
ಬೆಂಗಳೂರು: ತಂತ್ರಜ್ಞಾನ ಲೋಕದ ಜಾಗತಿಕ ರಾಜಧಾನಿ ಎನಿಸಿಕೊಂಡಿರುವ ಸಿಲಿಕಾನ್ ಸಿಟಿ ಬೆಂಗಳೂರು ಮುಡಿಗೆ ಈಗ ಮತ್ತೊಂದು ಗರಿ ಸಿಗಲಿದೆ. ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ 'ಜವಾಬ್ದಾರಿಯುತ ಎಐ' (Responsible AI) ತಂತ್ರಜ್ಞಾನದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ದೇಶದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ.
ಬೆಂಗಳೂರಿನ ಮಾದಾವರದಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (BIEC) ಮಂಗಳವಾರ ನಡೆದ ಪ್ರತಿಷ್ಠಿತ ‘ಗೂಗಲ್ ಐಓ ಕನೆಕ್ಟ್ 2026’ (Google I/O Connect 2026) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಐತಿಹಾಸಿಕ ಘೋಷಣೆ ಮಾಡಿದ್ದಾರೆ. ಕೇವಲ ಒಂದು ವಾರದ ಹಿಂದಷ್ಟೇ ಅಂದರೆ ಜುಲೈ 8ರಂದು ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ನಡೆದ ಜಿಎಸ್‌ಸಿ (GCC) ಮುಖಂಡರ ಸಭೆಯಲ್ಲಿ ಎಐ ವಿವಿ ಸ್ಥಾಪನೆಯ ಚಿಂತನೆ ಇದೆ ಎಂಬ ವಿಚಾರವನ್ನು ಹಂಚಿಕೊಂಡಿದ್ದ ಸಿಎಂ ಡಿಕೆಶಿ, ಇದೀಗ ಕೇವಲ ಏಳೇ ದಿನಗಳಲ್ಲಿ ಅದನ್ನು ಅಧಿಕೃತ ಘೋಷಣೆ ಮಾಡುವ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಸರ್ಕಾರಕ್ಕೆ ಇರುವ ಬಗ್ಗೆ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ನೆರೆದಿದ್ದ ಜಾಗತಿಕ ಐಟಿ ತಜ್ಞರನ್ನುದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಜಗತ್ತಿನ ಅತ್ಯಂತ ಸುಂದರ ಹಾಗೂ ಬೃಹತ್ ತಂತ್ರಜ್ಞಾನದ ಇಕೋ ಸಿಸ್ಟಮ್ ನಮ್ಮ ಬೆಂಗಳೂರಿನಲ್ಲಿದೆ. ಇಂದು ಇಡೀ ಜಗತ್ತನ್ನು ಎಐ ಆಳುತ್ತಿದ್ದು, ಭವಿಷ್ಯದ ಪ್ರತಿಯೊಂದು ತಂತ್ರಜ್ಞಾನದ ಬೆಳವಣಿಗೆಗೆ ಎಐ ಒಂದೇ ಉತ್ತರವಾಗಿದೆ. ವಿಶ್ವಕ್ಕೆ ಬೇಕಾದ ಇಂತಹ ನಾವೀನ್ಯತೆಯ ತಂತ್ರಜ್ಞಾನದ ಉತ್ತರವನ್ನು ನಮ್ಮ ಬೆಂಗಳೂರು ನೀಡಲಿದೆ. ಕರ್ನಾಟಕವನ್ನು ಸಂಪೂರ್ಣ 'ಎಐ-ನೇಟಿವ್' ರಾಜ್ಯವನ್ನಾಗಿ ಪರಿವರ್ತಿಸುವುದು ನಮ್ಮ ಆಶಯವಾಗಿದೆ ಎಂದರು.
ಪ್ರಸ್ತಾವಿತ ಎಐ ವಿಶ್ವವಿದ್ಯಾಲಯವು ಕೇವಲ ಶಿಕ್ಷಣಕ್ಕೆ ಸೀಮಿತವಾಗಿರದೆ, ಶೈಕ್ಷಣಿಕ ಸಂಸ್ಥೆಗಳು, ಉದ್ಯಮ ರಂಗ ಹಾಗೂ ಸರ್ಕಾರದ ನಡುವೆ ಬಲವಾದ ಸಹಯೋಗವನ್ನು ಬೆಳೆಸಲಿದೆ. ಮುಂಬರುವ ದಿನಗಳಲ್ಲಿ ಪ್ರಮುಖ ವಲಯಗಳಲ್ಲಿ ಎಐ ತಂತ್ರಜ್ಞಾನವನ್ನು ಸಂಯೋಜಿಸಲು ಸರ್ಕಾರ ಬೃಹತ್ ಯೋಜನೆ ರೂಪಿಸಿದೆ.
