ಗದಗ: ಮೊರಾರ್ಜಿ ವಸತಿ ಶಾಲೆಯಲ್ಲಿ ವಾರಕ್ಕೊಮ್ಮೆ ಸ್ನಾನ, ಕೊಳೆತ ಕಾಯಿಪಲ್ಲೆ ಊಟಕ್ಕೆ ಬಳಕೆ..!

By Kannadaprabha News  |  First Published Aug 27, 2022, 10:01 PM IST

ಗದಗ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ‘ಮೊರಾರ್ಜಿ ದೇಸಾಯಿ ವಸತಿ ಶಾಲೆ’ ಮಕ್ಕಳಿಗೆ ಸರಿಯಾಗಿ ಊಟ, ನೀರೂ ಸಿಗುತ್ತಿಲ್ಲ.


ಮಹದೇವಪ್ಪ ಎಂ. ಸ್ವಾಮಿ

ಶಿರಹಟ್ಟಿ(ಆ.27):  ‘ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ’ ಎಂಬಂತೆ ವಸತಿ ನಿಲಯದಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಸರ್ಕಾರ ಕೋಟ್ಯಂತರ ಅನುದಾನ ನೀಡುತ್ತಿದ್ದರೂ ತಾಲೂಕಿನ ವಡವಿ ಗ್ರಾಮದಲ್ಲಿರುವ ಸದ್ಯ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ‘ಮೊರಾರ್ಜಿ ದೇಸಾಯಿ ವಸತಿ ಶಾಲೆ’ ಮಕ್ಕಳಿಗೆ ಸರಿಯಾಗಿ ಊಟ, ನೀರೂ ಸಿಗುತ್ತಿಲ್ಲ. ಪಾಠ ಕೇಳಲು ಸರಿಯಾದ ಕೊಠಡಿ ವ್ಯವಸ್ಥೆ ಇಲ್ಲ. ಬೆಡ್‌ ವ್ಯವಸ್ಥೆಯಿಲ್ಲ, ಕೊರೆಯುವ ಚಳಿ, ಸುರಿಯುತ್ತಿರುವ ಮಳೆಯಿಂದ ಸೋರುತ್ತಿರುವ ಕೊಠಡಿಗಳಲ್ಲಿಯೇ ಮಲಗಬೇಕು. ಕಾಯಂ ವಾರ್ಡನ್‌ ಇಲ್ಲ. ವಸತಿ ನಿಲಯದ ಪ್ರತಿ ಗೋಡೆ, ಕಂಬಗಳಲ್ಲಿ ಶಾರ್ಟ್‌ ಸರ್ಕ್ಯೂಟ್‌ ಆಗುತ್ತಿದ್ದು, ಮಕ್ಕಳು ಜೀವ ಭಯದಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

Latest Videos

undefined

ನೀರಿನ ವ್ಯವಸ್ಥೆ ಇಲ್ಲದ ಕಾರಣ ವಾರಕ್ಕೊಮ್ಮೆ ಸ್ನಾನ ಮಾಡುವುದು ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದೆ. ಕುಡಿಯಲು ಶುದ್ಧ ನೀರಿಲ್ಲ. ವಸತಿ ನಿಲಯ ಮಳೆ ಸುರಿದರೆ ಸಂಪೂರ್ಣ ಸೋರುತ್ತಿದ್ದು, ವಿದ್ಯಾರ್ಥಿಗಳು ಮನೆಯಿಂದ ತಂದ ಚಾಪೆ, ಹೊದಿಕೆಯಲ್ಲಿ ನೆಲದ ಮೇಲೆ ಮಲಗುವ ಸ್ಥಿತಿ ಇದೆ. ಸರಿಯಾಗಿ ನಿದ್ದೆ ಆಗದೇ ಮಕ್ಕಳು ಆಗಾಗ ಕಾಯಿಲೆ ಬೀಳುತ್ತಿವೆ.

ಈ ಮಹಿಳೆ ಮಕ್ಕಳನ್ನು ಶಾಲೆಗೆ ಕಳಿಸೋದೆ ಇಲ್ಲ!

