
ನವದೆಹಲಿ(ಏ. 13) ದೇಶದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರಿಸುತ್ತಿದೆ. ಆರೋಗ್ಯ ಸಚಿವಾಲಯ ಮಂಗಳವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,61,736 ಹೊಸ ಕರೋನಾ ಪ್ರಕರಣಗಳು ದಾಖಲಾಗಿವೆ. ಒಂದೇ ದಿನದಲ್ಲಿ ದೇಶದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು ಆತಂಕ ಹೆಚ್ಚಿಸಿದೆ.
ಸಿಬಿಎಸ್ಇ ಆಫ್ ಲೈನ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದೇಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ 6 ಲಕ್ಷ ಮಕ್ಕಳು ಸಿಬಿಎಸ್‌ಇ ಪರೀಕ್ಷೆ ಬರೆಯಲಿದ್ದಾರೆ. ಸುಮಾರು 1 ಲಕ್ಷ ಶಿಕ್ಷಕರು ಸಹ ಇದರ ಭಾಗವಾಗಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಇದು ಕರೋನಾದ ದೊಡ್ಡ ಹಾಟ್ ಸ್ಪಾಟ್ ಆಗಬಹುದು. ಹಾಗಾಗಿ ಪರೀಕ್ಷೆ ರದ್ದು ಮಾಡಬೇಕು ಈ ಮೂಲಕ ಅನಾಹುತ ತಪ್ಪಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಮತ್ತು ಮಹಾರಾಷ್ಟ್ರ ಸರ್ಕಾರ ಸಹ ಪರೀಕ್ಷೆ ರದ್ದು ಮಾಡಲು ಒತ್ತಾಯ ಮಾಡಿತ್ತು. ದೆಹಲಿ, ಮಹಾರಾಷ್ಟ್ರದಲ್ಲಿ ಕೊರೋನಾ ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಹೋಗಿದ್ದು ಜನ ಆತಂಕದಲ್ಲಿಯೇ ಇದ್ದಾರೆ.
ಕರ್ನಾಟಕದಲ್ಲಿಯೂ ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಟಫ್ ರೂಲ್ಸ್ ಮೊರೆ ಹೋಗಿದೆ. ರಾತ್ರಿ ವೇಳೆ ಕೊರೋನಾ ನಿಷೇಧಾಜ್ಞೆ ವಿಧಿಸಲಾಗಿದ್ದು ವಾರಾಂತ್ಯದ ಲಾಕ್ ಡೌನ್ ಗೂ ಚಿಂತನೆ ನಡೆದಿದೆ.