ಸಿಎಸ್‌ಆರ್‌ ನಿಧಿಯಿಂದ ಪಬ್ಲಿಕ್‌ ಶಾಲೆಗಳ ಅಭಿವೃದ್ಧಿ: ಸಚಿವ ಮಧು ಬಂಗಾರಪ್ಪ

By Kannadaprabha News  |  First Published Jun 21, 2024, 9:55 PM IST

ಖಾಸಗಿ ಸಂಸ್ಥೆಗಳ ನೆರವಿನೊಂದಿಗೆ ರಾಜ್ಯದಲ್ಲಿ ಕಾರ್ಪೋರೇಟ್‌ ಸೋಶಿಯಲ್‌ ರೆಸ್ಪಾನ್ಸಿಬಿಲಿಟಿ (ಸಿಎಸ್‌ಆರ್) ನಿಧಿ ಮೂಲಕ ಕರ್ನಾಟಕ ಪಬ್ಲಿಕ್‌ ಶಾಲೆ ಸ್ಥಾಪನೆ, ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.


ಬೆಂಗಳೂರು (ಜೂ.21): ಖಾಸಗಿ ಸಂಸ್ಥೆಗಳ ನೆರವಿನೊಂದಿಗೆ ರಾಜ್ಯದಲ್ಲಿ ಕಾರ್ಪೋರೇಟ್‌ ಸೋಶಿಯಲ್‌ ರೆಸ್ಪಾನ್ಸಿಬಿಲಿಟಿ (ಸಿಎಸ್‌ಆರ್) ನಿಧಿ ಮೂಲಕ ಕರ್ನಾಟಕ ಪಬ್ಲಿಕ್‌ ಶಾಲೆ ಸ್ಥಾಪನೆ, ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ರಾಜ್ಯದ ಗ್ರಾಮೀಣ ಭಾಗದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭಿಸುವ ಕುರಿತಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಧು ಬಂಗಾರಪ್ಪ, ಗ್ರಾಮೀಣ ಭಾಗದಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಸ್ಥಾಪಿಸುವ ಮತ್ತು ಅಭಿವೃದ್ಧಿಪಡಿಸುವ ಕುರಿತು ಬಜೆಟ್‌ನಲ್ಲಿ ಘೋಷಿಸಲಾಗಿದೆ. 

ಯಾವ್ಯಾವ ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನಾಗಿ ಅಭಿವೃದ್ಧಿ ಮಾಡಬೇಕು ಎಂದು ಶಾಲೆಗಳನ್ನು ಆಯ್ಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದರು. ಶಾಲೆಗಳನ್ನು ಆಯ್ಕೆ ವಿಚಾರವನ್ನು ಆಯಾ ಕ್ಷೇತ್ರದ ಶಾಸಕರ ಗಮನಕ್ಕೆ ತರುವಂತೆ ತಿಳಿಸಲಾಗಿದೆ. ಶಾಲಾ ಕಟ್ಟಡಗಳ ಸದೃಢತೆ, ಮಕ್ಕಳ ಸಂಖ್ಯೆ 700ರಿಂದ 1,200 ಇದ್ದರೆ ಅಂತಹ ಶಾಲೆಗಳನ್ನು ಆಯ್ಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ನಮ್ಮ ಇಲಾಖೆಯಿಂದ ಈಗಾಗಲೇ 500 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಸಿಎಸ್‌ಆರ್‌ ನಿಧಿಯಲ್ಲಿ ಶಾಲೆಗಳನ್ನು ಅಭಿವೃದ್ಧಿ ಮಾಡುವ ಬಗ್ಗೆಯೂ ಚರ್ಚಿಸಲಾಗಿದೆ. ಇನ್ನೊಂದು ವಾರದಲ್ಲಿ ಮತ್ತೊಮ್ಮೆ ಸಭೆ ನಡೆಸಿ ಎಲ್ಲ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

Tap to resize

Latest Videos

undefined

57ರ ಹರೆಯದಲ್ಲೂ ಬಾವಿಯಲ್ಲಿ 2 ಗಂಟೆ ಪವನ್‌ ಕುಮಾರ್‌ ವಳಕೇರಿ ಜಲಯೋಗ!