ವಸತಿ ನಿಲಯದಲ್ಲಿ 6ರಿಂದ 10ನೇ ತರಗತಿವರೆಗೆ 85 ವಿದ್ಯಾರ್ಥಿನಿಯರು, 125 ವಿದ್ಯಾರ್ಥಿಗಳು ಸೇರಿ 210 ಮಕ್ಕಳು ಓದುತ್ತಿದ್ದು, ಕಾಯಂ ವಾರ್ಡನ್‌ ಇಲ್ಲ. ಇಲ್ಲಿನ ಅವ್ಯವಸ್ಥೆಗೆ ಬೇಸತ್ತು ಓದು ಮೊಟಕುಗೊಳಿಸಿ 35 ವಿದ್ಯಾರ್ಥಿಗಳು ಟಿಸಿ ಪಡೆದುಕೊಂಡು ಹೋಗಿದ್ದಾರೆ. 9, 10ನೇ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಡೆಸ್‌್ಕ ವ್ಯವಸ್ಥೆ ಇದ್ದು, 6,7, 8ನೇ ತರಗತಿಯವರು ನೆಲದ ಮೇಲೆ ಕುಳಿತು ಪಾಠ ಕೇಳುತ್ತಾರೆ.

ಕಣ್ಣೀರಿಡುತ್ತಿರುವ ಮಕ್ಕಳು

ಕೊರೆಯುವ ಚಳಿಯಲ್ಲಿ ವಾರಕ್ಕೊಮ್ಮೆ ತಣ್ಣೀರು ಸ್ನಾನ ಮಾಡಬೇಕು. ಬೆಳಗಿನ ಸಾಂಬಾರಿಗೆ ನೀರು ಹಾಕಿ ಕುದಿಸಿ ಸಾಯಂಕಾಲ ಮೃಷ್ಟಾನ ಎನ್ನುವಂತೆ ನೀಡುತ್ತಾರೆ. ಮೆನು ಪ್ರಕಾರ ಊಟ ನೀಡುತ್ತಿಲ್ಲ. ಕೊಳೆತ ತರಕಾರಿ ಊಟಕ್ಕೆ ಬಳಸಬೇಡಿ ಎಂದು ಅಂಗಲಾಚಿ ಬೇಡಿಕೊಂಡರೂ ಪಲಾವ್‌ಗೆ ಹಾಕಿ ಇದನ್ನೇ ತಿನ್ನಿ ಎನ್ನುತ್ತಾರಂತೆ. ಕೇಳಲು ಹೋದರೆ ಬೆದರಿಕೆ ಹಾಕಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ಪೌಷ್ಟಿಕಾಂಶ ಇಲ್ಲದ ಊಟ ಮಾಡಿ ಆರೋಗ್ಯ ಹದಗೆಡುತ್ತಿದೆ. ಜ್ವರ, ಕೆಮ್ಮು, ನೆಗಡಿ, ತಲೆನೋವು ಬಂದು ಆರೋಗ್ಯ ಹದಗೆಟ್ಟಾಗ ಹಾಗೂ ಮಳೆಯಿಂದ ವಸತಿ ನಿಲಯ ಸೋರಿ ರಾತ್ರಿ ಇಡೀ ಚಳಿಯಲ್ಲಿ ನಡುಗುತ್ತಾ, ನರಳುತ್ತಾ ಒದ್ದಾಡಿದರೂ ವಸತಿ ನಿಲಯದಲ್ಲಿ ಕನಿಷ್ಠ ವೈದ್ಯಕೀಯ ಸೌಲಭ್ಯ ಇಲ್ಲ. ಸರ್ಕಾರಿ ಸೌಲಭ್ಯಗಳೆಲ್ಲ ಇಲ್ಲಿ ಕಾಗದಕ್ಕೆ ಸೀಮಿತವಾಗಿವೆ. ಸಮಸ್ಯೆ ಹೇಳಿಕೊಳ್ಳಲು ನಮಗೆ ಭಯವಾಗುತ್ತದೆ ಎಂದು ವಿದ್ಯಾರ್ಥಿಗಳು ಕಣ್ಣೀರಿಡುತ್ತಾರೆ.

