* ಕುಕನೂರು ತಾಲೂಕಿನ ಇಟಗಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿ
* ಕೋವಿಡ್ ಕೇರ್ ಸೆಂಟರ್‌ನಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ
* ಪರೀಕ್ಷೆ ಬರೆಯುತ್ತಿರುವ 8 ಲಕ್ಷ ವಿದ್ಯಾರ್ಥಿಗಳು
ಕೊಪ್ಪಳ(ಜು.19): ಜಿಲ್ಲಾ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಕೊರೋನಾ ಸೋಂಕಿತ ವಿದ್ಯಾರ್ಥಿಯೋರ್ವನಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟ ಘಟನೆ ಇಂದು(ಸೋಮವಾರ) ನಗರದಲ್ಲಿ ನಡೆದಿದೆ.
ನಿನ್ನೆ(ಭಾನುವಾರ) ಜಿಲ್ಲೆಯ ಕುಕನೂರ ತಾಲೂಕಿನ ತಳಕಲ್ ಗ್ರಾಮದ ವಿದ್ಯಾರ್ಥಿಗೆ ಕೊರೋನಾ ಸೋಂಕು ಧೃಡಪಟ್ಟಿತ್ತು. ಕುಕನೂರು ತಾಲೂಕಿನ ಇಟಗಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿ ಪರೀಕ್ಷೆ ಬರೆಯಬೇಕಿದ್ದ. ಆದ್ರೆ, ನಿನ್ನೆ ಸಂಜೆ
ವಿದ್ಯಾರ್ಥಿಗೆ ಕೋವಿಡ್ ಸೋಂಕು ಧೃಡಪಟ್ಟ ಹಿನ್ನಲೆಯಲ್ಲಿ ವಿದ್ಯಾರ್ಥಿಯನ್ನ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇರುವುದರಿಂದ ಜಿಲ್ಲಾ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ.
ಇಂದಿನಿಂದ SSLC ಪರೀಕ್ಷೆ: ಮಕ್ಕಳಿಗೆ ಆಲ್ ದಿ ಬೆಸ್ಟ್, ಸುರಕ್ಷತೆ ಮರೆಯದಿರಿ!
ಪರೀಕ್ಷೆ ಬರೆಯುತ್ತಿರುವ 8 ಲಕ್ಷ ವಿದ್ಯಾರ್ಥಿಗಳು
ಈ ಬಾರಿ ರಾಜ್ಯದಲ್ಲಿ ಒಟ್ಟು 8 ಲಕ್ಷದ 76 ಸಾವಿರದ 581 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬಾಲಕರು 4 ಲಕ್ಷದ 72 ಸಾವಿರ 643, ಬಾಲಕಿಯರು 4 ಲಕ್ಷದ 3 ಸಾವಿರದ 938, ಪ್ರೆಶರ್ಸ್ ವಿದ್ಯಾರ್ಥಿಗಳು 7 ಲಕ್ಷದ 83 ಸಾವಿರದ 955 ವಿದ್ಯಾರ್ಥಿಗಳು, ಪುನಾವರ್ತಿತ ವಿದ್ಯಾರ್ಥಿಗಳು 977 ವಿದ್ಯಾರ್ಥಿಗಳು, ಖಾಸಗಿ ವಿದ್ಯಾರ್ಥಿಗಳು 21 ಸಾವಿರದ 817 ವಿದ್ಯಾರ್ಥಿಗಳು, ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು 9419 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ರಾಜ್ಯಾದ್ಯಂತ ಪರೀಕ್ಷೆ ಸುಗಮವಾಗಿ ನಡೆಸಲು ಒಟ್ಟು 4884 ಪರೀಕ್ಷಾ ಕೇಂದ್ರಗಳನ್ನ ಸ್ಥಾಪನೆ ಮಾಡಲಾಗಿದೆ. ಒಟ್ಟು 73 ಸಾವಿರದ 66 ಪರೀಕ್ಷಾ ಕೊಠಡಿಗಳನ್ನ ಬಳಸಿಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಒಟ್ಟು ಎರಡು ದಿನಗಳ ಕಾಲ SSLC ಪರೀಕ್ಷೆ ನಡೆಯಲಿದೆ. ಈ ಬಾರಿ ಪರೀಕ್ಷೆಯಲ್ಲಿ ಬದಲಾವಣೆ ಮಾಡಲಾಗಿದ್ದು, KPSC ಮಾದರಿಯಲ್ಲಿ ಪರೀಕ್ಷೆ ನಡೆಯುತ್ತಿದೆ. ಒಟ್ಟು 40 ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು, ಮೂರು ಗಂಟೆ ಅವಧಿಯಲ್ಲಿ ಮೂರು ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಒಂದು ಕೊಠಡಿಯಲ್ಲಿ 10 ರಿಂದ 12 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಇನ್ನು 1 ಲಕ್ಷದ 30 ಸಾವಿರ ಸಿಬ್ಬಂದಿಗಳನ್ನ ಪರೀಕ್ಷಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ.