500ಕ್ಕೆ 93 ಮಾರ್ಕ್ಸ್ ತೆಗೆದಿದ್ದೀ, ನೀನು ಪಾಸ್ ಆಗ್ತೀಯಾ, ಅವಮಾನಿಸಿದ ಶಿಕ್ಷಣಾಧಿಕಾರಿ, ಮನನೊಂದ ವಿದ್ಯಾರ್ಥಿನಿ ಆತ್ಮ*ಹತ್ಯೆ!

Published : Jan 30, 2026, 03:56 PM IST
 Chikkamagaluru student death

ಸಾರಾಂಶ

ಚಿಕ್ಕಮಗಳೂರಿನನಲ್ಲಿ, ಕಡಿಮೆ ಅಂಕ ಪಡೆದಿದ್ದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ನಿಂದನೆಗೆ ಒಳಗಾದ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮನನೊಂದು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆಯು ವಿದ್ಯಾರ್ಥಿಗಳ ಮೇಲಿನ ಅಂಕಗಳ ಒತ್ತಡ , ಅಧಿಕಾರಿಗಳ ವರ್ತನೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಅವರ ಮಾತುಗಳಿಂದ ಮನನೊಂದ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮ*ಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಈ ಘಟನೆ ಶಿಕ್ಷಣ ವಲಯ ಹಾಗೂ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮತ್ತು ಚರ್ಚೆಗೆ ಕಾರಣವಾಗಿದೆ.

ಮೃತ ವಿದ್ಯಾರ್ಥಿನಿ 10ನೇ ತರಗತಿಯ ಎರಡನೇ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಕೇವಲ 500ಕ್ಕೆ 93 ಅಂಕಗಳನ್ನು ಪಡೆದಿದ್ದಾಳೆ ಎನ್ನಲಾಗಿದೆ. ಇದನ್ನು ನೆಪ ಮಾಡಿಕೊಂಡು, ಬಿಇಒ ಅವರು ವಿದ್ಯಾರ್ಥಿನಿಯ ಮನೆಗೆ ತೆರಳಿ ಆಕೆಯನ್ನು ಗದರಿಸಿ, “ಇಷ್ಟು ಕಡಿಮೆ ಮಾರ್ಕ್ಸ್ ತೆಗೆದುಕೊಂಡು ನೀನು ಪಾಸ್ ಆಗ್ತೀಯಾ?” ಎಂದು ಅವಮಾನಿಸಿದರೆಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಆರೋಪಿಸಿದ್ದಾರೆ.

ಬಿಇಒ ಮನೆಗೆ ಬಂದ ಬಳಿಕ ಮಂಕಾದ ವಿದ್ಯಾರ್ಥಿನಿ

ಬಿಇಒ ಮನೆಗೆ ಬಂದು ‘ಬುದ್ಧಿ ಹೇಳಿ’ ಹೋದ ನಂತರದಿಂದ ವಿದ್ಯಾರ್ಥಿನಿ ತೀವ್ರವಾಗಿ ಮಂಕಾಗಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈಗಾಗಲೇ ಪರೀಕ್ಷೆಯಲ್ಲಿ ಫೇಲ್ ಆಗಿರುವ ಒತ್ತಡದ ಜೊತೆಗೆ, ಮೂರನೇ ಪೂರ್ವ ಸಿದ್ಧತಾ ಪರೀಕ್ಷೆಯಲ್ಲೂ ಫೇಲ್ ಆಗಿಬಿಡುವೆನೋ ಎಂಬ ಭಯ ಆಕೆಯನ್ನು ಮಾನಸಿಕವಾಗಿ ಕುಗ್ಗಿಸಿದೆ ಎನ್ನಲಾಗಿದೆ.

