ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆ ರದ್ಧತಿ ಅನಿವಾರ್ಯ

By Kannadaprabha NewsFirst Published Jun 2, 2021, 7:16 AM IST
Highlights

*ಕೇಂದ್ರ ಸರ್ಕಾರ ಸಿಬಿಎಸ್‌ಇ ಪರೀಕ್ಷೆ ರದ್ದು ಗೊಳಿಸಿದ ಹಿನ್ನೆಲೆ
* 3ನೇ ಅಲೆ: ಮಕ್ಕಳ ಮೇಲೆ ಹೆಚ್ಚು ದಾಳಿ ಸಾಧ್ಯತೆ ಎಂಬ ತಜ್ಞರ ಎಚ್ಚರಿಕೆ
* ಪರೀಕ್ಷೆ ನಡೆಸುವುದಾದರೆ ಮೊದಲು ಮಕ್ಕಳಿಗೆ 2 ಡೋಸ್‌ ಲಸಿಕೆ ನೀಡಿ ಎಂಬ ವರದಿ
 

ಬೆಂಗಳೂರು(ಜೂ.02): ಕೋವಿಡ್‌ ಆತಂಕದಿಂದಾಗಿ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಪಠ್ಯಕ್ರಮದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ವಿಚಾರದಲ್ಲೂ ರಾಜ್ಯ ಸರ್ಕಾರ ಸಿಬಿಎಸ್‌ಇ ಹಾದಿಯನ್ನೇ ಅನುಸರಿಸುವ ಬಹುತೇಕ ಸಾಧ್ಯತೆ ಇದೆ. ಆದರೆ, ಎಸ್ಸೆಸ್ಸಲ್ಸಿ ಪರೀಕ್ಷೆಗೆ ತುಸು ಕಾಲಾವಕಾಶ ಇರುವುದರಿಂದ ಪರಿಸ್ಥಿತಿ ನೋಡಿಕೊಂಡು ನಿರ್ಧರಿಸುವ ಸಂಭವವಿದೆ.

ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ, 12ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ವಿಚಾರದಲ್ಲಿ ಸಿಬಿಎಸ್‌ಇ ಯಾವ ನಿರ್ಧಾರ ಕೈಗೊಳ್ಳಬಹುದು ಎಂಬುದನ್ನು ಇಲಾಖೆ ಕೂಡ ಕಾಯುತ್ತಿತ್ತು. ಈಗ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯೇ ದ್ವಿತೀಯ ಪಿಯು ಪರೀಕ್ಷೆ ರದ್ದುಪಡಿಸಿರುವುದರಿಂದ ರಾಜ್ಯ ಸರ್ಕಾರ ಅದೇ ಹಾದಿ ಅನುಸರಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಇದಕ್ಕೆ ಪ್ರಮುಖ ಕಾರಣ, ಈಗಾಗಲೇ 3ನೇ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಅಲ್ಲದೆ, ಪರೀಕ್ಷೆ ನಡೆಸಲೇಬೇಕೆಂದರೆ ಪ್ರತಿ ವಿದ್ಯಾರ್ಥಿಗಳಿಗೂ ಮೊದಲು ಎರಡೂ ಡೋಸ್‌ ಲಸಿಕೆ ಹಾಕಿ ಆ ನಂತರ ಪರೀಕ್ಷೆ ನಡೆಸಿ ಎಂದು ತಜ್ಞರು ಈಗಾಗಲೇ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಪೋಷಕರೂ ಕೂಡ ತೀವ್ರ ಆತಂಕದಲ್ಲಿದ್ದಾರೆ. ಇದೆಲ್ಲವನ್ನೂ ಮೀರಿ ಸರ್ಕಾರ ಕೂಡ ಪರೀಕ್ಷೆ ನಡೆಸಿ ಏನಾದರೂ ಮಕ್ಕಳಿಗೆ ಸಮಸ್ಯೆಯಾದರೆ ಪೋಷಕರ ಕೆಂಗಣ್ಣಿಗೆ ಗುರಿಯಾಗಲು ಸಿದ್ಧವಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳೀಗೂ ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾಗುವುದು ಬಹುತೇಕ ಖಚಿತ ಎನ್ನುತ್ತವೆ ಇಲಾಖೆಯ ಉನ್ನತ ಮೂಲಗಳು.

CBSE 12ನೇ ಕ್ಲಾಸ್ ಪರೀಕ್ಷೆ ರದ್ದು ಬೆನ್ನಲ್ಲೇ ಪಿಯುಸಿ ಎಕ್ಸಾಂ ಬಗ್ಗೆ ಪ್ರತಿಕ್ರಿಯಿಸಿದ ಸಚಿವ

ಆದರೆ, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತುಸು ಕಾಲಾವಕಾಶ ಇರುವುದರಿಂದ ಪರಿಸ್ಥಿತಿ ನೋಡಿಕೊಂಡ ಈ ಬಗ್ಗೆ ತೀರ್ಮಾನಿಸುವ ಸಾಧ್ಯತೆಯಿದೆ. ಕಳೆದ ಬಾರಿ ಎಸ್ಸೆಸ್ಸೆಲ್ಸಿಯ ಪರೀಕ್ಷೆಯನ್ನು ರಾಜ್ಯ ಯಶಸ್ವಿಯಾಗಿ ನಡೆಸಿತ್ತು. ಈ ಬಾರಿಯೂ ಕರೋನಾ ಪ್ರಕರಣ ಹತೋಟಿಗೆ ಬಂದರೆ ಪರೀಕ್ಷೆ ನಡೆಸುವ ಚಿಂತನೆ ಇನ್ನೂ ಇದೆ. ಹೀಗಾಗಿ ಈಗಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿಲ್ಲ ಎನ್ನಲಾಗಿದೆ.

ಈ ಮಧ್ಯೆ, ಒಂದು ವೇಳೆ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಪಡಿಸಬೇಕಾಗಿ ಬಂದರೆ ವಿದ್ಯಾರ್ಥಿಗಳ ಕಲಿಕೆಯನ್ನು ಯಾವ ರೀತಿ ಮೌಲ್ಯಮಾಪನ ನಡೆಸುವುದು. ಯಾವ ರೀತಿ ಫಲಿತಾಂಶ ನೀಡುವುದು ಎಂಬ ಬಗ್ಗೆ ಕೂಡ ಈಗಾಗಲೇ ಪದವಿ ಪೂರ್ವ ಶಿಕ್ಷಣ ಇಲಾಖೆ ಚರ್ಚೆ ನಡೆಸಿತ್ತು ಎಂಬುದು ಗೊತ್ತಾಗಿದೆ.

ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಒಂದೆರಡು ದಿನಗಳಲ್ಲೇ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಸಿಬಿಎಸ್‌ಇ ಆದೇಶದ ಬೆನ್ನಲ್ಲೇ ರಾಜ್ಯ ಪದವಿ ಪೂರ್ವ ಶಿಕ್ಷಣ ನಿರ್ದೇಶಕರು ಕೂಡ ಬುಧವಾರ ಸಚಿವ ಸುರೇಶ್‌ ಕುಮಾರ್‌ ಅವರನ್ನು ಭೇಟಿ ಮಾಡಿ ಮುಂದಿನ ನಿರ್ಧಾರದ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
 

click me!