ವಸತಿ ನಿಲಯದ ಅವ್ಯವಸ್ಥೆ ಕುರಿತಾಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರಶಾಂತ ವರಗಪ್ಪನವರಗೆ ಮೌಖಿಕವಾಗಿ ಹಾಗೂ ಲಿಖಿತವಾಗಿ ಪತ್ರ ಬರೆದು ಗಮನ ಸೆಳೆದಿದ್ದೇನೆ. ವಸತಿ ನಿಲಯವನ್ನು ಶಿರಹಟ್ಟಿತಾಲೂಕಿನಿಂದ ಲಕ್ಷ್ಮೇಶ್ವರ ತಾಲೂಕಿಗೆ ಹೊಸ ಕಟ್ಟಡ ನೋಡಿ ಸ್ಥಳಾಂತರ ಮಾಡಲು ತಿಳಿಸಿದ್ದಾರೆ. ಮಕ್ಕಳ ಪಾಲಕರು ವಸತಿ ನಿಲಯದಲ್ಲಿನ ಅವ್ಯವಸ್ಥೆ, ಊಟಕ್ಕೆ ಕೊಳೆತ ತರಕಾರಿ ಬಳಕೆ ಬಗ್ಗೆ ಮಾಡುತ್ತಿರುವ ಆರೋಪ ಸತ್ಯವಾಗಿದೆ. ಕಾಯಂ ವಾರ್ಡನ್‌ ಇಲ್ಲದ್ದಕ್ಕೆ ಸಮಸ್ಯೆಯಾಗಿದೆ. ಸುಧಾರಿಸಿಕೊಳ್ಳುತ್ತೇವೆ ಅಂತ ಪ್ರಾಂಶುಪಾಲ ಸಿ.ಕೆ. ಪಾಟೀಲ ತಿಳಿಸಿದ್ದಾರೆ. 

ಮದರಸ ಶಾಲೆ ಮಕ್ಕಳನ್ನು ಬುದ್ದಿವಂತರಾಗಿಸುವ ಆಸೆ: ಸಚಿವ ನಾಗೇಶ್‌

ಅನೇಕ ತಿಂಗಳುಗಳಿಂದ ಇದೇ ವ್ಯವಸ್ಥೆ ಮುಂದುವರಿದಿದೆ. ಹಲವಾರು ಬಾರಿ ವಸತಿ ನಿಲಯಕ್ಕೆ ಭೇಟಿ ನೀಡಿ ನಮ್ಮ ಮಕ್ಕಳಿಗೆ ಆಗುತ್ತಿರುವ ತೊಂದರೆ, ಸಮಸ್ಯೆಗಳ ಕುರಿತು ಗಮನಕ್ಕೆ ತಂದರೂ ಸುಧಾರಿಸಿಕೊಂಡಿಲ್ಲ. ನಮ್ಮ ಮಕ್ಕಳಿಗೆ ಮನೆಯಲ್ಲಿ ಊಟಕ್ಕೆ ಬಡತನವಿಲ್ಲ. ನಾಲ್ಕು ಅಕ್ಷರ ಕಲಿಯಲಿ ಎಂದು ಇಲ್ಲಿ ಕಳುಹಿಸಿದ್ದು, ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅಧಿಕಾರಿಗಳು ವಸತಿ ನಿಲಯ ಸುಧಾರಣೆಗೆ ಮುಂದಾಗದಿದ್ದರೆ ನಮ್ಮ ಮಕ್ಕಳ ಟಿಸಿ ಪಡೆದುಕೊಂಡು ಹೋಗುತ್ತೇವೆ ಅಂತ ಪಾಲಕರಾದ ಬಸವರಾಜ ಬುರಡಿ, ವೆಂಕನಗೌಡ ಪಾಟೀಲ ತಿಳಿಸಿದ್ದಾರೆ. 

ಕೊಳೆತ ತರಕಾರಿ ತೋರಿಸಿ ಆಕ್ರೋಶ

ಪಾಲಕರು ಕೊಳೆತ ಕ್ಯಾಬೇಜ್‌, ಬದನೆಕಾಯಿ, ಟೊಮೆಟೊ, ಆಲೂಗಡ್ಡೆ, ಸವತೆ ಕಾಯಿ, ಡೊಣಗಾಯಿ ಕೈಯಲ್ಲಿ ಹಿಡಿದು ನಿತ್ಯ ಊಟಕ್ಕೆ ಬಳಕೆ ಮಾಡುತ್ತಿರುವುದನ್ನು ಪ್ರಾಚಾರ್ಯರೆದುರೇ ತೋರಿಸಿ ಆಕ್ರೋಶ ಹೊರ ಹಾಕಿದರು.
 

click me!