರಿಗೆ ಪಾವತಿ ಬಾಕಿ ಇದೆ. ಸಿಬ್ಬಂದಿಗೂ ವರ್ಗಾವಣೆ ಪ್ರಕ್ರಿಯೆಯಲ್ಲಿದೆ. ಒಂದೆರಡು ದಿನದೊಳಗೆ ಹಣ ವರ್ಗಾವಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಆಯುಕ್ತರು ತಿಳಿಸಿದ್ದಾರೆ.
 

click me!