* ಪಿಯುಸಿ ಪರೀಕ್ಷೆ ಬಗ್ಗೆ ಶಿಕ್ಷಣ ಸುಧಾರಣೆಗಳ ಸಲಹಾಗಾರರಿಂದ ಸರ್ಕಾರಕ್ಕೆ ಮಹತ್ವದ ಸಲಹೆ
* ಶಿಕ್ಷಣ ಸುಧಾರಣೆಗಳ ಸಲಹಾಗಾರ ಪ್ರೊ.ಎಂ.ಆರ್.ದೊರೆಸ್ವಾಮಿ ಸರ್ಕಾರಕ್ಕೆ ಸಲಹೆ
* ಈ ಬಗ್ಗೆ ದೊರೆಸ್ವಾಮಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ
ಬೆಂಗಳೂರು, (ಮೇ.25): ರಾಜ್ಯ ಸರ್ಕಾರ ದ್ವೀತಿಯ ಪಿಯು ಪರೀಕ್ಷೆಯನ್ನು ನಡೆಸಬೇಕು. ಯಾವುದೇ ಕಾರಣಕ್ಕೂ ರದ್ದು ಮಾಡಬಾರದು ಎಂದು ಶಿಕ್ಷಣ ಸುಧಾರಣೆಗಳ ಸಲಹಾಗಾರ ಪ್ರೊ.ಎಂ.ಆರ್.ದೊರೆಸ್ವಾಮಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಈ ಬಗ್ಗೆ ದೊರೆಸ್ವಾಮಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಸಲಹೆ ನೀಡಿದ್ದು, ಪಿಯು ವಿದ್ಯಾರ್ಥಿಗಳು ವೃತ್ತಿ ಶಿಕ್ಷಣ ಸೇರಿದಂತೆ ಯಾವುದೇ ಮುಂದುವರಿದ ಶಿಕ್ಷಣವನ್ನು ಪಡೆಯಲು ಇದು ಮಾನದಂಡವಾಗಿರುತ್ತದೆ. ಇದರಿಂದ ಪಿಯು ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ ಎಂದಿದ್ದಾರೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿಸ್ನೇಹಿ 'ದೀಕ್ಷಾ'ಆಪ್ ಲೋಕಾರ್ಪಣೆ
ಪರೀಕ್ಷೆ ರದ್ದು ಮಾಡಿದರೆ ವಿದ್ಯಾರ್ಥಿಗಳು ಭಾರೀ ಪ್ರಮಾಣದ ಶೈಕ್ಷಣಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಇದರ ಜತೆಗೆ ಕೊರೋನಾ ವೇಳೆ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಬೇಕಾಗಿದೆ. ಪರೀಕ್ಷೆ ನಡೆಸಬೇಕೆಂಬ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ನಿರ್ಧಾರವನ್ನು ನಾನು ಬೆಂಬಲಿಸುವುದಾಗಿ ದೊರೆಸ್ವಾಮಿ ಹೇಳಿದ್ದಾರೆ.
ಕೊರೋನಾ ಹತೋಟಿಗೆ ಬಂದ ಮೇಲೆ ಪರೀಕ್ಷೆ ನಡೆಸುವುದು ಸೂಕ್ತ. ಪರೀಕ್ಷಾ ಕೇಂದ್ರಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಕೂಡ ಅಷ್ಟೇ ಮುಖ್ಯ. ಪಿಯು ಕಾಲೇಜುಗಳನ್ನೇ ಪರೀಕ್ಷಾ ಕೇಂದ್ರಗಳಾಗಿ ಪರಿವರ್ತಿಸಿ ಪರೀಕ್ಷೆ ನಡೆಸಬೇಕು. ಸಾಧ್ಯವಾದಲ್ಲಿ ಆನ್ಲೈನ್ನಲ್ಲಿ ಪರೀಕ್ಷೆ ಮಾಡಿ, ಆನ್ಲೈನ್ನಲ್ಲೇ ಮೌಲ್ಯಮಾಪನ ಮಾಡುವುದು ಸೂಕ್ತ. ಈ ಎಲ್ಲ ಅಂಶಗಳನ್ನು ಪರೀಕ್ಷೆ ನಡೆಸುವ ವೇಳೆಯಲ್ಲಿ ಪರಿಗಣಿಸುವುದು ಉತ್ತಮ ಎಂದು ದೊರೆಸ್ವಾಮಿ ಸಲಹೆ ನೀಡಿದ್ದಾರೆ.