ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದು: ಸಭಾಪತಿ ಹೊರಟ್ಟಿ ಪ್ರತಿಕ್ರಿಯೆ

By Kannadaprabha NewsFirst Published Apr 16, 2021, 7:50 AM IST
Highlights

ಪರೀಕ್ಷೆ ರದ್ದಾದರೆ ಕಲಿಕೆಯಿಂದ ಮಕ್ಕಳು ದೂರ, ಭವಿಷ್ಯ ಮಂಕು| ಮಕ್ಕಳ ಹಿತದೃಷ್ಟಿ, ಉಜ್ವಲ ಭವಿಷ್ಯ ದೃಷ್ಟಿಯಿಂದ ಚಿಂತನೆ ಮಾಡುವುದು ಪ್ರತಿಯೊಬ್ಬರ ಸಾಮಾಜಿಕ ಹೊಣೆ ಹಾಗೂ ಜವಾಬ್ದಾರಿ| ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ಗೆ ಬಸವರಾಜ ಹೊರಟ್ಟಿ ಪತ್ರ| 

ಬೆಂಗಳೂರು(ಏ.16): ಮಕ್ಕಳ ಕಲಿಕಾ ಹಾಗೂ ಭವಿಷ್ಯದ ದೃಷ್ಟಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಡೆಸಬೇಕು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ ಕೊರೋನಾ ಸೋಂಕು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಎಸ್‌ಎಸ್‌ಎಲ್‌ ಪರೀಕ್ಷೆ ನಡೆಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಪರ-ವಿರೋಧ ಚರ್ಚೆಗಳು ಮುನ್ನೆಲೆಗೆ ಬಂದಿದ್ದು, ಯಾವುದೇ ಕಾರಣಕ್ಕೂ ಪರೀಕ್ಷೆ ನಿಲ್ಲಿಸಬಾರದು ಎಂದು ಹೊರಟ್ಟಿ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರಿಗೆ ಬರೆದಿರುವ ಪತ್ರದಲ್ಲಿ ಸಲಹೆ ನೀಡಿದ್ದಾರೆ.

CBSE ಎಕ್ಸಾಮ್ ರದ್ದು ಬೆನ್ನಲ್ಲೇ SSLC, PUC ಪರೀಕ್ಷೆ ಕುರಿತು ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನೆ

ಪರೀಕ್ಷೆಗಳನ್ನು ಮುಂದೂಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಕಾಲ-ಕಾಲಕ್ಕೆ ನಿಗದಿಯಾದ ಪರೀಕ್ಷೆಗಳನ್ನು ನಡೆಸುವುದರಿಂದ ಮಕ್ಕಳಿಗೆ ಕಲಿಕೆಯ ಬಗ್ಗೆ ಹಾಗೂ ಶಾಲೆಯ ಬಗ್ಗೆ ಒಳ್ಳೆ ಬಾಂಧವ್ಯ ಬೆಳೆಯುತ್ತದೆ. ಕೊರೋನಾ ರೋಗ ಎಲ್ಲಾ ಹಂತದಲ್ಲಿದ್ದಾಗ ರಾಜ್ಯದಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಮಕ್ಕಳಿಗೆ ಪರೀಕ್ಷೆ ಮಾನಸಿಕವಾಗಿ ಒಂದು ನೆಮ್ಮದಿಯನ್ನು ಕಲ್ಪಿಸುತ್ತದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡಿದರೆ ಮಕ್ಕಳು ಕಲಿಕೆಯಿಂದ ದೂರ ಸರಿಯುತ್ತಾರೆ. ಕಲಿಕೆಯ ಬಗ್ಗೆ ಆಸಕ್ತಿಗಳನ್ನು ಕಳೆದುಕೊಳ್ಳುವಂತಾಗುತ್ತದೆ ಎಂದಿದ್ದಾರೆ.

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಂದಿನ ಎಲ್ಲಾ ಚಟುವಟಿಕೆಗಳಿಗೆ ಕೇಂದ್ರೀಕೃತವಾಗಿರುತ್ತದೆ. ಪರೀಕ್ಷೆಗಳನ್ನು ಕೋವಿಡ್‌-19ನ ಎಲ್ಲಾ ನಿಯಮಾವಳಿಗಳನ್ನು ಪಾಲಿಸಿ ನಡೆಸುವಂತಾಗಬೇಕು. ಸರ್ಕಾರ ಈ ನಿಟ್ಟಿನಲ್ಲಿ ಮಕ್ಕಳನ್ನು ಸಂರಕ್ಷಿಸುವ ಬಗ್ಗೆ ಕಟ್ಟುನಿಟ್ಟಿನ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. ಖಾಸಗಿ ಸಂಸ್ಥೆಗಳಲ್ಲಿ ಆಡಳಿತ ಮಂಡಳಿಗೆ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸುವ ಬಗ್ಗೆ ಸೂಕ್ತ ತರಬೇತಿ ನೀಡಬೇಕು. ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ತಾವು ಒಂದು ಗಟ್ಟಿನಿರ್ಧಾರ ತೆಗೆದುಕೊಂಡು ನಿಯಮಗಳ ಪ್ರಕಾರ ಪರೀಕ್ಷೆ ನಡೆಸಬೇಕು. ಯಾವುದೇ ಕ್ರಮ ವಹಿಸಿದರೂ ಸಹ ಜನರ ಪರ ವಿರೋಧ ಅಭಿಪ್ರಾಯಗಳು ಇದ್ದೇ ಇರುತ್ತವೆ. ಮಕ್ಕಳ ಹಿತದೃಷ್ಟಿ, ಉಜ್ವಲ ಭವಿಷ್ಯ ದೃಷ್ಟಿಯಿಂದ ಚಿಂತನೆ ಮಾಡುವುದು ಪ್ರತಿಯೊಬ್ಬರ ಸಾಮಾಜಿಕ ಹೊಣೆ ಹಾಗೂ ಜವಾಬ್ದಾರಿ. ಹೀಗಾಗಿ ಯಾವುದೇ ರೀತಿಯಿಂದ ಯೋಚಿಸದೇ ನಿಯಮಾನುಸಾರ ಯಥಾ ಪ್ರಕಾರ ಪರೀಕ್ಷೆ ನಡೆಸಬೇಕು ಎಂದು ಹೊರಟ್ಟಿ ಹೇಳಿದ್ದಾರೆ.
 

click me!