ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗದೆ ಪ್ರಬುದ್ಧ ನಾಗರಿಕರಾಗಿ ಬದುಕುವಂತಾಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುಂಡೇಗೌಡ ಸಲಹೆ.
ಮಡಿಕೇರಿ (ಆ.2) : ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗದೆ ಪ್ರಬುದ್ಧ ನಾಗರಿಕರಾಗಿ ಬದುಕುವಂತಾಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುಂಡೇಗೌಡ ಸಲಹೆ ಮಾಡಿದ್ದಾರೆ. ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫೀಲ್ಡ… ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ಸೋಮವಾರ ನಡೆದ ಡಾ.ಮಹಾಂತ ಶಿವಯೋಗಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗಾಂಜಾ ಹಾವಳಿ ಹೆಚ್ಚಳ ಹಿನ್ನೆಲೆ ಗೃಹ ಸಚಿವ ಜ್ಞಾನೇಂದ್ರ ರಾಜಿನಾಮೆ ನೀಡಲಿ
ಡಾ. ಮಹಾಂತ ಶಿವಯೋಗಿ(Dr.Mahanta Shivayogi) ಸ್ವಾಮೀಜಿ ಅವರು ಸಮಾಜದಲ್ಲಿರುವ ದುಶ್ಚಟಗಳನ್ನು ಹೋಗಲಾಡಿಸಲು ತಮ್ಮ ಜೀವಿತ ಅವಧಿಯಲ್ಲಿ ಸರ್ವ ಪ್ರಯತ್ನ ಮಾಡಿದರು. ದುಶ್ಚಟಗಳಿಗೆ ದಾಸರಾಗದೆ ಉತ್ತಮ ಬದುಕು ನಡೆಸಿಕೊಳ್ಳುವಂತಾಗಲು ಅರಿವು ಮೂಡಿಸಿದರು ಎಂದು ಹೇಳಿದರು. ಡಾ.ಮಹಾಂತ ಶಿವಯೋಗಿ ಅವರ ಜನ್ಮ ದಿನಾಚರಣೆಯನ್ನು ವ್ಯಸನಮುಕ್ತ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ದುಶ್ಚಟಗಳಿಂದ ದೂರವಿರುವಂತೆ ಸಮಾಜದಲ್ಲಿ ಸಾಕಷ್ಟುಅರಿವು ಮೂಡಿಸಿದರು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ತಿಳಿಸಿದರು.
ಉಪ ಪೊಲೀಸ್ ವರಿಷ್ಠಾಧಿಕಾರಿ ಗಜೇಂದ್ರ ಪ್ರಸಾದ್(Gajendra Prasad) ಅವರು ಮಾತನಾಡಿ ಯಾವುದೇ ರೀತಿಯ ವ್ಯಸನಕ್ಕೆ ತುತ್ತಾಗುವುದು ಒಳ್ಳೆಯದಲ್ಲ, ವಿದ್ಯಾರ್ಥಿಗಳು ಒಳ್ಳೆಯ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದರು. ಹಲವು ರೀತಿಯ ಚಟಗಳಿಗೆ ದಾಸರಾಗಿ ಅಪರಾಧ ಮೂಲಕ ಸಮಾಜದಲ್ಲಿ ಅಸುರಕ್ಷತೆ, ಅಭದ್ರತೆ ಉಂಟು ಮಾಡುತ್ತಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ವ್ಯಸನವು ಅಪಾಯಕಾರಿಯಾಗಿದೆ. ಆದ್ದರಿಂದ ಯುವಜನರು ಎಚ್ಚರ ವಹಿಸಬೇಕು ಎಂದು ಗಜೇಂದ್ರ ಪ್ರಸಾದ್ ಹೇಳಿದರು.
ಶಿವಮೊಗ್ಗ: ಡ್ರಗ್ಸ್ ನಶೆಯಲ್ಲಿ ತೇಲಾಡಿದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು!