ಜನವರಿ 28ರಂದು ಆತ್ಮ*ಹತ್ಯೆಗೆ ಯತ್ನ

ಜನವರಿ 28ರಂದು ರಾತ್ರಿ, ಮನೆಯಲ್ಲಿದ್ದ ಕೀಲು ನೋವು ಹಾಗೂ ಉಳುಕಿಗೆ ಬಳಸುವ ಮಾತ್ರೆಗಳನ್ನು ಸೇವಿಸಿ ವಿದ್ಯಾರ್ಥಿನಿ ಆತ್ಮ*ಹತ್ಯೆಗೆ ಯತ್ನಿಸಿದ್ದಾಳೆ. ಸ್ಥಿತಿ ಗಂಭೀರಗೊಂಡ ಬಳಿಕ ಪೋಷಕರು ಆಕೆಯನ್ನು ತಕ್ಷಣ ಕಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಈ ಘಟನೆ ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಗಮನಾರ್ಹ ಸಂಗತಿಯೆಂದರೆ ಮಗಳ ಸಾವಿನ ಕುರಿತು ಪೋಷಕರು ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಿಸಿಲ್ಲ. ಇದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳು ಮತ್ತು ಪ್ರಶ್ನೆಗಳು ಎದ್ದಿವೆ.

ಸಾರ್ವಜನಿಕ ಆಕ್ರೋಶ: “ಮಾರ್ಕ್ಸ್‌ಗಿಂತ ಜೀವ ದೊಡ್ಡದಲ್ಲವಾ?”

ಘಟನೆಯ ಬಳಿಕ ಸ್ಥಳೀಯರು ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. “ಬದುಕಿಗೆ ಮಾರ್ಕ್ಸ್ ಅನಿವಾರ್ಯವಲ್ಲ. ಆದರೆ ಜೀವಕ್ಕೆ ಬೆಲೆ ಇಲ್ಲವಾ?” “ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕಾದ ಅಧಿಕಾರಿಗಳು ಅವಮಾನ ಮಾಡೋದು ಎಷ್ಟು ಸರಿ?” ಎಂಬ ಪ್ರಶ್ನೆಗಳು ಎದ್ದಿವೆ.

ಶಿಕ್ಷಣ ವ್ಯವಸ್ಥೆಯ ಮೇಲಿನ ಗಂಭೀರ ಪ್ರಶ್ನೆ

ಈ ದುರ್ಘಟನೆ, ವಿದ್ಯಾರ್ಥಿಗಳ ಮೇಲೆ ಅತಿಯಾದ ಅಂಕಗಳ ಒತ್ತಡ, ಶಿಕ್ಷಕರ ಮತ್ತು ಅಧಿಕಾರಿಗಳ ವರ್ತನೆ, ಹಾಗೂ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಗಂಭೀರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಅಂಕಗಳೇ ಬದುಕಿನ ಮಾನದಂಡ ಎಂಬ ಮನಸ್ಥಿತಿ ಎಷ್ಟು ಅಪಾಯಕಾರಿ ಎಂಬುದಕ್ಕೆ ಇದು ಕಟುವಾದ ಉದಾಹರಣೆಯಾಗಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ನಡೆದ ಈ ಘಟನೆ ಶಿಕ್ಷಣ ವ್ಯವಸ್ಥೆಯ ಮಾನವೀಯತೆ, ಜವಾಬ್ದಾರಿ ಮತ್ತು ಸಂವೇದನೆ ಕುರಿತು ಆತ್ಮಪರಿಶೀಲನೆಗೆ ಕರೆ ನೀಡುವಂತಾಗಿದೆ.

PREV
Read more Articles on
click me!

Recommended Stories

ಯುಜಿಸಿ ಗದ್ದಲ : ಸಂಯಮದ ನಡೆ ಅಗತ್ಯ
ವಿಶಿಷ್ಟ ವಿಭಿನ್ನ ವ್ಯಕ್ತಿತ್ವ ಭಾಸ್ಕರ-ಪರ್ವ! ಪತ್ರಕರ್ತರ ನೆಚ್ಚಿನ ಮೇಷ್ಟ್ರು ನಿವೃತ್ತಿ, ಬದುಕು ಬೆಳಗಿದ ಗುರುವಿಗೆ ಗುರುವಂದನೆ!