ಒಳ್ಳೆ ಪ್ರಜೆಯಾಗಲು ಶಿಕ್ಷಣ ಮುಖ್ಯ: ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವ ಸುಮಾರು 76 ಸಾವಿರ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ, ಬಿಸಿಯೂಟ, ಸಮವಸ್ತ್ರ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವ ಜೊತೆಗೆ ಹೊಸ ಪರೀಕ್ಷಾ ಯೋಜನೆ ಜಾರಿಗೆ ತರಲು ಶ್ರಮಿಸುತ್ತಿರುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಬ್ಯಾರಿ ಸೌಹಾರ್ದ ಭವನದಲ್ಲಿ ಆಯೋಜಿಸಿದ್ದ ‘ಬ್ಯಾರಿಸ್‌ ಸಹಸಂಘ ಸಂಸ್ಥೆಗಳ ಸಮ್ಮೀಳನ’ದಲ್ಲಿ ‘ಬ್ಯಾರಿ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಅಲ್ಪ ಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ಹಾಗೂ ಮೂಲಭೂತ ಸೌಲಭ್ಯಗಳ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಹೊಸ ಯೋಜನೆಗಳ ಮೂಲಕ ಸೂಕ್ತ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ದೇಶದ ಒಳ್ಳೆಯ ಪ್ರಜೆ ಎನಿಸಿಕೊಳ್ಳಲು ಶಿಕ್ಷಣದ ಅಗತ್ಯವಿದೆ, ಈ ನಿಟ್ಟಿನಲ್ಲಿ ತಳ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಬ್ಯಾರಿ ಸಂಸ್ಥೆಯ ಕಾರ್ಯ ಹೆಮ್ಮೆ ತರುವಂತದ್ದು. ಅಲ್ಲದೇ, ಶಿಕ್ಷಣ ವಂಚಿತರಿಗೆ ಶಿಕ್ಷಣ ಕೊಡಿಸಲು ಶ್ರಮಿಸಿದ ಹರೇಕಲ ಹಾಜಬ್ಬ ಹಾಗೂ ಬಡೀಲಾ ಹುಸೇನ್‌ರಂತಹ ಅಕ್ಷರ ದಾಸೋಹಿಗಳ ಸಾಧನೆ ಗುರುತಿಸಿ ಪ್ರೋತ್ಸಾಹ ನೀಡಬೇಕಿದೆ ಎಂದರು. ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್ ಮಾತನಾಡಿ, ಸಮಾಜದಲ್ಲಿ ಎಲ್ಲ ಸಮುದಾಯದವರನ್ನು ತೊಡಗಿಸಿಕೊಂಡಾಗ ಸಮ ಸಮಾಜ ಹಾಗೂ ವಿದ್ಯಾವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಮನುಷ್ಯನ ಶ್ರೀಮಂತಿಕೆ ತಾನು ಮಾಡುವ ಕೆಲಸ ಹಾಗೂ ಸಮಾಜ ಸೇವೆಯಲ್ಲಿರಬೇಕು ಎಂದು ಅಭಿಪ್ರಾಯಪಟ್ಟರು.

ದುರಹಂಕಾರ, ಸ್ವಾರ್ಥ ರಾಜಕಾರಣ ಶಾಶ್ವತವಲ್ಲ: ಶಾಸಕ ರಮೇಶ ಜಾರಕಿಹೊಳಿ

ಇದೇ ಸಂದರ್ಭದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಕುಗ್ರಾಮಗಳಲ್ಲಿ ನವ ಸಾಕ್ಷರತೆ ತರಬೇತಿ ಕೇಂದ್ರ ಸ್ಥಾಪನೆ ಹಾಗೂ ಮಾಹಿತಿ ಹಕ್ಕು ಕಾಯಿದೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಶಿಕ್ಷಣಕ್ಕೆ ಪ್ರೊತ್ಸಾಹಿಸಿದ ಬಡೀಲಾ ಹುಸೇನ್‌ (ಪುರುಷ ವಿಭಾಗ) ಹಾಗೂ ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ ಮೈಮುನಾ ಮತ್ತು ಮರ್ಜೀನಾ (ಮಹಿಳಾ ವಿಭಾಗ) ಅವರಿಗೆ ‘ವರ್ಷದ ಬ್ಯಾರಿ ಪ್ರಶಸ್ತಿ’ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ಬ್ಯಾರಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕೃರಿಸಲಾಯಿತು.

click me!