ದುಶ್ಚಟಗಳಿಂದ ದೂರವಿದ್ದು, ಬದುಕುವ ಉದ್ದೇಶ ಮತ್ತು ಗುರಿ ತಲುಪಬೇಕು. ಯುವಜನರನ್ನು ಗುರಿಯಾಗಿಸಿಕೊಂಡು ವ್ಯಸನಕ್ಕೆ ತುತ್ತಾಗುವಂತೆ ಮಾಡಲಾಗುತ್ತಿದೆ. ಇದನ್ನು ಪೋಷಕರು ತಡೆಯಬೇಕು. ಸತ್ಯ ತಿಳಿಯುವಷ್ಟರಲ್ಲಿ ಮಕ್ಕಳ ಭವಿಷ್ಯ ಕೈಮೀರಿರುತ್ತದೆ ಎಂದು ಕಿವಿಮಾತು ಹೇಳಿದರು. ನಾಗರಿಕ ಸಮಾಜದಲ್ಲಿ ಯುವಜನರು ಉತ್ತಮ ಬದುಕು ಕಟ್ಟಿಕೊಳ್ಳುವಂತಾಗಬೇಕು. ರಾಷ್ಟ್ರದ ಪ್ರಗತಿಗೆ ಧಕ್ಕೆಯಾಗದಂತೆ ಗಮನಹರಿಸಬೇಕು. ಒಳ್ಳೆಯ ನಡತೆ ರೂಢಿಸಿಕೊಳ್ಳಬೇಕು ಎಂದು ಡಿವೈಎಸ್ಪಿ ಅವರು ವಿವರಿಸಿದರು.
ಯುವಜನರಲ್ಲಿ ಸಮಾಜ ಅಪಾರ ನಿರೀಕ್ಷೆ ಹೊಂದಿದೆ. ಅದನ್ನು ಉಳಿಸಿಕೊಳ್ಳಬೇಕು. ಯುವ ಸಮುದಾಯ ಪ್ರಗತಿಯತ್ತ ಮುನ್ನಡೆಯಬೇಕು. ವ್ಯಕ್ತಿತ್ವ ವಿಕಸನ ಬೆಳೆಸಿಕೊಳ್ಳಬೇಕು. ರಾಷ್ಟ್ರದ ಸಂಸ್ಕೃತಿ, ಸಂಸ್ಕಾರ, ಗುರಿ ಹೊಂದಿರಬೇಕು. ದುಶ್ಚಟಗಳಿಗೆ ತುತ್ತಾದಲ್ಲಿ ಇಡೀ ಕುಟುಂಬವೇ ಸರ್ವನಾಶವಾಗುತ್ತದೆ ಎಂದು ಎಚ್ಚರಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಅವರು ಮಾತನಾಡಿ ಯುವ ಜನರು ಯಾವುದೇ ವ್ಯಸನಕ್ಕೆ ತುತ್ತಾಗಬಾರದು. ವ್ಯಸನಕ್ಕೆ ತುತ್ತಾದಲ್ಲಿ ಅದರಿಂದ ಹೊರಬರುವುದು ಕಷ್ಟಸಾಧ್ಯ ಎಂದರು.
ಮನೋ ವೈದ್ಯರಾದ ಡೆವಿನ್ ಕರ್ಕಡ(Devin karkaw) ಅವರು ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ ಯುವಜನರು ಮದ್ಯ, ಮಾದಕ ವಸ್ತುಗಳಿಗೆ ತುತ್ತಾದರೆ ಭವಿಷ್ಯದಲ್ಲಿ ಖಿನ್ನತೆಗೆ ಒಳಗಾಗಬೇಕಾಗುತ್ತದೆ. ಆದ್ದರಿಂದ ಯಾವುದೇ ವ್ಯಸನಗಳಿಗೆ ತುತ್ತಾಗದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಬೇಕು ಎಂದರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯ ಅವರು ಮಾತನಾಡಿ ಹದಿಹರೆಯದ ವಿದ್ಯಾರ್ಥಿಗಳು ವ್ಯಸನಕ್ಕೆ ಒಳಗಾಗುತ್ತಾರೆ. ಇದರಿಂದ ಕೆಟ್ಟಗುಣಗಳನ್ನು ಅಳವಡಿಸಿಕೊಂಡಲ್ಲಿ ಸಮಾಜದ ಅಧಃ ಪತನಕ್ಕೆ ಕಾರಣರಾಗುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಎಚ್ಚರವಹಿಸಬೇಕು ಎಂದರು.
ಪ್ರತಿಯೊಬ್ಬರೂ ಆರೋಗ್ಯಯುತರಾಗಿರಲು ಮನಸ್ಸು ಮತ್ತು ದೇಹ ಶುದ್ಧವಾಗಿರಬೇಕು. ನಶೆಯ ಕೆಟ್ಟಪರಿಣಾಮಗಳು ಕುಟುಂಬವನ್ನು ಅನಾಥ ಮಾಡುತ್ತದೆ ಎಂದರು. ವಾರ್ತಾಧಿಕಾರಿ ಚಿನ್ನಸ್ವಾಮಿ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪನ್ಯಾಸಕರಾದ ರವೀಶ್ ನಿರೂಪಿಸಿದರು, ಚಿದಾನಂದ ವಂದಿಸಿದರು.