ಎಐ ಸಂಶೋಧನೆ ಮತ್ತು ನವೀನ ಆವಿಷ್ಕಾರಗಳಿಗೆ ಒತ್ತು ನೀಡುತ್ತಿರುವ ಕರ್ನಾಟಕ ಸರ್ಕಾರ, ಎಐ ಕ್ಷೇತ್ರದಲ್ಲಿ ತನ್ನ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸುವಂತೆ ಜಾಗತಿಕ ತಂತ್ರಜ್ಞಾನ ದೈತ್ಯ 'ಗೂಗಲ್' ಸಂಸ್ಥೆಗೆ ಆಹ್ವಾನ ನೀಡಿದೆ. ರಾಜ್ಯದಲ್ಲಿ ಡೇಟಾ ಸೆಂಟರ್‌ಗಳ (Data Centers) ವಿಸ್ತರಣೆಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯ ಹಾಗೂ ಬೆಂಬಲವನ್ನು ಸರ್ಕಾರ ನೀಡಲಿದೆ. ಇದರೊಂದಿಗೆ ರಾಜ್ಯದ ಎಐ ಸ್ಟಾರ್ಟ್‌ಅಪ್‌ಗಳಿಗೆ ವಿಶೇಷ ಪ್ರೋತ್ಸಾಹ ಧನ ಹಾಗೂ ಸೌಲಭ್ಯಗಳನ್ನು ಒದಗಿಸುವ ಮೂಲಕ ಜಾಗತಿಕ ಕಂಪನಿಗಳನ್ನು ಕರ್ನಾಟಕದತ್ತ ಸೆಳೆಯಲು ಸರ್ಕಾರ ಮುಂದಾಗಿದೆ.
ಕಳೆದ ವಾರ ಬುಧವಾರ (ಜುಲೈ 8) ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ‘ಕ್ಯಾಟಲಿಸ್ಟ್ ಕನೆಕ್ಟ್’ ಸಭೆಯಲ್ಲಿ ಸಿಎಂ/ಡಿಸಿಎಂ ಅವರು ಜಾಗತಿಕ ಸಾಮರ್ಥ್ಯ ಕೇಂದ್ರಗಳ (GCC) ಮುಖಂಡರೊಂದಿಗೆ ಈ ಬಗ್ಗೆ ಪ್ರಾಥಮಿಕ ಚರ್ಚೆ ನಡೆಸಿದ್ದರು. ಇದೀಗ ಗೂಗಲ್ ವೇದಿಕೆಯಲ್ಲಿ ಇದನ್ನು ಅಧಿಕೃತವಾಗಿ ಪ್ರಕಟಿಸಿರುವುದು ಸರ್ಕಾರದ ತಾಂತ್ರಿಕ ವೇಗಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬೆಂಗಳೂರು ಕೇವಲ ಭಾರತದ ಐಟಿ ಹಬ್ ಆಗಿ ಉಳಿಯದೆ, ವಿಶ್ವದ ಪ್ರಮುಖ ಮತ್ತು ಜವಾಬ್ದಾರಿಯುತ ಎಐ ಆವಿಷ್ಕಾರಗಳ ಜಾಗತಿಕ ಕೇಂದ್ರವಾಗಬೇಕು ಎಂಬ ಸರ್ಕಾರದ ಸಂಕಲ್ಪಕ್ಕೆ ಈ ನೂತನ ಎಐ ವಿಶ್ವವಿದ್ಯಾಲಯವು ಭದ್ರ ಬುನಾದಿ ಹಾಕಲಿದೆ.
“ವಿಶ್ವದ ಐದು ಅಗ್ರ AI ನಗರಗಳಲ್ಲಿ ಒಂದಾಗಿ ಮತ್ತು ಭಾರತದ ಸುಮಾರು 40% ಯುನಿಕಾರ್ನ್ ಸ್ಟಾರ್ಟ್‌ಅಪ್‌ಗಳಿಗೆ ನೆಲೆಯಾಗಿರುವ ಬೆಂಗಳೂರು ಕರ್ನಾಟಕದ ಪ್ರತಿಭೆ, ನಾವೀನ್ಯತೆ ಪರಿಸರ ವ್ಯವಸ್ಥೆ ಮತ್ತು ಉದ್ಯಮಶೀಲತಾ ಮನೋಭಾವಕ್ಕೆ ಸಾಕ್ಷಿಯಾಗಿದೆ. ಈ ಸಾಧನೆಗಳ ಬಗ್ಗೆ ನಮಗೆ ಹೆಮ್ಮೆ ಇದ್ದರೂ, ನಮ್ಮ ದೃಷ್ಟಿಕೋನವು ತುಂಬಾ ದೊಡ್ಡದಾಗಿದೆ. ಕರ್ನಾಟಕವನ್ನು ಭಾರತದ AI ರಾಜಧಾನಿಯನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ. ಈ ದೃಷ್ಟಿಕೋನವನ್ನು ವಾಸ್ತವಕ್ಕೆ ತಿರುಗಿಸಲು, ನಾವು ಭಾರತದ ಮೊದಲ ಸರ್ಕಾರಿ ನೇತೃತ್ವದ AI ವಿಶ್ವವಿದ್ಯಾಲಯ ಮತ್ತು AI ನಾವೀನ್ಯತೆ ಕೇಂದ್ರವನ್ನು ಸ್ಥಾಪಿಸುತ್ತಿದ್ದೇವೆ. ನಾವು ಶಾಲಾ ಹಂತದಿಂದ AI ಶಿಕ್ಷಣವನ್ನು ಪರಿಚಯಿಸುತ್ತಿದ್ದೇವೆ ಮತ್ತು AI ಆರ್ಥಿಕತೆಗೆ ಶಕ್ತಿ ತುಂಬಲು ಕರ್ನಾಟಕದ ಕರಾವಳಿ ಮತ್ತು ಬೆಂಗಳೂರಿನ ಬಳಿ ಮುಂದಿನ ಪೀಳಿಗೆಯ ಹಸಿರು ದತ್ತಾಂಶ ಕೇಂದ್ರಗಳನ್ನು ನಿರ್ಮಿಸುತ್ತಿದ್ದೇವೆ. ನಮ್ಮ ಬೆಂಗಳೂರು ಮೀರಿದ ದೃಷ್ಟಿಕೋನದ ಮೂಲಕ, ಜಾಗತಿಕ ಅವಕಾಶಗಳು ನಮ್ಮ ರಾಜ್ಯದ ಪ್ರತಿಯೊಂದು ಪ್ರದೇಶದಾದ್ಯಂತ ಪ್ರತಿಭಾನ್ವಿತ ಯುವಜನರನ್ನು ತಲುಪುವಂತೆ ನಾವು ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿಯಲ್ಲಿ ವಿಶ್ವ ದರ್ಜೆಯ ತಂತ್ರಜ್ಞಾನ ಕೇಂದ್ರಗಳನ್ನು ಸಹ ರಚಿಸುತ್ತಿದ್ದೇವೆ. ತಂತ್ರಜ್ಞಾನವು ಎಂದಿಗೂ ಮಾನವೀಯತೆಯನ್ನು ಬದಲಾಯಿಸಬಾರದು ಎಂದು ನಾನು ದೃಢವಾಗಿ ನಂಬುತ್ತೇನೆ. ಜನರನ್ನು ಸಬಲೀಕರಣಗೊಳಿಸುವುದು ಮತ್ತು ಜೀವನವನ್ನು ಸುಧಾರಿಸುವುದು ಇದರ ನಿಜವಾದ ಉದ್ದೇಶವಾಗಿದೆ. ನಮ್ಮ ರೈತರಿಗೆ ಕನ್ನಡದಲ್ಲಿ AI-ಸಕ್ರಿಯಗೊಳಿಸಿದ ಕೃಷಿ ಸಲಹಾ ಸೇವೆಗಳನ್ನು ಒದಗಿಸುವುದರಿಂದ ಹಿಡಿದು ಗ್ರಾಮೀಣ ಆರೋಗ್ಯ ರಕ್ಷಣೆಯನ್ನು ಬಲಪಡಿಸುವುದು ಮತ್ತು ಶಿಕ್ಷಣವನ್ನು ಪರಿವರ್ತಿಸುವವರೆಗೆ, ತಂತ್ರಜ್ಞಾನವು ಪ್ರತಿಯೊಬ್ಬ ನಾಗರಿಕರಿಗೂ ಸೇವೆ ಸಲ್ಲಿಸುತ್ತದೆ ಎಂದು ದೃಡಪಡಿಸುತ್ತೇವೆ.”